Sidlaghatta : ರಿಪಬ್ಲಿಕನ್ ಪಾರ್ಟಿ ಆಫ್ ಇಂಡಿಯಾ ಪಕ್ಷದ ರಾಷ್ಟ್ರೀಯ ಕಾರ್ಯಾಧ್ಯಕ್ಷ ಡಾ.ಎಂ.ವೆಂಕಟಸ್ವಾಮಿ ನೇತೃತ್ವದಲ್ಲಿ ಇದೇ ಜನವರಿ 30 ರಂದು ಕೋಲಾರ ಲೋಕಸಭಾ ಕ್ಷೇತ್ರದ ಕಾರ್ಯಕರ್ತರ ಬೃಹತ್ ಸಮಾವೇಶ ಹಮ್ಮಿಕೊಳ್ಳಲಾಗಿದೆ ಎಂದು ರಾಜ್ಯ ಪ್ರಧಾನ ಕಾರ್ಯದರ್ಶಿ ಜಿ.ಸಿ.ವೆಂಕಟರಮಣಪ್ಪ ತಿಳಿಸಿದರು.
ನಗರದ ಕಾರ್ಯನಿರತ ಪತ್ರಕರ್ತರ ಸಂಘದ ಆವರಣದಲ್ಲಿ ಶನಿವಾರ ಹಮ್ಮಿಕೊಂಡಿದ್ದ ಪತ್ರಿಕಾಗೋಷ್ಠಿಯಲ್ಲಿ ಭಾಗವಹಿಸಿ ಅವರು ಮಾತನಾಡಿದರು.
ಸ್ವಾತಂತ್ರ್ಯ ನಂತರ ಬಹುತೇಕ ಶೋಷಿತ ವರ್ಗದ ಜನರು ರಾಷ್ಟ್ರೀಯ ಪಕ್ಷಗಳಿಗೆ ಬೆಂಬಲ ನೀಡಿ ಅಧಿಕಾರ ನೀಡಿದವಾದರೂ ಅಧಿಕಾರಕ್ಕೆ ಬಂದ ಯಾವೊಂದು ಪಕ್ಷವು ಶೋಷಿತ ವರ್ಗದ ಪರ ನಿಲ್ಲಲಿಲ್ಲ. ಹಾಗಾಗಿ ಮುಂಬರುವ ಲೋಕಸಭೆ ಚುನಾವಣೆಯಲ್ಲಿ ರಾಜ್ಯದ ಎಲ್ಲಾ ಲೋಕಸಭೆ ಕ್ಷೇತ್ರಗಳಲ್ಲಿಯೂ ಸ್ಪರ್ಧೆ ನಡೆಸಲು ನಿಶ್ಚಯಿಸಿದ್ದು ಈ ಬಗ್ಗೆ ಜ 30 ರಂದು ನಡೆಯಲಿರುವ ಕಾರ್ಯಕರ್ತರ ಸಮಾವೇಶದಲ್ಲಿ ನಿರ್ಣಯ ಕೈಗೊಳ್ಳಲಾಗುವುದು ಎಂದರು.
ಮುಂಬರುವ ಲೋಕಸಭೆ ಚುನಾವಣೆಯ ಹಿನ್ನಲೆಯಲ್ಲಿ ಕೋಲಾರ ಮೀಸಲು ಕ್ಷೇತ್ರವನ್ನು ಆರ್.ಪಿ.ಐ ಪಕ್ಷ ವಿಶೇಷವಾಗಿ ಪರಿಗಣಿಸಲಾಗಿದೆ. ಹಾಗಾಗಿ ಪ್ರತಿಯೊಬ್ಬರೂ ಮತದಾನಕ್ಕೂ ಮುನ್ನ ಯೋಚಿಸಿ ಮತ ಚಲಾಯಿಸಿ, ಮತವನ್ನು ಮಾರಿಕೊಂಡರೆ ಗುಲಾಮಗಿರಿಗೆ ಬೆಂಬಲಿಸಿದಂತೆ ಹಾಗಾಗಿ ಮುಂಬರುವ ಚುನಾವಣೆಯಲ್ಲಿ ಆರ್.ಪಿ.ಐ ಪಕ್ಷವನ್ನು ಬೆಂಬಲಿಸುವಂತೆ ಮನವಿ ಮಾಡಿದರು.
