Home Sidlaghatta ಸರ್ಕಾರಿ ನೌಕರರ ಸಂಘದ ಚುನಾವಣೆ: ನಾಮಪತ್ರ ಸಲ್ಲಿಕೆ

ಸರ್ಕಾರಿ ನೌಕರರ ಸಂಘದ ಚುನಾವಣೆ: ನಾಮಪತ್ರ ಸಲ್ಲಿಕೆ

0

Sidlaghatta : ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘದ 2024-2029 ನೇ ಅವಧಿಯ ತಾಲ್ಲೂಕು ಮತ್ತು ಯೋಜನಾ ಶಾಖೆಗಳ ನಿರ್ದೇಶಕರ ಚುನಾವಣಾ ಪ್ರಕ್ರಿಯೆ ಆರಂಭವಾಗಿದ್ದು ನಾಮಪತ್ರ ಸಲ್ಲಿಕೆಯ ಮೊದಲ ದಿನವೇ ನಾಮಪತ್ರ ಸಲ್ಲಿಕೆ ಕಾರ್ಯ ಚುರುಕಾಗಿತ್ತು.

ತಾಲ್ಲೂಕಿನ ವಿವಿಧ ಇಲಾಖೆಗಳ ವೃಂದಸಂಘಗಳ ನೌಕರರನ್ನು ಒಟ್ಟು 23 ಮತಕ್ಷೇತ್ರಗಳಲ್ಲಿ ವಿಂಗಡಿಸಿದ್ದು ತಾಲ್ಲೂಕಿನಲ್ಲಿ 33 ಸ್ಥಾನಗಳಿಗೆ ಚುನಾವಣೆ ನಡೆಯಬೇಕಿದೆ. ತಾಲ್ಲೂಕಿನಲ್ಲಿ ಒಟ್ಟು ಸುಮಾರು 1166 ಮತದಾರರಿದ್ದು ಇದೇ ತಿಂಗಳ 18 ರ ಸಂಜೆ 5 ಗಂಟೆವರೆಗೆ ನಾಮಪತ್ರ ಸಲ್ಲಿಸಲು ತಾಲ್ಲೂಕು ಸರ್ಕಾರಿ ನೌಕರರ ಭವನದಲ್ಲಿ ಅವಕಾಶವಿದೆ ಎಂದು ಚುನಾವಣಾಧಿಕಾರಿ ಬೈರಾರೆಡ್ಡಿ ತಿಳಿಸಿದ್ದಾರೆ.

ಅಕ್ಟೋಬರ್ 19 ರಂದು ನಾಮಪತ್ರ ಪರಿಶೀಲನೆ, ಅರ್ಹ ಅಭ್ಯರ್ಥಿಗಳ ಹೆಸರು ಪ್ರಕಟಣೆ, 21 ರವರೆಗೆ ಉಮೇದುವಾರಿಕೆ ವಾಪಸ್ ಪಡೆಯಲು ಅವಕಾಶವಿದ್ದು, ಅಂದೇ ಸಂಜೆ ಚುನಾವಣಾ ಕಣದಲ್ಲಿ ಉಳಿಯಬಹುದಾದ ಅಂತಿಮ ಅಭ್ಯರ್ಥಿಗಳ ಪಟ್ಟಿ ಪ್ರಕಟಣೆ ನಡೆಯಲಿದೆ.

ಅಗತ್ಯವಿದ್ದಲ್ಲಿ 28 ರಂದು ಬೆಳಿಗ್ಗೆ 9 ರಿಂದ ಸಂಜೆ 4 ಗಂಟೆವರೆಗೆ ಚುನಾವಣೆ ಮತದಾನ, ಮತ ಎಣಿಕೆ, ಫಲಿತಾಂಶ ಪ್ರಕಟಣೆ ಕಾರ್ಯನಡೆಯಲಿದೆ ಎಂದು ಅವರು ತಿಳಿಸಿದ್ದಾರೆ.

