Bodaguru, sidlaghatta : ರೈತಾಪಿ ವರ್ಗದ ಜನರು ಸ್ವ-ಉದ್ಯೋಗ ಕೈಗೊಳ್ಳಲು ಮುಂದಾಗಬೇಕು. ಹಾಗೆಯೇ ತಮ್ಮ ಮಕ್ಕಳಿಗೆ ಶಿಕ್ಷ ಣ ಕೊಡಿಸಲು ಆದ್ಯತೆ ನೀಡಬೇಕು. ಗ್ರಾಮೀಣ ಪ್ರದೇಶದಲ್ಲಿ ಹೆಣ್ಣು ಮಕ್ಕಳ ಶಿಕ್ಷಣವನ್ನು ಅರ್ಧಕ್ಕೆ ಮೊಟಕುಗೊಳಿಸದೆ ಪ್ರೋತ್ಸಾಹಿಸಿ ಶಿಕ್ಷಿತರನ್ನಾಗಿಸಿ ಅವರ ಸ್ವಾವಲಂಬಿ ಬದುಕಿಗೆ ಮುನ್ನುಡಿ ಬರೆಯಬೇಕು ಎಂದು ಅಖಿಲ ಭಾರತ ಸುಸಂಘಟಿತ ಸಂಶೋಧನಾ ಪ್ರಯೋಜಿತ ಕೃಷಿ ನಿರತ ಮಹಿಳೆಯರ ಮುಖ್ಯಸ್ಥೆ ಡಾ.ಉಷಾ ರವೀಂದ್ರ ತಿಳಿಸಿದರು.
ತಾಲ್ಲೂಕಿನ ಬೋದಗೂರು ಗ್ರಾಮದಲ್ಲಿ ಬೆಂಗಳೂರಿನ ಕೃಷಿ ವಿಶ್ವವಿದ್ಯಾನಿಲಯದ ಅಡಿಯಲ್ಲಿ ಕಾರ್ಯನಿರ್ವಹಿಸುತ್ತಿರುವ ಅಖಿಲ ಭಾರತ ಸುಸಂಘಟಿತ ಸಂಶೋಧನಾ ಪ್ರಯೋಜಿತ ಕೃಷಿ ನಿರತ ಮಹಿಳೆಯರಿಗಾಗಿ ಸೋಮವಾರ ಆಯೋಜಿಸಿದ್ದ ವಿಶ್ವ ಆಹಾರ ದಿನಾಚರಣೆ, ರಾಷ್ಟ್ರೀಯ ಕೃಷಿ ನಿರತ ಮಹಿಳೆಯರ ದಿನಾಚರಣೆ ಹಾಗೂ ಮಹಿಳೆಯರಿಗೆ ಕೌಶಲ್ಯಾಭಿವೃದ್ಧಿ ತರಬೇತಿ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಮಹಿಳೆಯರು ಆರ್ಥಿಕವಾಗಿ ಸ್ವಾವಲಂಬಿಗಳಾಗಬೇಕು ಎಂಬ ಉದ್ದೇಶದಿಂದ ವೃತ್ತಿ ಕೌಶಲ್ಯಗಳ ತರಬೇತಿ ನೀಡುತ್ತಿರುವುದನ್ನು ಸದುಪಯೋಗ ಮಾಡಿಕೊಳ್ಳಬೇಕು. ಸಾಂಘಿಕವಾಗಿ ಮಹಿಳೆಯರು ಗ್ರಾಮದ ಜಲಮೂಲಗಳು, ಶುದ್ಧ ಕುಡಿಯುವ ನೀರು ಹಾಗೂ ಪರಿಸರದ ಕುರಿತಾಗಿಯೂ ಕೆಲಸ ಮಾಡಬೇಕು. ಗ್ರಾಮದ ಆಸಕ್ತ ಮಹಿಳೆಯರ ಕೃಷಿ ಉತ್ಪನ್ನ ಉತ್ಪಾದಕರ ಸಂಘ ಸ್ಥಾಪನೆ ಕುರಿತಂತೆ ಮಾಹಿತಿ ನೀಡಿದರು.
ಶ್ರೀನಿವಾಸಪುರದ ಸ್ವ-ಉದ್ಯಮಿ ವೇದಿಕ್ ಎಂಟರ್ ಪ್ರೈಸಸ್ ನ ರತ್ನಮ್ಮ ಮಾತನಾಡಿ, ಮಹಿಳೆಯರ ಸ್ವಾವಲಂಬನೆಗೆ ಕೌಶಲ್ಯದ ಮಹತ್ವ, ಉದ್ಯಮಿಯಾಗಿ ಮಹಿಳೆ ರೂಪುಗೊಳ್ಳಲು ಬೇಕಾಗುವ ತಯಾರಿ, ಸವಲತ್ತುಗಳು, ಮಾರುಕಟ್ಟೆ ಹಾಗೂ ಸ್ವಾನುಭವಗಳನ್ನು ವಿವರಿಸಿದರು.
ವಿಜ್ಞಾನಿ ಡಾ.ಗೀತಾ ಎಂ.ಯಂಕಂಚಿ ಮಾತನಾಡಿ, ಆರೋಗ್ಯ ರಕ್ಷಣೆಯಲ್ಲಿ ಆಹಾರ ಮತ್ತು ಪೋಷಣೆ ಮಹತ್ವವನ್ನು ವಿವಿಧ ಚಟುವಟಿಕೆಗಳ ಮೂಲಕ ತಿಳಿಸಿಕೊಟ್ಟರು.
ಗ್ರಾಮ ಪಂಚಾಯಿತಿ ಸದಸ್ಯೆ ಸುಧಾ ಮಾತನಾಡಿ, ಮಹಿಳೆಯರ ಸಾಂಘಿಕ ಪ್ರಯತ್ನದಿಂದ ಆಗುವ ಲಾಭ ಮತ್ತು ಆರ್ಥಿಕ ಪ್ರಗತಿಯ ಕುರಿತು ಹೇಳಿದರು.
ಎನ್.ಆರ್.ಎಲ್.ಎಂ.ಮೇಲ್ವಿಚಾರಕ ನರಸಿಂಹಮೂರ್ತಿ ಮಾತನಾಡಿ, ಮಹಿಳಾ ಸಂಘಗಳ ರಚನೆ ಹಾಗೂ ನೋಂದಣಿ ಕುರಿತು ವಿವರಿಸಿದರು. ಗ್ರಾಮದ ಸಾವಯವ ಕೃಷಿಕ ವೆಂಕಟಸ್ವಾಮಿರೆಡ್ಡಿ ಅವರು ಗ್ರಾಮದ ಮಹಿಳಾ ಸಂಘಟನೆ ಪ್ರಗತಿಯ ಪೂರಕವಾಗಿ ಸಹಕಾರ ನೀಡುವುದಾಗಿ ಹೇಳಿದರು.
ಕಾರ್ಯಕ್ರಮದಲ್ಲಿ 60 ಮಂದಿ ರೈತಮಹಿಳೆಯರು ಭಾಗಿಯಾಗಿದ್ದರು. ಮಹಿಳೆಯರಿಗೆ ನೆನಪಿನ ಶಕ್ತಿ ವೃದ್ಧಿಸುವ ಆಟಗಳನ್ನು ಆಡಿಸಲಾಯಿತು.