Chikkaballapur : ಚಿಕ್ಕಬಳ್ಳಾಪುರ ಲೋಕಸಭಾ ಕ್ಷೇತ್ರದಲ್ಲಿ (Lokasabha Election) ಶುಕ್ರವಾರ ನಡೆದ ಮತದಾನವು (Polling) ಶಾಂತಿಯುತವಾಗಿ ನಡೆಯಿತು. ಚುನಾವಣಾ ಕರ್ತವ್ಯಕ್ಕೆ ನಿಯೋಜನೆಗೊಂಡ ಮತಗಟ್ಟೆ ಅಧಿಕಾರಿಗಳು, ಸಿಬ್ಬಂದಿ, ಸೆಕ್ಟರ್ ಅಧಿಕಾರಿಗಳು ತಮ್ಮ ಕಾರ್ಯಗಳನ್ನು ಸುಗಮವಾಗಿ ನಿರ್ವಹಿಸಿದರು. ಮತದಾರರು ಸರತಿ ಸಾಲಿನಲ್ಲಿ ನಿಂತು ತಮ್ಮ ಹಕ್ಕು ಚಲಾಯಿಸಿದರು.
ಚಿಕ್ಕಬಳ್ಳಾಪುರ ಲೋಕಸಭಾ ಕ್ಷೇತ್ರ ಇತಿಹಾಸದಲ್ಲಿ ಈ ಬಾರಿ ಗರಿಷ್ಠ ಪ್ರಮಾಣದಲ್ಲಿ ಮತದಾನವಾಗಿದೆ. ಶೇ 77ರಷ್ಟು ಮತದಾನವಾಗಿದೆ. ಚುನಾವಣಾ ಆಯೋಗವು ನೀಡಿದ ಮಾಹಿತಿಯ ಪ್ರಕಾರ ರಾತ್ರಿ 10ರವರೆಗೆ ಈ ಪ್ರಮಾಣದಲ್ಲಿ ಮತದಾನವಾಗಿದ್ದು ಪ್ರಮಾಣ ಮತ್ತಷ್ಟು ಹೆಚ್ಚುವ ಸಾಧ್ಯತೆಯೂ ಇದೆ ಎನ್ನಲಾಗುತ್ತಿದೆ.
ಕೋಲಾರ :
ಕೋಲಾರ ಮೀಸಲು ಲೋಕಸಭಾ ಕ್ಷೇತ್ರಕ್ಕೆ ಶುಕ್ರವಾರ ಶಾಂತಿಯುತವಾಗಿ ಮತದಾನ ನಡೆದಿದ್ದು ಶೇ 78.26ರಷ್ಟು ಮತದಾನವಾಗಿ ದಾಖಲೆ ನಿರ್ಮಾಣವಾಗಿದೆ.
ನಗರಕ್ಕಿಂತ ಗ್ರಾಮೀಣ ಭಾಗದಲ್ಲಿ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ. ಬಿರು ಬಿಸಿಲಿನ ನಡುವೆ ಮತದಾರರು ಸರತಿ ಸಾಲಿನಲ್ಲಿ ನಿಂತು ಬಿರುಸಿನಿಂದ ಮತದಾನ ಮಾಡಿದರು.