ಅತ್ಯಧಿಕ ಮತದಾರರು ಪ್ರಾಥಮಿಕ ಶಿಕ್ಷಣ ಇಲಾಖೆಯಲ್ಲಿ 583, ಪ್ರೌಢಶಾಲಾ ಶಿಕ್ಷಣ-123, ಆರೋಗ್ಯ ಇಲಾಖೆ-87, ಕಂದಾಯ ಇಲಾಖೆ-60, ಗ್ರಾಮೀಣಾಭಿವೃದ್ಧಿ, ಪಂಚಾಯತ್‌ ರಾಜ್ ಇಲಾಖೆ-52, ಪಶುಪಾಲನಾ ಇಲಾಖೆ-40, ನ್ಯಾಯಾಂಗ ಇಲಾಖೆ-34, ರೇಷ್ಮೆ ಮತ್ತು ತೋಟಗಾರಿಕೆ ಇಲಾಖೆ-34, ಸಮಾಜಕಲ್ಯಾಣ ಇಲಾಖೆ-33 ಮತದಾರರೂ ಸೇರಿದಂತೆ ಎಲ್ಲಾ ಇಲಾಖೆಗಳಿಂದ ಸುಮಾರು 1166 ಮತದಾರರಿದ್ದಾರೆಂದು ಅವರು ತಿಳಿಸಿದರು.

ಸರ್ಕಾರಿ ನೌಕರರ ಸಂಘದ ನಿಕಟಪೂರ್ವ ಅಧ್ಯಕ್ಷ ಕೆ.ಎನ್.ಸುಬ್ಬಾರೆಡ್ಡಿ ಮಾತನಾಡಿ, ಕಳೆದ ಅವಧಿಯಲ್ಲಿ ಸರ್ಕಾರಿ ನೌಕರರ ಎಲ್ಲಾ ಸಮಸ್ಯೆಗಳಿಗೂ ಸಕಾರಾತ್ಮಕವಾಗಿ ಸ್ಪಂದಿಸಲಾಗಿದ್ದು ಯಾವುದೇ ನೌಕರರ ಯಾವುದೇ ಸಮಸ್ಯೆಗಳು ಉಳಿಕೆ ಇಲ್ಲ.

ಈ ಬಾರಿಯ ಚುನಾವಣೆಯಲ್ಲಿ ಎಲ್ಲಾ 33 ಸ್ಥಾನಗಳಿಗೂ ಬಹುತೇಕ ಅವಿರೋಧ ಆಯ್ಕೆಯಾಗುವ ನಿರೀಕ್ಷೆ ಇದೆ. ಎಲ್ಲಾ ಸ್ಥಾನಗಳಿಗೂ ಅವಿರೋಧ ಆಯ್ಕೆಯಾಗುವ ಮೂಲಕ ರಾಜ್ಯದಲ್ಲಿ ತಾಲ್ಲೂಕು ಸರ್ಕಾರಿ ನೌಕರರ ಸಂಘದ ಘಟಕವು ಮಾದರಿಯಾಗಲಿದೆ ಎಂದರು.

ತಾಲ್ಲೂಕು ಪ್ರೌಢಶಾಲಾ ಸಹಶಿಕ್ಷಕರ ಸಂಘದ ಅಧ್ಯಕ್ಷ ಎಲ್.ವಿ.ವೆಂಕಟರೆಡ್ಡಿ ಮಾತನಾಡಿ, ಪ್ರೌಢಶಾಲಾ ಶಿಕ್ಷಣ ಕ್ಷೇತ್ರದಿಂದ ಇಬ್ಬರು ಶಿಕ್ಷಕರು ನಾಮಪತ್ರ ಸಲ್ಲಿಸಲು ತೀರ್ಮಾನಿಸಲಾಗಿದೆ. ಪ್ರೌಢಶಾಲಾ ಶಿಕ್ಷಣ ಮತಕ್ಷೇತ್ರಕ್ಕೆ ಅವಿರೋಧ ಆಯ್ಕೆ ಮಾಡಲು ತೀರ್ಮಾನಿಸಲಾಗಿದೆ ಎಂದರು.

ತಾಲ್ಲೂಕು ಪ್ರೌಢಶಾಲಾ ಸಹಶಿಕ್ಷಕರ ಸಂಘದ ಪ್ರಧಾನ ಕಾರ್ಯದರ್ಶಿ ಎಚ್.ಎಸ್.ರುದ್ರೇಶಮೂರ್ತಿ ಮಾತನಾಡಿ, ಕಳೆದ ಅವಧಿಯಲ್ಲಿನ ಕಾರ್ಯಕಾರಿ ಸಮಿತಿಯು ಕೆ.ಎನ್.ಸುಬ್ಬಾರೆಡ್ಡಿ ಅಧ್ಯಕ್ಷತೆಯಲ್ಲಿ ಉತ್ತಮ ಸೇವೆ ಸಲ್ಲಿಸಿದ್ದು ಈ ಅವಧಿಯಲ್ಲಿಯೂ ಸೇವಾಮನೋಭಾವವುಳ್ಳ ಉತ್ತಮ ಕಾರ್ಯಕಾರಿಸಮಿತಿಯು ಅಸ್ತಿತ್ವಕ್ಕೆ ಬರಲಿದೆ. ಸರ್ಕಾರಿ ನೌಕರರ ಸಮಸ್ಯೆಗಳಿಗೆ ಸಂಘವು ದನಿಯಾಗಿ ನಿಲ್ಲಲಿದೆ ಎಂದರು.

