Sidlaghatta : ರೈತರು ಸಹಕಾರ ಸಂಘಗಳು, ಸಹಕಾರ ಬ್ಯಾಂಕುಗಳಿಂದ ಪಡೆಯುವ 15 ಲಕ್ಷ ರೂಪಾಯಿವರೆಗಿನ ಕೃಷಿ ಸಂಬಂಧ ಸಾಲಕ್ಕೆ ಕೇವಲ 3 ರೂ ಬಡ್ಡಿಯನ್ನು ನಿಗಪಡಿಸಿ ರಾಜ್ಯ ಸರ್ಕಾರವು ಆದೇಶಿಸಿದೆ ಎಂದು ಶಾಸಕ ಬಿ.ಎನ್.ರವಿಕುಮಾರ್ ತಿಳಿಸಿದರು.
ನಗರದಲ್ಲಿನ ಪಿಎಲ್‌ಡಿ ಬ್ಯಾಂಕ್ ಆವರಣದಲ್ಲಿ ಬುಧವಾರ ನಡೆದ ಕಾರ್ಯಕ್ರಮದಲ್ಲಿ ರೈತರಿಗೆ ಪಿಎಲ್‌ಡಿ ಬ್ಯಾಂಕ್‌ನಿಂದ ಸಾಲದ ಚೆಕ್ ವಿತರಿಸಿ ಅವರು ಮಾತನಾಡಿದರು.
ರಾಜ್ಯದಲ್ಲಿ ಬರಗಾಲ ಬೀಡು ಬಿಟ್ಟಿದೆ. ಈ ಬರಗಾಲದಲ್ಲಿ ರೈತರು ಸಂಕಷ್ಟಕ್ಕೆ ಸಿಲುಕಿದ್ದಾರೆ. ಹಾಗಾಗಿ ರೈತರ ಪರ ನಿಂತಿರುವ ರಾಜ್ಯ ಸರ್ಕಾರವು ರೈತರಿಗೆ ಶೇ 3 ರೂ ಬಡ್ಡಿಗೆ ನೀಡುತ್ತಿದ್ದ ಸಾಲದ ಮೊತ್ತನವನ್ನು 15 ಲಕ್ಷಕ್ಕೆ ಹೆಚ್ಚಿಸಿದೆ ಎಂದು ವಿವರಿಸಿದರು.
ಸರ್ಕಾರದ ಈ ಯೋಜನೆಯನ್ನು ರೈತರು ಸದುಪಯೋಗಪಡಿಸಿಕೊಳ್ಳಬೇಕು. ಯಾವ ಉದ್ದೇಶಕ್ಕಾಗಿ ಸಾಲ ಪಡೆದಿರುತ್ತೀರೋ ಆ ಉದ್ದೇಶಕ್ಕೆ ಸಾಲದ ಹಣ ಉಪಯೋಗಿಸಿಕೊಳ್ಳಿ. ಲಾಭಗಳಿಸಿ ಸಾಲದ ಕಂತನ್ನು ಸರಿಯಾದ ಸಮಯಕ್ಕೆ ಕಟ್ಟಿ. ಆ ಮೂಲಕ ಬ್ಯಾಂಕ್‌ನ್ನು ಇನ್ನಷ್ಟು ಆರ್ಥಿಕವಾಗಿ ಸದೃಢಗೊಳಿಸಿ ಮತ್ತಷ್ಟು ರೈತರಿಗೆ ಸಾಲ ಸಿಗುವಂತಾಗಬೇಕು. ಸಹಕಾರ ಸಂಘಗಳನ್ನು, ಸಹಕಾರ ಬ್ಯಾಂಕುಗಳನ್ನು ಉಳಿಸುವುದು ನಮ್ಮ ನಿಮ್ಮ ಕೈಯಲ್ಲೇ ಇದೆ ಎಂದು ಹೇಳಿದರು.
ಕೃಷಿಯ ವಿವಿಧ ಬಾಬ್ತುಗಳಿಗೆ ಒಟ್ಟು 1 ಕೋಟಿ ರೂಗಳ ಸಾಲದ ಚೆಕ್‌ನ್ನು 30 ಮಂದಿಗೆ ವಿತರಿಸಲಾಯಿತು.
ಪಿಎಲ್‌ಡಿ ಬ್ಯಾಂಕ್ ಅಧ್ಯಕ್ಷ ಸಿ.ಕೆ.ನಾರಾಯಣಸ್ವಾಮಿ ಅಧ್ಯಕ್ಷತೆವಹಿಸಿದ್ದರು. ನಿರ್ದೇಶಕರಾದ ಬಂಕ್ ಮುನಿಯಪ್ಪ, ದಿಬ್ಬೂರಹಳ್ಳಿ ಡಿ.ಸಿ.ರಾಮಚಂದ್ರ, ಮಂಜುನಾಥ್, ಸಿ.ವಿ.ನಾರಾಯಣಸ್ವಾಮಿ, ಸುರೇಶ್, ಸುನಂದಮ್ಮ, ಮುರಳಿ, ವ್ಯವಸ್ಥಾಪಕ ಕೃಷ್ಣನ್ ಹಾಜರಿದ್ದರು.