Sidlaghatta : ಶಿಡ್ಲಘಟ್ಟ ನಗರದ ಶ್ರೀ ನಗರೇಶ್ವರ ಕಲ್ಯಾಣ ಮಂಟಪದಲ್ಲಿ ತೋಟಗಾರಿಕೆ ಇಲಾಖೆಯಿಂದ (Horticulture Department) ಶನಿವಾರ ಹಣ್ಣಿನ ಬೆಳೆಗಾರರಿಗೆ ನೂತನ ತಾಂತ್ರಿಕತೆಯ ವಿಧಾನಗಳ ಬಗ್ಗೆ ಹಮ್ಮಿಕೊಂಡಿದ್ದ ತರಬೇತಿ ಕಾರ್ಯಕ್ರಮದಲ್ಲಿ (Workshop) ಭಾಗವಹಿಸಿ ವಿಜ್ಞಾನಿ ಡಾ.ಬಿ.ಎಲ್.ಮಂಜುನಾಥ್ ಅವರು ಮಾತನಾಡಿದರು.
ಇತ್ತೀಚಿನ ದಿನಗಳಲ್ಲಿ ಹೊಸ ಹೊಸ ಮಾವಿನ ತಳಿಗಳ ಆವಿಷ್ಕಾರವಾಗಿದ್ದು ಅವುಗಳಿಂದ ಹೆಚ್ಚು ಫಸಲು, ಇಳುವರಿ ಹಾಗೂ ಗುಣಮಟ್ಟದ ಮಾವಿನ ಹಣ್ಣುಗಳನ್ನು ಪಡೆಯಬಹುದಾಗಿದೆ. ಈಗಾಗಲೆ ಇರುವ ಉತ್ತಮ ತಳಿಯ ಎರಡು ಬಗೆಯ ಸಸಿಗಳನ್ನೆ ಬಳಸಿ ಕಸಿ ಮಾಡಿ ಅರ್ಕಾ ಉದಯ, ಅರ್ಕಾ ಸುಪ್ರಭಾತ ದಂತ ಹೊಸ ತಳಿಗಳನ್ನು ಬೆಳೆಸಲಾಗಿದೆ. ಈ ತಳಿಯ ಮಾವಿನ ಹಣ್ಣುಗಳಲ್ಲಿ ಶೇ 70 ಕ್ಕೂ ಹೆಚ್ಚು ಭಾಗ ತಿರಳು ಇರಲಿದ್ದು ಶೇ 30 ಕ್ಕಿಂತ ಕಡಿಮೆ ಭಾಗ ವಾಟೆ ಇರಲಿದೆ. ಆಕರ್ಷಕ ಬಣ್ಣ, ರುಚಿಯೂ ಹೆಚ್ಚು ಇರಲಿದ್ದು ಈ ತಳಿಯ ಮಾವಿನ ಹಣ್ಣಿಗೆ ಮಾರುಕಟ್ಟೆಯಲ್ಲಿ ಬೇಡಿಕೆಯೂ ಹೆಚ್ಚಿದೆ. ಹಾಗಾಗಿ ರೈತರು ಮಾರುಕಟ್ಟೆಯಲ್ಲಿ ಬೇಡಿಕೆ ಇರುವ ತಳಿಯ ಹಣ್ಣುಗಳನ್ನು ಬೆಳೆಯಲು ಮುಂದಾಗಬೇಕು ಎಂದರು.
ಇತ್ತೀಚಿನ ವರ್ಷಗಳಲ್ಲಿ ಕಡಿಮೆ ಸಾಂಧ್ರತೆಯಲ್ಲಿ ಸಸಿಗಳನ್ನು ನೆಡುವ ಪ್ರಯೋಗ ಹೆಚ್ಚೆಚ್ಚು ಪರಿಣಾಮಕಾರಿ ಹಾಗೂ ಲಾಭದಾಯಕವಾಗುತ್ತಿದೆ. ಈ ಮೊದಲು ಗಿಡಗಳ ನಡುವೆ ಬಹಳ ಅಂತರ ಇರುವಂತೆ ನಾಟಿ ಮಾಡುವ ಪದ್ದತಿ ಬದಲಿಗೆ ಇದೀಗ ಕೇವಲ 10 ಅಡಿ ಅಂತರದಲ್ಲಿ ಸಸಿಗಳನ್ನು ನೆಡುವ ಪದ್ದತಿ ಬಹಳ ಪ್ರಚಲಿತದಲ್ಲಿದೆ. ಈ ತಳಿಯ ಸಸಿಗಳು ಹೆಚ್ಚು ವಿಸ್ತಾರವಾಗಿ ಬೆಳೆಯುವುದಿಲ್ಲ. ಹಾಗಾಗಿ ಮರವಾಗಿ ಬೆಳೆದ ನಂತರವೂ ಮರದಿಂದ ಮರಕ್ಕೆ ಸಾಕಷ್ಟು ಸ್ಥಳಾವಕಾಶ ಇರುತ್ತದೆ. ಅಗತ್ಯ ಪ್ರಮಾಣದಲ್ಲಿ ಕೊಟ್ಟಿಗೆ ಗೊಬ್ಬರ ಇನ್ನಿತರೆ ಫೋಷಕಾಂಶಗಳನ್ನು ನೀಡಿದರೆ ಉತ್ತಮ ಗುಣಮಟ್ಟದ ಫಸಲನ್ನು ಪಡೆದುಕೊಳ್ಳಬಹುದು ಎಂದರು.
ಮಾವಿನ ನಾನಾ ತಳಿ, ಆರೈಕೆ, ಮರುಕಟ್ಟೆ ವ್ಯವಸ್ಥೆ, ಕೀಟ ಹಾಗೂ ರೋಗ ನಿಯಂತ್ರಣ ಕುರಿತು ತರಬೇತಿ ಕಾರ್ಯಾಗಾರದಲ್ಲಿ ತಿಳಿಸಿಕೊಡಲಾಯಿತು.
ತೋಟಗಾರಿಕೆ ಇಲಾಖೆಯ ಹಿರಿಯ ಸಹಾಯಕ ನಿರ್ದೇಶಕ ರಮೇಶ್, ವಿಜ್ಞಾನಿಗಳಾದ ಡಾ.ಸತೀಶ್, ಪ್ರೊ.ಎಂ.ನಂದನ್, ತೋಟಗಾರಿಕೆ ಇಲಾಖೆಯ ನಿವೃತ್ತ ಸಹಾಯಕ ನಿರ್ದೇಶಕ ನಾರಾಯಣಸ್ವಾಮಿ, ರೈತ ಮುಖಂಡ ತಾದೂರು ಮಂಜುನಾಥ್ ಮತ್ತು ಮಾವು ಬೆಳೆಗಾರರು ಹಾಜರಿದ್ದರು.