Sidlaghatta : ಭಾರತ ಚುನಾವಣಾ ಆಯೋಗದ ನಿರ್ದೇಶನದಂತೆ ಕೋಲಾರ ಲೋಕಸಭಾ ಕ್ಷೇತ್ರದ ವ್ಯಾಪ್ತಿಯಲ್ಲಿ ಬರುವ ಶಿಡ್ಲಘಟ್ಟ ವಿಧಾನಸಭಾ ಕ್ಷೇತ್ರದಲ್ಲಿ ಮನೆ ಮತದಾನ ಆಯ್ಕೆ ಮಾಡಿಕೊಳ್ಳಲಾದ 85 ವರ್ಷ ಮೇಲ್ಪಟ್ಟ ಹಿರಿಯ ಮತದಾರರು ಹಾಗೂ ವಿಕಲಚೇತನ ಮತದಾರರಿಗೆ ಮನೆಯಲ್ಲಿ ಮತದಾನ ಮಾಡುವ ಅವಕಾಶವನ್ನು ಕಲ್ಪಿಸಲಾಗಿದ್ದು ಇಂದಿನಿಂದ ಮತದಾನದ ಪ್ರಕ್ರಿಯೆ ಆರಂಭವಾಗಿದೆ ಎಂದು ಸಹಾಯಕ ಚುನಾವಣಾ ಅಧಿಕಾರಿ ಜಾವೀದಾ ನಸೀಮಾ ಖಾನಂ ತಿಳಿಸಿದರು.
ತಾಲ್ಲೂಕು ಕಚೇರಿಯಲ್ಲಿ ಭೇಟಿಯಾದ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಏಪ್ರಿಲ್ 13 ರಿಂದ 18 ವರೆಗೆ ಮನೆಯಿಂದಲೇ ಮತದಾನ ಮಾಡುವ ಕಾರ್ಯ ನಡೆಯಲಿದ್ದು ಮತದಾರರು ತಾವು ನೀಡಲಾದ ವಿಳಾಸದಲ್ಲಿ ಹಾಜರಿದ್ದು ಮನೆ ಮತದಾನ ಪ್ರಕ್ರಿಯೆಯಲ್ಲಿ ಪಾಲ್ಗೊಳ್ಳುವಂತೆ ಮನವಿ ಮಾಡಿದರು.
ಮನೆ ಮತದಾನಕ್ಕೆ ಈಗಾಗಲೇ ಅಗತ್ಯ ಸಿಬ್ಬಂದಿ ನೇಮಕ ಮಾಡಲಾಗಿದೆ. ಮನೆ ಮತದಾನಕ್ಕೆ ಆಯ್ಕೆ ಮಾಡಿಕೊಳ್ಳಲಾದ ಮತದಾರರು ಚುನಾವಣಾ ಸಿಬ್ಬಂದಿಯೊಂದಿಗೆ ಸಹಕರಿಸಬೇಕು. ಶಿಡ್ಲಘಟ್ಟ ವಿಧಾನಸಭಾ ಕ್ಷೇತ್ರದಲ್ಲಿ 206 ವಿಕಲಚೇತನರು 280, ಹಿರಿಯ ನಾಗರಿಕರು ಸೇರಿದಂತೆ 486 ಮತದಾರರು ಮನೆಯಿಂದಲೇ ಮತ ಚಲಾಯಿಸಲು ಹೆಸರುಗಳನ್ನು ನೋಂದಣಿ ಮಾಡಿಕೊಂಡಿದ್ದಾರೆ ಎಂದರು.
ಶಿಡ್ಲಘಟ್ಟ ತಾಲ್ಲೂಕಿನಲ್ಲಿ ಶನಿವಾರ ಬೆಳಿಗ್ಗೆ 7 ಗಂಟೆಯಿಂದ ಮತದಾನ ಮಾಡುವ ಪ್ರಕ್ರಿಯೆಯನ್ನು ಆರಂಭಿಸಲಾಗಿದೆ. ಶನಿವಾರ 10 ಮಾರ್ಗಗಳಲ್ಲಿ ಮತದಾನದ ಪ್ರಕ್ರಿಯೆ ನಡೆಸಲಾಗಿದೆ. ಭಾನುವಾರ ಶಿಡ್ಲಘಟ್ಟ ನಗರದಲ್ಲಿ ಮತದಾನ ಪ್ರಕ್ರಿಯೆಯನ್ನು ನಡೆಸಲಾಗುವುದು. ಒಟ್ಟು 21 ಮಾರ್ಗಗಳಲ್ಲಿ ಮತದಾನದ ಪ್ರಕ್ರಿಯೆ ನಡೆಸಲು ಕ್ರಮ ಕೈಗೊಳ್ಳಲಾಗಿದೆ ಎಂದು ಹೇಳಿದರು.
ಈ ಸಂದರ್ಭದಲ್ಲಿ ತಹಶೀಲ್ದಾರ್ ಬಿ.ಎನ್. ಸ್ವಾಮಿ, ತಾಲ್ಲೂಕು ಪಂಚಾಯಿತಿ ಕಾರ್ಯನಿರ್ವಹಣಾಧಿಕಾರಿ ಜಿ ಮುನಿರಾಜು ಹಾಜರಿದ್ದರು.