Chikkaballapur : ಜಿಲ್ಲೆಯ ಉಸ್ತುವಾರಿ ಸಚಿವ ಡಾ. ಎಂ.ಸಿ. ಸುಧಾಕರ್ (Dr. MC Sudhakar) ಅವರು ಭಾನುವಾರ ಬೆಳಗಿನ ಜಾವ ನಂದಿಗಿರಿಧಾಮಕ್ಕೆ ಭೇಟಿ ನೀಡಿ,(Nandi Hills visit) ಪ್ರವಾಸಿಗರ ಅನುಭವಗಳನ್ನು ಕೇಳಿ ವಿವಿಧ ಸೌಲಭ್ಯಗಳ ಬಗ್ಗೆ ಪರಿಶೀಲನೆ ನಡೆಸಿದರು. ಬೆಳಿಗ್ಗೆ 5 ಗಂಟೆಗೆ ಗಿರಿಧಾಮದ ಪ್ರವೇಶದ್ವಾರಕ್ಕೆ ಆಗಮಿಸಿದ ಸಚಿವರು, ಪ್ರವಾಸಿಗರ ಜೊತೆ ಮಾತನಾಡಿ ಶೌಚಾಲಯಗಳು, ವಾಹನ ನಿಲುಗಡೆ, ಸಂಚಾರ ದಟ್ಟಣೆ, ಜನಸಂದಣಿ ನಿಯಂತ್ರಣ ಹಾಗೂ ಪ್ರವೇಶ ಶುಲ್ಕದ ಬಗ್ಗೆ ಮಾಹಿತಿ ಪಡೆದು ಸುಮಾರು 5.30ಕ್ಕೆ ಗಿರಿಧಾಮ ಪ್ರವೇಶಿಸಿದರು.
ಶುಲ್ಕ ಸಂಗ್ರಹ ಹೇಗೆ ನಡೆಯುತ್ತಿದೆ? ನಗದು ಅಥವಾ ಇ-ಪೇಮೆಂಟ್ ಮೂಲಕವೇ? ಯಾರಿಗೆ ಎಷ್ಟು ಶುಲ್ಕ ವಿಧಿಸಲಾಗುತ್ತಿದೆ? ಎಂದು ಖುದ್ದಾಗಿ ಪರಿಶೀಲಿಸಿದ ಸಚಿವರು, ಶೌಚಾಲಯಗಳ ಪರಿಸ್ಥಿತಿ ಹೇಗಿದೆ, ಸುಧಾರಣೆ ಹೇಗೆ ಮಾಡಬಹುದು ಎಂಬುದರ ಬಗ್ಗೆ ಪ್ರವಾಸಿಗರ ಅಭಿಪ್ರಾಯ ಕೇಳಿದರು. ವಾರಾಂತ್ಯದಲ್ಲಿ ಹೆಚ್ಚುವರಿಯಾದ ಜನಸಂದಣಿ ಹಾಗೂ ಸಂಚಾರ ದಟ್ಟಣೆಯ ಬಗ್ಗೆ ವಿಶೇಷ ಗಮನ ಹರಿಸಿ, ನಿಯಂತ್ರಣಕ್ಕೆ ಕೈಗೊಳ್ಳಬಹುದಾದ ಕ್ರಮಗಳ ಬಗ್ಗೆ ಅಧಿಕಾರಿಗಳೊಂದಿಗೆ ಚರ್ಚೆ ನಡೆಸಿ ನಂದಿಗಿರಿಧಾಮದಲ್ಲಿ ನಿರ್ಮಾಣವಾಗುತ್ತಿರುವ ರೋಪ್ ವೇ ಯೋಜನೆಯ ಪ್ರಗತಿಯ ಕುರಿತು ಸಮಗ್ರ ಮಾಹಿತಿ ಪಡೆದುಕೊಂಡರು. ಮುಂದಿನ ದಿನಗಳಲ್ಲಿ ನಂದಿಗಿರಿಧಾಮದಲ್ಲಿ ಬೆಂಗಳೂರು ವಿಭಾಗದ ಸಚಿವ ಸಂಪುಟ ಸಭೆ ನಡೆಯಲಿದ್ದು, ಸಭೆಗೆ ತಕ್ಕ ವ್ಯವಸ್ಥೆಗಳ ಬಗ್ಗೆ ಸಮಾಲೋಚನೆ ನಡೆಯಿತು.
ಈ ವೇಳೆ ಪ್ರವಾಸೋದ್ಯಮ ಇಲಾಖೆಯ ನಿರ್ದೇಶಕ ರಾಜೇಂದ್ರ, ಜಿಲ್ಲಾಧಿಕಾರಿ ಪಿ.ಎನ್. ರವೀಂದ್ರ, ಜಿಲ್ಲಾ ಪಂಚಾಯಿತಿ ಸಿಇಒ ಪ್ರಕಾಶ್ ನಿಟ್ಟಾಲಿ, ಸಹಾಯಕ ನಿರ್ದೇಶಕ ಯಶವಂತ್ ಹಾಗೂ ಇತರ ಅಧಿಕಾರಿಗಳು ಭಾಗಿಯಾಗಿದ್ದರು.