Bagepalli : ಬಾಗೇಪಲ್ಲಿ ಪಟ್ಟಣಕ್ಕೆ ಎಚ್.ಎನ್ ವ್ಯಾಲಿಯ ಕೊಳಚೆ ನೀರು ಹರಿಯುತ್ತಿರುವುದನ್ನು ಖಂಡಿಸಿ ಬಾಗೇಪಲ್ಲಿ ತಾಲ್ಲೂಕು ಕರವೇ ಅಧ್ಯಕ್ಷ ಕೆ.ಎನ್.ಹರೀಶ್ ನೇತೃತ್ವದಲ್ಲಿ ಕರ್ನಾಟಕ ರಕ್ಷಣಾ ವೇದಿಕೆ (ನಾರಾಯಣಗೌಡ ಬಣದ) ಮುಖಂಡರು, ಕಾರ್ಯಕರ್ತರು ಮಂಗಳವಾರ ಪುರಸಭೆ ಮುಂದೆ ಪ್ರತಿಭಟನೆ ಮಾಡಿದರು. ಡಾ.ಎಚ್.ಎನ್.ವೃತ್ತದಿಂದ ಹೊರಟ ಪ್ರತಿಭಟನಾಕಾರರು, ಮುಖ್ಯರಸ್ತೆಯಲ್ಲಿ ಸಂಚರಿಸಿ ಪುರಸಭೆ ಅಧಿಕಾರಿಗಳ ವಿರುದ್ಧ ಧಿಕ್ಕಾರ ಕೂಗಿ ಪ್ರತಿಭಟನಾ ಮೆರವಣಿಗೆ ಮಾಡಿದರು.
ಕರವೇ (ನಾರಾಯಣಗೌಡ ಬಣ)ದ ತಾಲ್ಲೂಕು ಅಧ್ಯಕ್ಷ ಕೆ.ಎನ್.ಹರೀಶ್ ಮಾತನಾಡಿ, ರಾಮಸಮುದ್ರ ಕೆರೆಗಳ ಮೂಲಕ ಚಿತ್ರಾವತಿ ಬ್ಯಾರೇಜಿಗೆ ಎಚ್.ಎನ್.ವ್ಯಾಲಿಯ ಕೊಳಚೆನೀರು ಹರಿದಿದ್ದು, ಕುಡಿಯಲು ಮತ್ತು ಗೃಹಬಳಕೆಗೆ ಯೋಗ್ಯವಲ್ಲದ ನೀರನ್ನು ಪಟ್ಟಣ ಪ್ರದೇಶಗಳ ವಾರ್ಡ್‍ಗಳಿಗೆ ಸರಬರಾಜು ಮಾಡಲಾಗಿದೆ. ಕೊಳಚೆನೀರು ಮನೆಗಳಿಗೆ ಹರಿದಿದ್ದರೂ, ಪುರಸಭೆ ಅಧಿಕಾರಿಗಳು ನೀರನ್ನು ಸಂಸ್ಕರಣೆ ಮಾಡಿಲ್ಲ. ಕೂಡಲೇ ಶುದ್ಧ ಕುಡಿಯುವ ನೀರನ್ನು ಸರಬರಾಜು ಮಾಡಬೇಕು ಎಂದು ಹೇಳಿದರು.
ಪ್ರತಿಭಟನಾಕಾರರಲ್ಲಿ ಮನವಿ ಸ್ವೀಕರಿಸಿದ ನಂತರ ಮಾತನಾಡಿದ ಪುರಸಭೆ ಮುಖ್ಯಾಧಿಕಾರಿ ಕೆ.ಎ.ಮಧುಕರ್ ಎಚ್.ಎನ್.ವ್ಯಾಲಿಯ ನೀರನ್ನು೨ ಹಂತಗಳಲ್ಲಿ ಸಂಸ್ಕರಿಸಲಾಗಿದೆ. ಈ ನೀರನ್ನು ನಿರಂತರವಾಗಿ ಪ್ರಾಯೋಗಿಕ ಪರೀಕ್ಷೆಯ ವರದಿಗೆ ಕಳುಹಿಸಲಾಗಿದ್ದು ಇದುವರೆಗೂ ವರದಿ ಬಂದಿಲ್ಲ. ಯಾವುದೇ ಊಹಾಪೋಹಗಳಿಗೆ ಜನರು ಕಿವಿಕೊಡಬಾರದು ಎಂದು ತಿಳಿಸಿದರು.
ಪ್ರತಿಭಟನೆಯಲ್ಲಿ ಕರವೇ ತಾಲ್ಲೂಕು ಪ್ರಧಾನ ಕಾರ್ಯದರ್ಶಿ ರಿಯಾಜ್‍ಉಲ್ಲಾ, ಜಿಲ್ಲಾ ಸಂಘಟನಾ ಕಾರ್ಯದರ್ಶಿ ಶೇಖರಾಚಾರಿ, ತಾಲ್ಲೂಕು ಮಹಿಳಾ ಅಧ್ಯಕ್ಷೆ ಶಾಂತಮ್ಮ, ಪ್ರಧಾನ ಸಂಚಾಲಕ ನಟರಾಜ್, ಖಜಾಂಚಿ ನಾರಾಯಣಸ್ವಾಮಿ, ಸಂಚಾಲಕ ಶಿವಕುಮಾರ್, ಮುಖಂಡರಾದ ಮಂಜುನಾಥ್‍ನಾಯಕ, ಆಂಜಿ, ಕೃಷ್ಣಪ್ಪ, ವೆಂಕಟೇಶ್, ಶ್ರೀನಿವಾಸ್, ಇಮಾಂಸಾಬ್, ನಾರಾಯಣಸ್ವಾಮಿ, ಗಣೇಶ್, ನಿತೀನ್, ಮಂಜುನಾಥ ಪಾಲ್ಗೊಂಡಿದ್ದರು.
For Daily Updates WhatsApp ‘HI’ to 7406303366
Follow Chikkaballapur District News
Facebook: https://www.facebook.com/hicbpur
Twitter: https://twitter.com/hicbpur