Appegowdanahalli, Sidlaghatta : ತಾಲ್ಲೂಕಿನ ಅಪ್ಪೇಗೌಡನಹಳ್ಳಿಯ ರೈತ ಕೋಟೆ ಕೃಷ್ಣಪ್ಪ ಸಾಕಿರುವ ಕುರಿಯೊಂದು ಒಂದೇ ಬಾರಿ ನಾಲ್ಕು ಮರಿಗಳಿಗೆ ಜನ್ಮ ನೀಡಿದ್ದು, ಈ ಅಪರೂಪದ ಘಟನೆಯು ಸ್ಥಳೀಯ ರೈತರು ಮತ್ತು ಪಶು ವೈದ್ಯರಲ್ಲಿ ಆಶ್ಚರ್ಯ ಮೂಡಿಸಿದೆ. ಸಾಮಾನ್ಯವಾಗಿ ಕುರಿಗಳು ಒಂದು ಮರಿಗೆ ಜನ್ಮ ನೀಡುವರೆಂಬುದು ಸಹಜ, ಕೆಲವೊಮ್ಮೆ ಎರಡು ಮರಿಗಳು ಜನಿಸುವ ಘಟನೆಯೂ ಸಂಭವಿಸಬಹುದು. ಆದರೆ, ಈ ಬಾರಿ ಒಂದೇ ಬಾರಿಯಲ್ಲೇ ನಾಲ್ಕು ಮರಿಗೆ ಜನ್ಮ ನೀಡಿರುವುದು ವಿಶೇಷವೆನಿಸಿದೆ.
ಈ ಕುರಿ ಹಿಂದಿನ ಸಂದರ್ಭಗಳಲ್ಲಿ ಒಮ್ಮೆ ಎರಡು ಮರಿಗಳಿಗೆ, ಮತ್ತೊಮ್ಮೆ ಮೂರು ಮರಿಗಳಿಗೆ ಜನ್ಮ ನೀಡಿತ್ತು. ಆದರೆ ಈ ಬಾರಿ ನಾಲ್ಕು ಮರಿಗಳಿಗೆ ಜನ್ಮ ನೀಡಿರುವುದು ರೈತ ಕೋಟೆ ಕೃಷ್ಣಪ್ಪನಿಗೆ ಭಾರೀ ಸಂತಸ ತಂದಿದೆ. ಮರಿಗಳು ಆರೋಗ್ಯವಾಗಿದ್ದು, ಸರಿಯಾಗಿ ಬೆಳೆದರೆ ಇದು ಕೃಷಿ ಮತ್ತು ಪಶು ಸಂಗೋಪನಾ ಕ್ಷೇತ್ರದಲ್ಲಿ ಮತ್ತೊಂದು ವಿಶೇಷ ಸಾಧನೆಯಾಗಲಿದೆ.
ಪಶು ವೈದ್ಯ ಡಾ.ಶ್ರೀನಾಥರೆಡ್ಡಿ ಈ ಕುರಿ ಅಪರೂಪದ ಜಾತಿಯ ಚಳ್ಳಕೆರೆ ಕ್ರಾಸ್‌ಬ್ರೀಡ್ ಆಗಿದ್ದು, ಅದರ ವಂಶವಾಹಿಯ ಗುಣಮಟ್ಟ ಅತ್ಯುತ್ತಮವಾಗಿದೆ ಎಂದು ಹೇಳಿದ್ದಾರೆ. ಅಲ್ಲದೆ, ರೈತರ ಸೂಕ್ತ ಆರೈಕೆ ಮತ್ತು ಆಹಾರದ ಒದಗಣೆ ಕುರಿಯಲ್ಲಿ ಹೆಚ್ಚಿನ ಅಂಡಾಣು ಉತ್ಪತ್ತಿಗೆ ಸಹಾಯ ಮಾಡಿದ್ದರಿಂದ ಈ ರೀತಿಯ ಅಪರೂಪದ ಘಟನೆ ಸಂಭವಿಸಿರಬಹುದು ಎಂದಿದ್ದಾರೆ.
“ನಾಲ್ಕು ಮರಿಗೆ ಜನ್ಮ ನೀಡಿದ ಕುರಿಯಂತಹ ಅಪರೂಪದ ಘಟನೆಗಳು ಬಹಳ ವಿರಳ. ಪಶು ಸಂಪತ್ತಿನ ಅಭಿವೃದ್ಧಿಗೆ ಇಂತಹ ತಳಿಗಳ ಸಂವರ್ಧನೆ ಮತ್ತು ಸಂರಕ್ಷಣೆ ಅಗತ್ಯ,” ಎಂದು ರೈತ ಕೋಟೆ ಕೃಷ್ಣಪ್ಪ ಹೇಳಿದ್ದಾರೆ.