ನಾಮಪತ್ರ ಸಲ್ಲಿಕೆ:

ನಾಮಪತ್ರ ಸಲ್ಲಿಕೆಗೆ ಮೊದಲ ದಿನವಾದ ಬುಧವಾರದಂದು ಆರೋಗ್ಯ ಇಲಾಖೆ ಮತಕ್ಷೇತ್ರದಿಂದ ಸಾರ್ವಜನಿಕ ಆಸ್ಪತ್ರೆಯ ದೇವರಾಜು, ಟಿ.ಟಿ.ನರಸಿಂಹಪ್ಪ, ಅಕ್ಕಲರೆಡ್ಡಿ, ಲಲಿತಮ್ಮ, ರಹಮತ್ ಉಲ್ಲಾ, ಕೃಷಿಇಲಾಖೆ ಮತಕ್ಷೇತ್ರದಿಂದ ರವಿ, ಪ್ರಾಥಮಿಕ ಶಿಕ್ಷಣ ಮತಕ್ಷೇತ್ರದಿಂದ ಮುಜಾಫಿರ್, ಪ್ರೌಢಶಾಲಾ ಶಿಕ್ಷಣ ಮತಕ್ಷೇತ್ರದಿಂದ ಮಳಮಾಚನಹಳ್ಳಿ ಸರ್ಕಾರಿ ಪ್ರೌಢಶಾಲೆಯ ಶಿಕ್ಷಕ ವಿ.ಬೈರಾರೆಡ್ಡಿ, ದೊಡ್ಡತೇಕಹಳ್ಳಿ ಸರ್ಕಾರಿ ಪ್ರೌಢಶಾಲೆಯ ಶಿಕ್ಷಕ ಸಿ.ಕೆ.ಹರೀಶ್‌ಬಾಬು, ಲೋಕೋಪಯೋಗಿ ಇಲಾಖೆ ಮತಕ್ಷೇತ್ರದಿಂದ ಪದ್ಮಾವತಮ್ಮ, ಭೂಮಾಪನಾ, ಕಂದಾಯ ಮತ್ತು ಭೂದಾಖಲೆ, ಉಪನೊಂದಣಾಧಿಕಾರಿ ಇಲಾಖೆ ಮತಕ್ಷೇತ್ರದಿಂದ ಜಿ.ಡಿ.ವಸಂತಕುಮಾರ್, ನಾಮಪತ್ರ ಸಲ್ಲಿಸಿದ್ದಾರೆ.

ಇದೇ ಸಂದರ್ಭದಲ್ಲಿ ಜಿಲ್ಲಾ ಪ್ರೌಢಶಾಲಾ ಸಹಶಿಕ್ಷಕರ ಸಂಘದ ಖಜಾಂಚಿ ಜಿ.ಕೆ.ಗೋಪಾಲಕೃಷ್ಣ, ತಾಲ್ಲೂಕು ಸಂಘದ ಉಪಾಧ್ಯಕ್ಷ ಎಂ.ಕೆ.ಸಿದ್ಧರಾಜು, ಸಹಕಾರ್ಯದರ್ಶಿ ಎಂ.ಶಿವಕುಮಾರ್, ಬಿಇಒ ಕಚೇರಿಯ ಮಧು, ಶಿಕ್ಷಕ ಇ.ಶಂಕರಪ್ಪ, ಅಮರನಾಥ್, ಜಗದೀಶ್, ಶ್ರೀನಿವಾಸರೆಡ್ಡಿ, ಎನ್.ಮೂರ್ತಿ, ಸಿ.ಕೆ.ಹರೀಶ್‌ಬಾಬು, ವಿ.ಬೈರಾರೆಡ್ಡಿ, ಹಾಜರಿದ್ದರು.

For Daily Updates WhatsApp ‘HI’ to 7406303366

NO COMMENTS

LEAVE A REPLY

Please enter your comment!
Please enter your name here
This site is protected by reCAPTCHA and the Google Privacy Policy and Terms of Service apply.

error: Content is protected !!
Exit mobile version