Lagunayakanahalli, Sidlaghatta : ರೈತನ ಭೂಮಿಯ ಫಲವತ್ತತೆಗೆ ಜಾನುವಾರುಗಳು ಅತೀ ಮುಖ್ಯವಾಗಿವೆ. ಚಿಕಿತ್ಸಾ ಶಿಬಿರಗಳು ಆರೋಗ್ಯ ವೃದ್ಧಿಸುವಲ್ಲಿ ಸಹಕಾರಿಯಾಗಲಿವೆ. ಹೆಚ್ಚಿದ ಪ್ಲಾಸ್ಟಿಕ್ ಬಳಕೆ ಹಾಗೂ ಅವೈಜ್ಞಾನಿಕ ತ್ಯಾಜ್ಯ ನಿರ್ವಹಣಾ ಕ್ರಮಗಳಿಂದ ಪ್ಲಾಸ್ಟಿಕ ಸೇವಿಸಿದ ಜಾನುವಾರುಗಳಲ್ಲಿಆರೋಗ್ಯದ ಸಮಸ್ಯೆ ಹೆಚ್ಚುತಿವೆ ಎಂದು ಕೆ.ಎಂ.ಎಫ್ ನಿರ್ದೇಶಕ ಆರ್.ಶ್ರೀನಿವಾಸ್ ತಿಳಿಸಿದರು.
ತಾಲ್ಲೂಕಿನ ಲಗುನಾಯಕನಹಳ್ಳಿಯಲ್ಲಿ ಬೆಂಗಳೂರು ಕೃಷಿ ವಿಶ್ವ ವಿದ್ಯಾನಿಲಯದ ವಿದ್ಯಾರ್ಥಿಗಳು ಗ್ರಾಮೀಣ ಕೃಷಿ ಕಾರ್ಯಾನುಭವಾದ ಅಡಿಯಲ್ಲಿ ಆಯೋಜಿಸಿದ್ದ ಬರಡು ರಾಸುಗಳ ತಪಾಸಣೆ ಹಾಗೂ ಪಶು ಆರೋಗ್ಯ ಚಿಕಿತ್ಸಾ ಶಿಬಿರದಲ್ಲಿ ಭಾಗವಹಿಸಿ ಅವರು ಮಾತನಾಡಿದರು.
ಸಮತೋಲನ ಆಹಾರ ಮತ್ತು ಜಂತುನಾಶಕ ಔಷಧಿಗಳನ್ನು ಸಕಾಲದಲ್ಲಿ ನೀಡುವುದರ ಮೂಲಕ ಕರುಗಳನ್ನು ಉತ್ತಮವಾಗಿ ಸಾಕಾಣಿಕೆ ಮಾಡಬಹುದು ಎಂದು ಹೇಳಿದರು.
ಪಶು ಆರೋಗ್ಯದ ಮಹತ್ವ ಮತ್ತು ಅದರ ನಿರ್ವಹಣೆಯ ಕುರಿತು ಡಾ.ಮಂಜುನಾಥಯ್ಯ, ಡಾ. ಶ್ರೀನಾಥರೆಡ್ಡಿ ಹಾಗೂ ಡಾ. ಕೃಷ್ಣ ರೆಡ್ಡಿಯವರು ಮಾತನಾಡಿದರು.
ಶಿಬಿರಕ್ಕೆ ಆಗಮಿಸಿದ್ದ ಪಶುಗಳ ಆರೋಗ್ಯದ ತಪಾಸಣೆ ನಡೆಸಿ, ಜಂತು ನಿವಾರಣೆ, ಬರಡು ರಾಸುಗಳ ಚಿಕಿತ್ಸೆ, ಗರ್ಭ ಪರೀಕ್ಷೆ ಹಾಗೂ ಲಸಿಕೆಯನ್ನು ಹಸು,ಎಮ್ಮೆ,ಕುರಿ ಹಾಗೂ ನಾಯಿಗಳಿಗೆ ನೀಡಲಾಯಿತು. ಹಸುಗಳಲ್ಲಿ ಸಾಮಾನ್ಯವಾಗಿ ಕಾಣಿಸಿಕೊಳ್ಳುವ ಕೆಚ್ಚಲುಬಾವು ರೋಗದ ಚಿಕಿತ್ಸೆಯನ್ನು ಮಾಡಲಾಯಿತು.
ಲಗುನಾಯಕನಹಳ್ಳಿಯಲ್ಲಿರುವ 220 ಹಸುಗಳ ಪೈಕಿ ಈ ಚಿಕಿತ್ಸಾ ಶಿಬಿರಕ್ಕೆ ಸುಮಾರು 120 ಹಸುಗಳನ್ನು ಕರೆತರಲಾಗಿತ್ತು.
ಪಶುಪಾಲನೆ ಮತ್ತು ಪಶವೈದ್ಯಕೀಯ ಸೇವಾ ಇಲಾಖೆಯ ಉಪ ನಿರ್ದೇಶಕ ಡಾ. ರವಿ, ಕೋಚಿಮುಲ್ ಉಪವ್ಯವಸ್ಥಾಪಕ ಡಾ. ಮಂಜುನಾಥಯ್ಯ, ಮುಖ್ಯ ಪಶುವೈದ್ಯಾಧಿಕಾರಿ ಡಾ. ಶ್ರೀನಾಥ್ ರೆಡ್ಡಿ, ಹಾಲು ಒಕ್ಕೂಟದ ಉಪವ್ಯವಸ್ಥಾಪಕ ಡಾ. ರವಿಕಿರಣ್ ಬಿ. ಆರ್., ಸಂತೋಷ್, ಡಾ. ಕೃಷ್ಣರೆಡ್ಡಿ, ಎಸ್ ಶಂಕರ್ ಕುಮಾರ್, ಡಾ. ಯಶಸ್ವಿನಿ ಎಮ್. ಎ., ತಪಾಸಣಾ ತಜ್ಞರಾದ ಡಾ. ಮಧು ಮತ್ತು ಡಾ. ನಾರಾಯಣಸ್ವಾಮಿ, ಡಾ. ಆನಂದ್ ಮಾನೇಗಾರ್ ಜಿ., ಡಾ. ಪ್ರಶಾಂತ್, ಡಾ. ಮುನಿಕೃಷ್ಣ ಹಾಜರಿದ್ದರು.