Sidlaghatta : ಭೋವಿ ಅಭಿವೃದ್ದಿ ನಿಗಮದಿಂದ 2018-19ನೇ ಸಾಲಿನಲ್ಲಿ ಆಯ್ಕೆಯಾದ ಫಲಾನುಭವಿಗಳಿಗೆ ಪಂಪು ಮೋಟಾರು ಪೈಪುಗಳನ್ನು ವಿತರಿಸುವುದು ತಾಂತ್ರಿಕವಾಗಿ ತಡವಾಗಿದ್ದು ಇದೀಗ ವಿತರಿಸಲಾಗುತ್ತಿದೆ ಎಂದು ಶಾಸಕ ಬಿ.ಎನ್.ರವಿಕುಮಾರ್ ತಿಳಿಸಿದರು.
ನಗರದ ಪ್ರವಾಸಿ ಮಂದಿರದ ಆವರಣದಲ್ಲಿ ಶನಿವಾರ ಭೋವಿ ಅಭಿವೃದ್ದಿ ನಿಗಮದಿಂದ ರೈತರಿಗೆ ಪಂಪು ಮೋಟಾರು ಪೈಪು ಇನ್ನಿತರೆ ಪರಿಕರಗಳನ್ನು ವಿತರಿಸಿ ಅವರು ಮಾತನಾಡಿದರು.
ರಾಜ್ಯ ಸರ್ಕಾರವು ರೈತರನ್ನು ಗಮನದಲ್ಲಿಟ್ಟುಕೊಂಡು ವಿವಿಧ ಅಭಿವೃದ್ದಿ ನಿಗಮಗಳಿಂದ ಗಂಗಾ ಕಲ್ಯಾಣ ಯೋಜನೆಯಡಿ ಕೊಳವೆ ಭಾವಿ ಕೊರೆಸಿ ವಿದ್ಯುತ್ ಸಂಪರ್ಕ ನೀಡಿ ಪಂಪು ಮೋಟಾರು ಪೈಪುಗಳನ್ನು ನೀಡಿ ಕೃಷಿ ಕಾಯಕ ನಡೆಸಿ ಬದುಕನ್ನು ಕಟ್ಟಿಕೊಳ್ಳಲು ಅವಕಾಶ ಮಾಡಿಕೊಡುತ್ತಿದೆ.
ಇದರಿಂದ ಸಾಕಷ್ಟು ರೈತರಿಗೆ ಬಹಳಷ್ಟು ಅನುಕೂಲ ಆಗಲಿದ್ದು, ಅರ್ಹ ಫಲಾನುಭವಿಗಳನ್ನು ಆಯ್ಕೆ ಮಾಡುವ ಹೊಣೆ ನಮ್ಮದು. ನಾನು ಅಧಿಕಾರಿಗಳು ಸೇರಿ ಅರ್ಹರನ್ನು ಆಯ್ಕೆ ಮಾಡುವ ಪ್ರಾಮಾಣಿಕ ಪ್ರಯತ್ನವನ್ನು ಮಾಡುತ್ತಿದ್ದೇವೆ ಎಂದರು.
ಇದೀಗ ಅಂತರ್ಜಲ ಮಟ್ಟ ಕುಸಿದು ಕೊಳವೆ ಬಾವಿಗಳಲ್ಲಿ ನೀರಿನ ಮಟ್ಟ ಕುಸಿದಿದ್ದು ಕೃಷಿಯನ್ನು ಮಾಡುವುದರಿಂದ ಅನೇಕ ರೈತರು ವಿಮುಖರಾಗಿದ್ದಾರೆ. ಕೊಳವೆ ಬಾವಿ ಕೊರೆಸಿ ವಿದ್ಯುತ್ ಸಂಪರ್ಕ ನೀಡಿ ಪಂಪ್ ಮೋಟಾರು ಅಳವಡಿಸಿಕೊಳ್ಳುವಷ್ಟು ಆರ್ಥಿಕವಾಗಿ ಅನೇಕ ರೈತರು ಇಲ್ಲ.
ಅದಕ್ಕಾಗಿ ಸರ್ಕಾರವು ಈ ಯೋಜನೆಯನ್ನು ಜಾರಿಗೆ ತಂದಿದ್ದು ಅರ್ಹ ರೈತರು ಈ ಯೋಜನೆಯನ್ನು ಸದುಪಯೋಗಪಡಿಸಿಕೊಂಡು ಆರ್ಥಿಕವಾಗಿ ಸದೃಡರಾಗಬೇಕು, ಉತ್ತಮ ಬದುಕನ್ನು ಕಟ್ಟಿಕೊಳ್ಳಬೇಕೆಂದು ಮನವಿ ಮಾಡಿದರು.
2018-19ನೇ ಸಾಲಿನಲ್ಲಿ ಆಯ್ಕೆ ಆಗಿದ್ದ 10 ಮಂದಿ ರೈತ ಫಲಾನುಭವಿಗಳಿಗೆ ಪಂಪು ಮೋಟಾರು ಪೈಪುಗಳನ್ನು ವಿತರಿಸಲಾಯಿತು.