Gauribidanur : ಬುಧವಾರ ಗೌರಿಬಿದನೂರು ನಗರದ ನದಿದಡದಲ್ಲಿನ ಆಂಜನೇಯಸ್ವಾಮಿ ದೇವಾಲಯದ ಆವರಣದಲ್ಲಿ ಹಾಲು ಉತ್ಪಾದಕರ ವೇದಿಕೆ ಮತ್ತು ಪ್ರಗತಿ ಪರ ಸಂಘಟನೆಗಳ ಒಕ್ಕೂಟ ರೈತರ ಕುಂದುಕೊರತೆಗಳ ಸಭೆಯನ್ನು ಆಯೋಜಿಸಿತ್ತು.
ಸಭೆಯಲ್ಲಿ ಮಾತನಾಡಿದ ರೈತ ಸಂಘದ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಎಂ.ಆರ್.ಲಕ್ಷ್ಮಿನಾರಾಯಣ್ ” ಈ ಭಾಗದ ರೈತರಿಗೆ ಹೈನುಗಾರಿಕೆ ಆರ್ಥಿಕ ಮೂಲವಾಗಿದ್ದು ಬಹಳಷ್ಟು ಮಂದಿ ರೈತರು ಹೈನುಗಾರಿಕೆಯನ್ನು ನಂಬಿ ಜೀವನವನ್ನು ಸಾಗಿಸುತ್ತಿದ್ದಾರೆ. ಒಕ್ಕೂಟವು ಹಾಲಿನ ದರದಲ್ಲಿ ₹ 5 ನಷ್ಟು ಇಳಿಕೆ ಮಾಡಿರುವುದು ರೈತರಿಗೆ ಬರಸಿಡಿಲು ಬಡಿದಂತಾಗಿದೆ, ಕೂಡಲೇ ಈ ನಿರ್ಧಾರವನ್ನು ಹಿಂಪಡೆದು ಹಾಲಿನ ದರ ಏರಿಕೆ ಮಾಡುವ ಮೂಲಕ ರೈತ ಕುಟುಂಬಗಳಿಗೆ ಹಾಲು ಒಕ್ಕೂಟವು ಸಹಕಾರಿಯಾಗಬೇಕು. ಹಾಲು ಒಕ್ಕೂಟದ ನಿರ್ದೇಶಕರು ಸ್ಥಳೀಯ ಹಾಲು ಉತ್ಪಾದಕರ ಸಹಕಾರ ಸಂಘಗಳನ್ನು ಅಭಿವೃದ್ಧಿ ಮಾಡುವ ಬಗ್ಗೆ ಯೋಚಿಸಬೇಕು ” ಎಂದು ಹೇಳಿದರು.
ಹಾಲಿನ ದರ ಕಡಿಮೆ ಮಾಡಿರುವದನ್ನು ವಿರೋಧಿಸಿ ನವೆಂಬರ್ 24ರಂದು ಗೌರಿಬಿದನೂರು ನಗರದ ಹೊರವಲಯದ ಹಾಲು ಶೀಥಲ ಕೇಂದ್ರದ ಬಳಿ ಪ್ರತಿಭಟನೆ ಮಾಡಲಾಗುವುದು. ಕೋಚಿಮುಲ್ ಒಕ್ಕೂಟವು ರೈತರಿಗೆ ಕೊಡುವ ಪ್ರೋತ್ಸಾಹದನ ಏರಿಕೆ ಮಾಡಿ ರೈತರ ಆರ್ಥಿಕ ಅಭಿವೃದ್ಧಿಗೆ ಕೈಜೋಡಿಸಬೇಕು ಎಂದು ಹಿರೇಬಿದನೂರು ಹಾಲು ಉತ್ಪಾದಕರ ಸಹಕಾರ ಸಂಘದ ಅಧ್ಯಕ್ಷ ಡಿ.ಎನ್.ವೆಂಕಟರೆಡ್ಡಿ ಸಭೆಯಲ್ಲಿ ಮಾತನಾಡಿದರು.
ಸರ್ಕಾರ ಪಶು ಆಹಾರ ದರವನ್ನು ಕಡಿತಗೊಳಿಸಿ ರಾಜ್ಯದಾದ್ಯಂತ ರೈತರಿಗೆ ಏಕ ರೂಪದಲ್ಲಿ ಹಾಲಿನ ದರ ನಿಗದಿಪಡಿಸುವಂತೆ ಹಾಲು ಒಕ್ಕೂಟಗಳಿಗೆ ಆದೇಶ ಮಾಡಬೇಕು ಎಂದು ರೈತ ಮುಖಂಡ ಮಾಳಪ್ಪ ತಿಳಿಸಿದರು.
ಪ್ರಜಾ ಸಂಘರ್ಷ ಸಮಿತಿಯ ಜಿಲ್ಲಾ ಸಂಚಾಲಕ ಆರ್.ಎನ್.ರಾಜು, ಕರ್ನಾಟಕ ರಕ್ಷಣಾ ವೇದಿಕೆ ತಾಲ್ಲೂಕು ಅಧ್ಯಕ್ಷ ಜಿ.ಎಲ್.ಅಶ್ವತ್ಥನಾರಾಯಣ್, ಪಿಎಲ್‍ಡಿ ಬ್ಯಾಂಕ್ ಅಧ್ಯಕ್ಷ ಪ್ರಕಾಶ್, ಸಿಐಟಿಯು ಸಿದ್ದಗಂಗಪ್ಪ, ಮಹಿಳಾ ಹಾಲು ಒಕ್ಕೂಟದ ಅಧ್ಯಕ್ಷೆ ಗಿರಿಜಮ್ಮ, ರೈತ ಮುಖಂಡ ರವೀಚಂದ್ರರೆಡ್ಡಿ, ರಾಮಚಂದ್ರರೆಡ್ಡಿ, ಮುದ್ದುರಂಗಪ್ಪ, ರಾಜಣ್ಣ, ಪ್ರಭಾಕರ್, ರಾಮಕೃಷ್ಣ ರೆಡ್ಡಿ, ಪ್ರದೀಪ್, ನಾರಾಯಣಗೌಡ, ಲಕ್ಷ್ಮಿಮನೋಹರ್, ಲಕ್ಷ್ಮಿ, ಛತ್ರಂ ಶ್ರೀಧರ್, ಬಾಲಕೃಷ್ಣ, ನರೇಂದ್ರರೆಡ್ಡಿ, ರವಿತೇಜ ಸಭೆಯಲ್ಲಿ ಭಾಗಿಯಾಗಿದ್ದರು.