Sidlaghatta : ಜಿಲ್ಲೆಯನ್ನು ಪ್ಲಾಸ್ಟಿಕ್ ಮುಕ್ತಮಾಡಿ ಸ್ವಚ್ಚ ಜಿಲ್ಲೆಯನ್ನಾಗಿಸುವ ಜಿಲ್ಲಾಧಿಕಾರಿಗಳ ಹಾಗೂ ಸರ್ಕಾರದ ಉದ್ದೇಶ ಈಡೇರಲು ಎಲ್ಲ ನಾಗರಿಕರು, ಸಂಘ ಸಂಸ್ಥೆಯವರು, ಅಂಗಡಿ ಹೋಟೆಲ್ ನ ಮಾಲೀಕರು ನಮ್ಮೊಂದಿಗೆ ಸಹಕರಿಸಬೇಕೆಂದು ನಗರಸಭೆ ಪೌರಾಯುಕ್ತ ಆರ್.ಶ್ರೀಕಾಂತ್ ಮನವಿ ಮಾಡಿದರು.
ನಾಗರಿಕರಲ್ಲಿ ಪ್ಲಾಸ್ಟಿಕ್ ಬಳಕೆ ನಿಷೇಧ ಕುರಿತು ಅರಿವು ಮೂಡಿಸಲು ಸೋಮವಾರ ನಗರದಲ್ಲಿ ಹಮ್ಮಿಕೊಂಡಿದ್ದ ಪ್ಲಾಸ್ಟಿಕ್ ನ ಅಣಕು ಶವಯಾತ್ರೆಗೆ ಚಾಲನೆ ನೀಡಿ ಮಾತನಾಡಿದರು.
ಸರ್ಕಾರ ಪ್ಲಾಸ್ಟಿಕ್ ಬಳಕೆಯನ್ನು ಹಂತ ಹಂತವಾಗಿ ನಿಷೇಧ ಮಾಡಿ ಅದಕ್ಕೆ ಸಾಕಷ್ಟು ಕಾಲಾವಕಾಶವನ್ನು ಸಹ ನೀಡಲಾಗಿತ್ತು. ಆದರೂ ಪ್ಲಾಸ್ಟಿಕ್ ಬಳಕೆ ಮುಂದುವರೆದಿದೆ. ಸಂಪೂರ್ಣವಾಗಿ ನಿಷೇಧಿಸಲು ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ಉಸ್ತುವಾರಿ ಸಚಿವರು ಚಿಂತನೆ ನಡೆಸಿದ್ದಾರೆ.
ಆ ಮೂಲಕ ಜಿಲ್ಲೆಯನ್ನು ಪ್ಲಾಸ್ಟಿಕ್ ಮುಕ್ತ, ಸ್ವಚ್ಚ ಜಿಲ್ಲೆಯನ್ನಾಗಿಸುವ ಪಣ ತೊಟ್ಟಿದ್ದಾರೆ. ಅದಕ್ಕೆ ನಮ್ಮ ನಿಮ್ಮೆಲ್ಲರ ಸಹಕಾರ ಮುಖ್ಯ ಎಂದು ಮನವಿ ಮಾಡಿದರು.
ನಿಷೇಧಿತ ಮತ್ತು ಬಳಸಬಹುದಾದ ಪ್ಲಾಸ್ಟಿಕ್ ವಸ್ತುಗಳು ಯಾವುವು ಎಂಬುದನ್ನು ಚಿತ್ರ ಸಮೇತ ಪ್ರದರ್ಶಿಸಲಾಯಿತು. ನಿಷೇಧಿತ ಪ್ಲಾಸ್ಟಿಕ್ ವಸ್ತುಗಳನ್ನು ಬಳಸಿ ಅಣಕು ಶವಯಾತ್ರೆ ಮಾಡಿ ಪ್ಲಾಸ್ಟಿಕ್ ಮುಕ್ತ ಜಿಲ್ಲೆ ಕುರಿತು ನಾಗರಿಕರಲ್ಲಿ ಅರಿವು ಮೂಡಿಸಲಾಯಿತು. ನಗರಸಭೆ ಅಧ್ಯಕ್ಷೆ ಸುಮಿತ್ರರಮೇಶ್ ಸೇರಿ ನಗರಸಭೆ ಅಧಿಕಾರಿಗಳು, ಸಿಬ್ಬಂದಿ ಹಾಜರಿದ್ದರು.