Sidlaghatta : ಬಯಲುಸೀಮೆ ಜಿಲ್ಲೆಗಳಿಗೆ ಶಾಶ್ವತ ನೀರಾವರಿ ಯೋಜನೆ ಕಲ್ಪಿಸುವುದು ಸೇರಿದಂತೆ ಎಚ್‌ಎನ್ ವ್ಯಾಲಿ ಹಾಗು ಕೆಸಿ ವ್ಯಾಲಿ ಯೋಜನೆಯ ನೀರಿನ ಮೂರನೇ ಹಂತದ ಶುದ್ದೀಕರಣ ಮಾಡಬೇಕು ಹಾಗು ಬರಗಾಲ ಪೀಡಿತ ಪ್ರದೇಶದ ರೈತರಿಗೆ ಬರ ಪರಿಹಾರವಾಗಿ ಈ ಕೂಡಲೇ ೨೦ ಸಾವಿರ ರೂ ಹಾಕಬೇಕು ಎಂದು ಇಂದು ನಡೆಯುವ ಕಾರ್ಯಕ್ರಮದಲ್ಲಿ ಒತ್ತಾಯಿಸಲಾಗುವುದು ಎಂದು ಸಾಮೂಹಿಕ ನಾಯಕತ್ವದಲ್ಲಿ ಕರ್ನಾಟಕ ರಾಜ್ಯ ರೈತ ಸಂಘ ಹಾಗು ಹಸಿರುಸೇನೆ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಭಕ್ತರಹಳ್ಳಿ ಪ್ರತೀಶ್ ಹೇಳಿದರು.
ಸಾಮೂಹಿಕ ನಾಯಕತ್ವದಲ್ಲಿ ಕರ್ನಾಟಕ ರಾಜ್ಯ ರೈತ ಸಂಘ ಹಾಗು ಹಸಿರುಸೇನೆ ವತಿಯಿಂದ ಪ್ರೊ,ನಂಜುಂಡಸ್ವಾಮಿ ಸ್ಮರಣಾರ್ಥ ಬೆಂಗಳೂರಿನ ರವೀಂದ್ರ ಕಲಾಕ್ಷೇತ್ರದಲ್ಲಿ ಹಮ್ಮಿಕೊಂಡಿರುವ ನಮ್ಮ ಎಂಡಿಎನ್ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲು ಮಂಗಳವಾರ ಶಿಡ್ಲಘಟ್ಟದಿಂದ ತೆರಳಿದ ರೈತರನ್ನು ಉದ್ದೇಶಿಸಿ ಮಾತನಾಡಿದರು.
ಈಗಾಗಲೇ ಬಯಲುಸೀಮೆ ಭಾಗದ ಬಹುತೇಕ ತಾಲ್ಲೂಕುಗಳನ್ನು ಬರಪೀಡಿತ ತಾಲ್ಲೂಕುಗಳು ಎಂದು ಘೋಷಿಸಿರುವ ಸರ್ಕಾರ ರೈತರಿಗೆ ಬಿಕ್ಷೆಯೆಂಬಂತೆ ಎರಡು ಸಾವಿರ ಮಾತ್ರ ಹಾಕಿ ಕೈ ತೊಳೆದುಕೊಂಡಿದೆ. ಕೇಂದ್ರ ಹಾಗು ರಾಜ್ಯ ಸರ್ಕಾರಗಳು ಒಬ್ಬರ ಮೇಲೊಬ್ಬರು ದೂರುತ್ತಾ ರೈತರಿಗೆ ನೀಡಬೇಕಾದ ಬರ ಪರಿಹಾರ ನೀಡದೇ ಕಾಲಹರಣ ಮಾಡುತ್ತಿದೆ. ಈ ಕೂಡಲೇ ರೈತರಿಗೆ ಎಕರೆಯೊಂದಕ್ಕೆ ೨೦ ಸಾವಿರ ರೂ ಬರ ಪರಿಹಾರ ನೀಡುವಂತೆ ಇಂದು ನಡೆಯುವ ಕಾರ್ಯಕ್ರಮದಲ್ಲಿ ಸರ್ಕಾರಕ್ಕೆ ಎಚ್ಚರಿಕೆ ನೀಡಲಾಗುವುದು ಎಂದರು.
ಸಾಮೂಹಿಕ ನಾಯಕತ್ವದಲ್ಲಿ ಕರ್ನಾಟಕ ರಾಜ್ಯ ರೈತ ಸಂಘ ಹಾಗು ಹಸಿರುಸೇನೆ ರಾಜ್ಯ ಉಪಾಧ್ಯಕ್ಷ ಮುನಿಕೆಂಪಣ್ಣ ಮಾತನಾಡಿ ಹಾಲು ಉತ್ಪಾದಕರಿಗೆ ಸರ್ಕಾರದಿಂz ಈ ಹಿಂದೆ ನೀಡುತ್ತಿದ್ದ ಪ್ರೋತ್ಸಾಹಧನ ನಿಲ್ಲಿಸಿರುವ ಕಾಂಗ್ರೆಸ್ ಸರ್ಕಾರ ಕೂಡಲೇ ಅದನ್ನು ನೀಡಬೇಕು. ಈಗಾಗಲೇ ಈ ಭಾಗದಲ್ಲಿ ಹಾಲು ಉತ್ಪಾದನೆ ದಿನೇ ದಿನೇ ಕಡಿಮೆಯಾಗುತ್ತಿದ್ದು ಹಾಲು ಉತ್ಪಾದಕರು ಹಾಗು ಹೈನುಗಾರಿಕೆ ಉಳಿಯಬೇಕಾದರೆ ಸರ್ಕಾರ ಪ್ರೋತ್ಸಹಧನ ನೀಡಲು ಮುಂದಾಗಬೇಕು. ಇಲ್ಲವಾದಲ್ಲಿ ಮುಂದಿನ ದಿನಗಳಲ್ಲಿ ಸರ್ಕಾರದ ವಿರುದ್ದ ಉಗ್ರ ಹೋರಾಟ ಹಮ್ಮಿಕೊಳ್ಳಲಾಗುವುದು ಎಂದರು.
ಈ ಸಂದರ್ಭದಲ್ಲಿ ಜಿಲ್ಲಾ ಗೌರವಾಧ್ಯಕ್ಷ ವೆಂಕಟರಾಮಯ್ಯ, ತಾಲ್ಲೂಕು ಅಧ್ಯಕ್ಷ ಮುನೇಗೌಡ, ಕಾರ್ಯದಶಿ ನವೀನಚಾರ್ಯ, ಕಾರ್ಯಾಧ್ಯಕ್ಷ ಮಾರಪ್ಪ, ರೈತ ಮುಕಂಡರಾದ ಕದಿರೇಗೌಡ, ಡಿ.ವಿ.ನಾರಾಯನದ್ವಾಮಿ, ಅಶ್ವತ್ಥಪ್ಪ, ದೇವರಾಜ್, ರಮೇಶ್‌ರೆಡ್ಡಿ ಮತ್ತಿತರರು ಹಾಜರಿದ್ದರು.