ಕೋಲಾರ ಜಿಲ್ಲಾಧ್ಯಕ್ಷ ಶ್ರೀನಿವಾಸ್ ಮಾತನಾಡಿ, ಮುಂಬರುವ ಲೋಕಸಭೆ ಚುನಾವಣೆಯಲ್ಲಿ ಶೋಷಿತ ವರ್ಗಗಳ ಜನರು ಆರ್.ಪಿ.ಐ ಪಕ್ಷವನ್ನು ಬೆಂಬಲಿಸುವ ವಾತಾವರಣ ನಿರ್ಮಾಣವಾಗಿದೆ. ಶಿಡ್ಲಘಟ್ಟ ವಿಧಾನಸಭಾ ಕ್ಷೇತ್ರದ ಕಾರ್ಯಕರ್ತರ ಮತ್ತು ಮುಖಂಡರ ಸಭೆಯ ಮೂಲಕ ನಮ್ಮ ಪಕ್ಷದ ಪ್ರಚಾರವನ್ನು ಶುರುಮಾಡಲಾಗಿದೆ ಎಂದರು.
ಜಿಲ್ಲಾ ಕಾರ್ಯದರ್ಶಿ ಕೆ.ಎಸ್.ದ್ಯಾವಕೃಷ್ಣಪ್ಪ ಮಾತನಾಡಿ, ಸಂವಿಧಾನಬದ್ದವಾದ ಜಾತ್ಯತೀತ ಮೌಲ್ಯಗಳು ಜಾರಿಯಾಗಿ ಶೋಷಿತ ಸಮುದಾಯಗಳಿಗೆ ಸಾಮಾಜಿಕವಾಗಿ, ಆರ್ಥಿಕವಾಗಿ ಅವಕಾಶಗಳನ್ನು ಕಲ್ಪಿಸಿಕೊಡಬೇಕು. ಆರ್.ಪಿ.ಐ ಪಕ್ಷದ ಚುನಾವಣೆ ಪ್ರಣಾಳಿಕೆ ಸಂವಿಧಾನದ ಪೀಠಿಕೆಯೇ ಆಗಿದೆ. ಸಂವಿಧಾನ ಆಶಯದಡಿಯಲ್ಲಿರುವ ಅಂಶಗಳನ್ನು ಜಾರಿಗೆ ತರಲು ನಮ್ಮ ಪಕ್ಷ ಪ್ರಾಮಾಣಿಕ ಪ್ರಯತ್ನ ಮಾಡುತ್ತದೆ. ಇಂತಹ ಅವಕಾಶ ಕಲ್ಪಿಸುವುದೇ ಆರ್.ಪಿ.ಐ ಪಕ್ಷದ ಗುರಿಯಾಗಿದೆ ಎಂದರು.
ಈ ಸಂದರ್ಭದಲ್ಲಿ ರಾಜ್ಯ ಕಾರ್ಯಕಾರಿ ಸಮಿತಿ ಸದಸ್ಯ ಅಂಬರೀಶ್, ಚಿಕ್ಕಬಳ್ಳಾಪುರ ಜಿಲ್ಲಾಧ್ಯಕ್ಷ ಈಶ್ವರಪ್ಪ, ತಾಲ್ಲೂಕು ಅಧ್ಯಕ್ಷ ಕೆ.ಎಸ್.ಕೃಷ್ಣಮೂರ್ತಿ, ಎಂ.ವಿಜಯಕುಮಾರ, ಕೃಷ್ಣಪ್ಪ, ಟಿ.ಗಂಗಾಧರ, ಚಿಕ್ಕನರಸಿಂಹ ಹಾಜರಿದ್ದರು.