Gudibande : ಗುಡಿಬಂಡೆ ತಾಲ್ಲೂಕು ಕಚೇರಿ ಮುಂಭಾಗ ರಾಜ್ಯ ಗ್ರಾಮ ಆಡಳಿತ ಅಧಿಕಾರಿಗಳ ( village administrative officers) ಸಂಘದಿಂದ ಗುರುವಾರ ಕಂದಾಯ ಇಲಾಖೆಯಿಂದ ಅಭಿವೃದ್ಧಿಪಡಿಸಿರುವ ಸುಮಾರು 18ಕ್ಕೂ ಅಧಿಕ ಮೊಬೈಲ್, ವೆಬ್ ತಂತ್ರಾಂಶಗಳ ಮೂಲಕ ಕರ್ತವ್ಯ ನಿರ್ವಹಿಸಲು ಒತ್ತಡ, 4 ತಂತ್ರಾಂಶಗಳ ನಿರ್ವಹಣೆಗೆ ಹಲವಾರು ತೊಂದರೆ ಸೇರಿದಂತೆ ಹಲವು ಸಮಸ್ಯೆ ಬಗೆಹರಿಸುವಂತೆ ಒತ್ತಾಯಿಸಿ ಪ್ರತಿಭಟನೆ (Protest) ನಡೆಸಲಾಯಿತು.
ಈ ಸಂಧರ್ಭದಲ್ಲಿ ಮಾತನಾಡಿದ ಸಂಘದ ತಾಲ್ಲೂಕು ಅಧ್ಯಕ್ಷ ಶಿವಕುಮಾರ್ “ಇಲಾಖೆಯಿಂದ ಅಭಿವೃದ್ಧಿಪಡಿಸಿರುವ ಮೊಬೈಲ್, ವೆಬ್ ತಂತ್ರಾಂಶಗಳ ಮೂಲಕ ಕರ್ತವ್ಯ ನಿರ್ವಹಿಸಲು ಒತ್ತಡ ಹೇರಲಾಗುತ್ತಿದ್ದು ಈ ತಂತ್ರಾಂಶಗಳ ನಿರ್ವಹಣೆಗೆ ಅವಶ್ಯಕವಾಗಿರುವ ಮೊಬೈಲ್, ಲ್ಯಾಪ್‌ಟಾಪ್, ಅದಕ್ಕೆ ಅವಶ್ಯವಿರುವ ಇಂಟರ್‌ನೆಟ್ ಹಾಗೂ ಸ್ಕ್ಯಾನರ್‌ಗಳನ್ನು ಒದಗಿಸದೇ ಕರ್ತವ್ಯ ನಿರ್ವಹಿಸುವಂತೆ ಒತ್ತಡ ಹೇರುತ್ತಿರುವುದರಿಂದ ಗ್ರಾಮ ಆಡಳಿತ ಅಧಿಕಾರಿಗಳು ಮಾನಸಿಕ ಹಿಂಸೆ ಅನುಭವಿಸುತ್ತಿದ್ದಾರೆ” ಎಂದು ತಿಳಿಸಿದರು.
ಪ್ರತಿಭಟನಾಕಾರರು ಗ್ರಾಮ ಆಡಳಿತ ಅಧಿಕಾರಿ ಹುದ್ದೆಗೆ, ತಾಂತ್ರಿಕ ಹುದ್ದೆಗಳಿಗೆ ನೀಡುವ ವೇತನ ಶ್ರೇಣಿ ನಿಗದಿಪಡಿಸಬೇಕು. ಮೂಲ ಸೌಕರ್ಯ ಕಲ್ಪಿಸಲು ಹಾಗೂ ಸೇವಾ ವಿಷಯದಲ್ಲಿ ಸಂಬಂಧಿಸಿದಂತೆ ಸೌಲಭ್ಯ ಕಲ್ಪಿಸುವಂತೆ ಒತ್ತಾಯಿಸಿ ತಹಶೀಲ್ದಾರ್‌ಗೆ ಮನವಿ ಸಲ್ಲಿಸಲಾಯಿತು. ಮುಷ್ಕರಕ್ಕೆ ಸರ್ಕಾರಿ ನೌಕರರ ಸಂಘ, ಪ್ರಾಥಮಿಕ ಶಾಲಾ ಶಿಕ್ಷಕರ ಸಂಘ ಹಾಗೂ ರೈತ ಸಂಘಟನೆ ಬೆಂಬಲ ನೀಡಿತ್ತು.