Chikkaballapur : 7ನೇ ವೇತನ ಆಯೋಗ ಜಾರಿ, ಹಳೆ ಪಿಂಚಣಿ ನೀತಿ ಜಾರಿಗೊಳಿಸಬೇಕು ಎಂದು ಆಗ್ರಹಿಸಿ ಬುಧವಾರ ರಾಜ್ಯ ಸರ್ಕಾರಿ ನೌಕರರ ಸಂಘವು ಕರೆ ನೀಡಿದ್ದ ಅನಿರ್ದಿಷ್ಟಾವಧಿ ಮುಷ್ಕರಕ್ಕೆ (Karnataka Government Employees Strike) ಜಿಲ್ಲೆಯ ಬಹುತೇಕ ಎಲ್ಲ ಸರ್ಕಾರಿ ನೌಕರರು ಬುಧವಾರ ಬೆಂಬಲ ಸೂಚಿಸಿದರು. ತಮ್ಮ ಕರ್ತವ್ಯಕ್ಕೆ ಗೈರು ಹಾಜರಾದ ಹಿನ್ನೆಲೆಯಲ್ಲಿ ಸರ್ಕಾರಿ ಕಚೇರಿಗಳು ಖಾಲಿಯಾಗಿದ್ದವು.
ಚಿಕ್ಕಬಳ್ಳಾಪುರ ಜಿಲ್ಲಾಧಿಕಾರಿ ಕಚೇರಿ, ತಾಲ್ಲೂಕು ಕಚೇರಿ, ಗ್ರಾಮ ಪಂಚಾಯಿತಿ, ಪಶು ಆಸ್ಪತ್ರೆ, ಸರ್ಕಾರಿ ಶಾಲೆಗಳು, ಪುರಸಭೆ, ಸರ್ಕಾರಿ ಹಾಸ್ಟೆಲ್‌ಗಳು, ಕಂದಾಯ ಇಲಾಖೆ, ಸರ್ಕಾರಿ ಕಾಲೇಜು, ಬಾಗೇಪಲ್ಲಿ, ಗೌರಿಬಿದನೂರು, ಚಿಂತಾಮಣಿ, ಶಿಡ್ಲಘಟ್ಟ ಸೇರಿದಂತೆ ಇತರ ತಾಲ್ಲೂಕು ಕಚೇರಿಗಳು ಸೇರಿದಂತೆ ವಿವಿಧ ಇಲಾಖೆಯ ಬಹುತೇಕ ನೌಕರರು ಗೈರು ಹಾಜರಾಗುವ ಮೂಲಕ ಮುಷ್ಕರ ಬೆಂಬಲಿಸಿದರು.
ಸರ್ಕಾರವು ಏಪ್ರಿಲ್ 1 ರಿಂದ ಶೇ 17 ರಷ್ಟು ವೇತನ ಹೆಚ್ಚಿಸಿ ಆದೇಶ ಹೊರಡಿಸಿದ ಹಿನ್ನೆಲೆಯಲ್ಲಿ ಸಂಘವು ಹೋರಾಟವನ್ನು ಹಿಂಪಡೆದ ನಿರ್ಧಾರ ತಡವಾಗಿ ಘೋಷಣೆಯಾಗಿದ್ದರಿಂದ ನೌಕರರು ಕಚೇರಿಯತ್ತ ಸುಳಿಯಲಿಲ್ಲ.