Melur, Sidlaghatta : ನೇಪಾಳದ ಕಠ್ಮಂಡುವಿನ ಕ್ರೀಡಾಂಗಣದಲ್ಲಿ ನಡೆದ ದಕ್ಷಿಣ ಏಷ್ಯಾ ಮಟ್ಟದ ಅಂತರಾಷ್ಟ್ರೀಯ ಲಾನ್ ಟೆನ್ನಿಸ್ ಪಂದ್ಯಾವಳಿಯಲ್ಲಿ (12 ವರ್ಷದೊಳಗಿನ) ಶಿಡ್ಲಘಟ್ಟ ತಾಲ್ಲೂಕು ಮೇಲೂರು ಗ್ರಾಮದ ಟೆನ್ನಿಸ್ ಆಟಗಾರ ಎಂ.ಪುನೀತ್ ಮನೋಹರ್ ಗೆದ್ದು ಕಝಕಿಸ್ತಾನದಲ್ಲಿ ನಡೆಯುವ ಏಷ್ಯಾ ಅಂತರಾಷ್ಟ್ರೀಯ ಚಾಂಪಿಯನ್ ಷಿಪ್ ಪಂದ್ಯಾವಳಿಯಲ್ಲಿ ಭಾಗವಹಿಸುವ ಅವಕಾಶ ಪಡೆದಿದ್ದಾನೆ.
ನೇಪಾಳ, ಭೂತಾನ್, ಮಾಲ್ಡೀವ್ಸ್, ಪಾಕಿಸ್ತಾನ, ಬಾಂಗ್ಲಾದೇಶ, ಶ್ರೀಲಂಕ ದೇಶಗಳೊಂದಿಗೆ ಭಾಗವಹಿಸಿದ್ದ ಭಾರತದ ಮೂರು ಮಂದಿ ಬಾಲಕ, ಮೂರು ಮಂದಿ ಬಾಲಕಿಯರ ಟೆನ್ನಿಸ್ ಆಟಗಾರರ ತಂಡದಲ್ಲಿ ಮೇಲೂರು ವಾಸಿ ವೈದ್ಯರಾದ ಡಾ.ಮನೋಹರ್, ನಮ್ರತಾ ದಂಪತಿ ಪುತ್ರ ಎಂ.ಪುನೀತ್ ಮನೋಹರ್ ಸಹ ಭಾಗವಹಿಸಿ ಭಾರತದ ತಂಡವನ್ನು ಪ್ರತಿನಿಧಿಸಿದ್ದ.
ಎಂ.ಪುನೀತ್ ಮನೋಹರ್ ಮೊದಲ ದಿನದ ಪಂದ್ಯದಲ್ಲಿ ಮಾಲ್ಡೀವ್ಸ್ ನ ಆಟಗಾರರ ವಿರುದ್ದ ಸಿಂಗಲ್ಸ್ ನಲ್ಲಿ 6-0, 6-0 ಮತ್ತು ಡಬಲ್ಸ್ ನಲ್ಲಿ 6-0, 6-0 ಅಂತರದಲ್ಲಿ, ಎರಡನೇ ದಿನದಾಟದಲ್ಲಿ ಬಾಂಗ್ಲಾದೇಶದ ಆಟಗಾರ ವಿರುದ್ದ 6-0, 6-0 ಮತ್ತು ಡಬಲ್ಸ್‌ನಲ್ಲಿ 6-1, 6-0 ಅಂತರದಲ್ಲಿ ಗೆದ್ದಿದ್ದಾನೆ.
ಮೂರನೇ ದಿನದಂದು ಶ್ರೀಲಂಕಾದ ಆಟಗಾರರ ವಿರುದ್ದ 6-0, 6-0 ಮತ್ತು ಡಬಲ್ಸ್‌ನಲ್ಲಿ 6-2, 6-2 ಅಂತರದಲ್ಲಿ, ನಾಲ್ಕನೇ ದಿನದಾಟದಲ್ಲಿ ಸಿಂಗಲ್ಸ್ ನಲ್ಲಿ 6-0, 6-0 ಅಂಕಗಳೊಂದಿಗೆ ವಿಜಯ ಸಾಧಿಸಿದ್ದಾನೆ.
ಪಂದ್ಯಾವಳಿಯಲ್ಲಿ ಎಲ್ಲ ನಾಲ್ಕೂ ಸುತ್ತುಗಳಲ್ಲೂ 6-0, 6-0 ಅಂಕಗಳೊಂದಿಗೆ ಗೆದ್ದು ಎಂ.ಪುನೀತ್ ಮನೋಹರ್ ಹೊಸ ದಾಖಲೆ ಸೃಷ್ಟಿಸಿದ್ದಾನೆ. ಈ ಮೂಲಕ ಮುಂದಿನ ಸೆಪ್ಟೆಂಬರ್ ನಲ್ಲಿ ಕಝಕಿಸ್ತಾನದಲ್ಲಿ ನಡೆಯುವ ಏಷ್ಯಾ ಅಂತರಾಷ್ಟ್ರೀಯ ಚಾಂಪಿಯನ್ ಷಿಪ್ ಪಂದ್ಯಾವಳಿಯಲ್ಲಿ ಭಾಗವಹಿಸುವ ಅವಕಾಶ ಪಡೆದಿದ್ದಾನೆ.
ಕಠ್ಮಂಡುವಿನಲ್ಲಿ ನಡೆದ ಈ ಪಂದ್ಯಾವಳಿಯಲ್ಲಿ ಭಾರತವನ್ನು ಪ್ರತಿನಿಧಿಸಿದ ಬಾಲಕರ ತಂಡದಲ್ಲಿ ಎಂ.ಪುನೀತ್ ಮನೋಹರ್, ಆರವ್ ಚಲ್ಲಾನಿ, ಯುವನ್ ಗರ್ಗ್ ಭಾಗವಹಿಸಿದ್ದು ಇಂದ್ರ ಕುಮಾರ್ ಮಹಾಜನ್ ಕೋಚ್ ಆಗಿ ಮಾರ್ಗದರ್ಶನ ನೀಡಿದ್ದಾರೆ.
ಬಾಲಕಿಯರ ತಂಡದಲ್ಲಿ ಖುಷಿ ಕದಿಯಾನ್, ಸರನಾ ಗೆಹ್ಲೋಟ್, ಶ್ರಿಷ್ಠಿ ಕಿರಣ್ ಭಾಗವಹಿಸಿದ್ದು, ಆಶಾ ಶರ್ಮ ಕೋಚ್ ಆಗಿ ಮಾರ್ಗದರ್ಶನ ನೀಡಿದ್ದಾರೆ.