Kundalagurki, Sidlaghatta : ಕೀಟ ನಾಶಕಗಳ ಬಳಕೆಯಿಂದಾಗಿ, ಭೂಮಿಯಲ್ಲಿ ಮತ್ತು ಕೃಷಿ, ತೋಟಗಾರಿಕೆ ಉತ್ಪನ್ನಗಳಾದ ಹಣ್ಣು ತರಕಾರಿಗಳಲ್ಲೂ ಕೀಟ ನಾಶಕಗಳ ಪ್ರಮಾಣ ನಿಗಧಿಗಿಂತಲೂ ಅತ್ಯಧಿಕವಾಗಿದೆ.
ಇದರಿಂದ ಭೂಮಿಯ ಫಲವತ್ತತೆ ಮೇಲೆ ಹಾಗೂ ಅದನ್ನು ಸೇವಿಸುವ ದನಕರುಗಳು ಹಾಗೂ ನಮ್ಮ ಆರೋಗ್ಯದ ಮೇಲೆ ದುಷ್ಪರಿಣಾಮ ಬೀರುತ್ತಿದೆ ಎಂದು ಕೃಷಿ ಉಪ ನಿರ್ದೇಶಕಿ ಎಂ.ಎನ್.ಮಂಜುಳ ಆತಂಕ ವ್ಯಕ್ತಪಡಿಸಿದರು.
ತಾಲ್ಲೂಕಿನ ಕುಂದಲಗುರ್ಕಿ ಗ್ರಾಮದಲ್ಲಿ ಹಮ್ಮಿಕೊಂಡಿದ್ದ 2024-25ನೇ ಸಾಲಿನ ಸುರಕ್ಷಿತ ಕೀಟ ನಾಶಕಗಳ ಬಳಕೆ ಹಾಗೂ ಬೀಜೋಪಚಾರ ಆಂದೋಲನ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಯಥೇಚ್ಛ ಕೀಟನಾಶಕಗಳ ಬಳಕೆಯಿಂದ ಆಗುತ್ತಿರುವ ಭೂಮಿಯ ಮಲಿನತೆಯನ್ನು ಕಡಿಮೆ ಮಾಡಲು ಹಾಗೂ ನಮ್ಮ ಆರೋಗ್ಯದ ಹಿತ ದೃಷ್ಟಿಯಿಂದ ಕೀಟ ನಾಶಕಗಳ ಬಳಕೆ ಕಡಿಮೆ ಮಾಡಬೇಕು, ಇಲಾಖೆ ಅಧಿಕಾರಿಗಳು, ತಜ್ಞರು ಶಿಫಾರಸ್ಸು ಮಾಡುವ ಸುರಕ್ಷಿತ ಕೀಟ ನಾಶಕಗಳನ್ನು ಅಗತ್ಯ ಪ್ರಮಾಣದಲ್ಲಿ ಬಳಕೆ ಮಾಡಬೇಕೆಂದು ರೈತರಲ್ಲಿ ಮನವಿ ಮಾಡಿದರು.
ತಕ್ಷಣಕ್ಕೆ ಬೆಳೆ ಬೆಳೆದು ಲಾಭ ಮಾಡುವುದನ್ನು ಬಿಟ್ಟು ನಮ್ಮ ಹಾಗೂ ಭೂಮಿಯ ಆರೋಗ್ಯವನ್ನು ಕಾಪಾಡಿಕೊಳ್ಳುವ ಜವಾಬ್ದಾರಿ ನಮ್ಮದು. ಮುಂದಿನ ಪೀಳಿಗೆಗೂ ಮಲಿನವಾಗದ ಫಲವತ್ತತೆಯ ಭೂಮಿಯನ್ನು ಕೊಡುಗೆ ನೀಡಲು ನಾವೆಲ್ಲರೂ ಪ್ರಾಮಾಣಿಕ ಪ್ರಯತ್ನ ಮಾಡಬೇಕೆಂದು ಕೋರಿದರು.
