Sidlaghatta : ಶಿಡ್ಲಘಟ್ಟ ನಗರದ ಅಗ್ರಹಾರ ಬೀದಿಯಲಿರುವ ಶಾಮಣ್ಣ ಬಾವಿಯ ಬಳಿಯಿರುವ ದೇವಾಲಯದಲ್ಲಿ ಮಂಗಳವಾರ ಲಕ್ಷ್ಮೀನರಸಿಂಹಸ್ವಾಮಿ ಜಯಂತಿಯನ್ನು ಶ್ರದ್ಧಾಭಕ್ತಿಯಿಂದ ನೆರವೇರಿಸಲಾಯಿತು.
ಅಗ್ರಹಾರ ಬೀದಿಯಲ್ಲಿದ್ದ ಶಾಮಣ್ಣ ಎಂಬುವವರು ಸುಮಾರು 400 ವರ್ಷಕ್ಕೂ ಹಿಂದೆ ಇಲ್ಲಿನ ದೇವಾಲಯದ ಬಳಿ ಕಲ್ಯಾಣಿ ನಿರ್ಮಿಸಿದ್ದರು. ಅದರಿಂದಲೇ ಜನರ ಬಾಯಿಯಲ್ಲಿ ಇದು ಶಾಮಣ್ಣಬಾವಿಯೆಂದೇ ಪ್ರಚಲಿತವಾಗಿದೆ. ಇಲ್ಲಿ ಸದಾ ಶುದ್ಧವಾದ ನೀರಿರುತ್ತಿತ್ತು. ಒಂದೆಡೆ ವಿಶಾಲ ಅರಳಿಕಟ್ಟೆಯಿದ್ದರೆ ಮತ್ತೊಂದೆಡೆ ದೇವಾಲಯವಿದೆ.
ವಿಷ್ಣು ಮತ್ತು ಶಿವ ಒಂದೆಡೆ ಎಲ್ಲೂ ಕಾಣಸಿಗರು. ಆದರೆ ಇಲ್ಲಿ ಶ್ರೀಕಂಠೇಶ್ವರ ಮತ್ತು ಲಕ್ಷ್ಮೀನರಸಿಂಹಸ್ವಾಮಿ ಒಂದೆಡೆಯಿದ್ದಾರೆ. ಇದರೊಂದಿಗೆ ಪಾರ್ವತಿ, ಗಣೇಶ, ಸುಬ್ರಮಣ್ಯ, ಆಂಜನೇಯ, ಕೇದಾರೇಶ್ವರ ಮುಂತಾದ ದೇವರುಗಳಿವೆ. ಇದನ್ನು ಶೈವ, ವೈಷ್ಣವ ದೈವ ಸಂಗಮ ಕ್ಷೇತ್ರವೆನ್ನಬಹುದು. ಶಾಮಣ್ಣ ಬಾವಿಯ ಸುತ್ತ ಅರಳಿ ಮರಗಳು, ಹುಣಸೆ, ತೆಂಗು, ಹೊಂಗೆ ಮುಂತಾದ ಮರಗಳಿದ್ದು ಅತ್ಯಂತ ಪ್ರಶಾಂತವಾದ ಸುಂದರ ತಾಣವಾಗಿದೆ.
“ಹಿಂದೂ ಪಂಚಾಂಗದ ಪ್ರಕಾರ ಪ್ರತಿ ವರ್ಷ ವೈಶಾಖ ಮಾಸದ ಶುಕ್ಲಪಕ್ಷದ ಚತುರ್ದಶಿಯ ದಿನದಂದು ನರಸಿಂಹ ಜಯಂತಿಯನ್ನು ಆಚರಿಸಲಾಗುತ್ತದೆ. ಈ ದಿನ ಶ್ರೀ ವಿಷ್ಣುವು ತನ್ನ ಭಕ್ತ ಪ್ರಹ್ಲಾದನನ್ನು ತಂದೆ ಹಿರಣ್ಯಕಶ್ಯಪುವಿನಿಂದ ರಕ್ಷಿಸಲು ನರಸಿಂಹಸ್ವಾಮಿಯ ಅವತಾರದಲ್ಲಿ ಬಂದ ದಿನ ಎಂದು ನಂಬಲಾಗಿದೆ. ಆದ್ದರಿಂದ ಪ್ರತಿ ವರ್ಷ ಈ ದಿನವನ್ನು ನರಸಿಂಹ ಜಯಂತಿಯನ್ನಾಗಿ ಆಚರಿಸುತ್ತಾ ಬರಲಾಗಿದೆ” ಎಂದು ಅರ್ಚಕ ನಾಗರಾಜಶಾಸ್ತ್ರಿ ತಿಳಿಸಿದರು.