ಕೃಷಿ ವಿಜ್ಞಾನ ಕೇಂದ್ರದ ವಿಜ್ಞಾನಿ ಡಾ.ಪಾಪಿರೆಡ್ಡಿ ಮಾತನಾಡಿ, ಬೀಜೋಪಚಾರ ಮಾಡುವುದರಿಂದ ಮೊಳಕೆ ಹೊಡೆಯುವ ಪ್ರಮಾಣ ಹೆಚ್ಚುತ್ತದೆ. ಹಾಗೆಯೆ ಕೀಟ ಬಾಧೆ ಮತ್ತು ರೋಗಗಳ ಪ್ರಮಾಣವೂ ಕಡಿಮೆ ಮಾಡಿ ಹೆಚ್ಚು ಇಳುವರಿ ಮತ್ತು ಹೆಚ್ಚು ಲಾಭಗಳಿಸಬಹುದು ಎಂದು ವಿವರಿಸಿದರು.
ಸುರಕ್ಷಿತ ಕೀಟ ನಾಶಕಗಳ ಬಳಕೆಯಿಂದ ಆಗುವ ಉಪಯೋಗ, ಬಳಸುವ ವಿಧಾನವನ್ನು ವಿವರಿಸಿದ ಅವರು ಕೀಟ ನಾಶಕಗಳನ್ನು ಬಳಸುವಾಗ ರೈತರು ಮುಖಕ್ಕೆ ರಕ್ಷಾ ಕವಚವನ್ನು ಬಳಸಬೇಕು ಇಲ್ಲವಾದಲ್ಲಿ ನಿಮ್ಮ ಆರೋಗ್ಯದ ಮೇಲೆ ಅದು ಪರಿಣಾಮ ಬೀರಲಿದೆ ಎಂದು ರೈತರಿಗೆ ಸಲಹೆ ನೀಡಿದರು.
ಕೃಷಿ ಸಹಾಯಕ ನಿರ್ದೇಶಕ ಪಿ.ಆರ್.ರವಿ ಮಾತನಾಡಿ, ಕೃಷಿ ಇಲಾಖೆಯಿಂದ ಸಿಗುವ ಪಿ.ಎಂ.ಕಿಸಾನ್, ಕೃಷಿ ಯಾಂತ್ರೀಕರಣ, ಅಟಲ್ ಭೂ ಜಲ್, ಕೃಷಿ ಸಿಂಚಾಯ್ ಯೋಜನೆ ಸೇರಿದಂತೆ ಇತರೆ ಯೋಜನೆಗಳ ಬಗ್ಗೆ ಮಾಹಿತಿ ನೀಡಿ ಫಲಾನುಭವಿಗಳಾಗಲು ಇರಬೇಕಾದ ಅರ್ಹತೆ, ಒದಗಿಸಬೇಕಾದ ಅರ್ಹರೆ, ಸರಕಾರದಿಂದ ಸಿಗುವ ರಿಯಾಯಿತಿ ಇನ್ನಿತರೆ ವಿಷಯಗಳ ಬಗ್ಗೆ ವಿಷಯ ಹಂಚಿಕೊಂಡರು.
ಕುಂದಲಗುರ್ಕಿ ಗ್ರಾಮ ಪಂಚಾಯಿತಿ ಅಧ್ಯಕ್ಷೆ ಸುನಂದಮ್ಮ, ಉಪಾಧ್ಯಕ್ಷ ಮುನಿರಾಜು, ಕೃಷಿ ಅಧಿಕಾರಿ ಪ್ರವೀಣ್, ಬಿಟಿಎಂ ಭಾರ್ಗವಿ, ಗ್ರಾಮ ಪಂಚಾಯಿತಿ ಸದಸ್ಯರು, ರೈತರು ಹಾಜರಿದ್ದರು.