Sidlaghatta : ಶಿಡ್ಲಘಟ್ಟ ನಗರದ ದಿಬ್ಬೂರಹಳ್ಳಿ ರಸ್ತೆಯ ನ್ಯಾಯಾಲಯದ ಸಮೀಪವಿರುವ ಮೈದಾನದಲ್ಲಿ ಶ್ರೀ ಕೆಂಪೇಗೌಡರ ಜಯಂತೋತ್ಸವ ಆಚರಣಾ ಸಮಿತಿ ವತಿಯಿಂದ ಸೋಮವಾರ ಆಯೋಜಿಸಲಾಗಿದ್ದ ನಾಡಪ್ರಭು ಕೆಂಪೇಗೌಡರ 518 ನೇ ಜಯಂತೋತ್ಸವ (Kempegowda Jayanthi) ಹಾಗು ಪ್ರತಿಭಾ ಪುರಸ್ಕಾರ ಕಾರ್ಯಕ್ರಮದಲ್ಲಿ ಆಶೀರ್ವಚನ ನೀಡಿ ವಿಶ್ವ ಒಕ್ಕಲಿಗರ ಮಹಾಸಂಸ್ಥಾನ ಮಠದ ಕುಮಾರ ಚಂದ್ರಶೇಖರನಾಥ ಸ್ವಾಮೀಜಿ ಅವರು ಮಾತನಾಡಿದರು.
ದುರಭ್ಯಾಸಗಳಿಂದ ಯಾರೂ ಉದ್ದಾರವಾಗಿಲ್ಲ ಹಾಗಾಗಿ ಯುವಜನರು ಮತ್ತು ಮಕ್ಕಳು ಕೆಟ್ಟ ಹವ್ಯಾಸ, ದುಶ್ಚಟ, ದುರಭ್ಯಾಸಗಳಿಂದ ದೂರವಿರಬೇಕು. ಆಗ ಪ್ರತಿಯೊಬ್ಬರ ಮನೆಯೂ ನಂದಗೋಕುಲದಂತೆ ಸುಖ ಸಂತೋಷದಿಂದ ಇರುತ್ತದೆ.
ತಾವು ಪಟ್ಟ ಕಷ್ಟ ನಮ್ಮ ಮಕ್ಕಳು ಪಡಬಾರದು ಎಂದು ಮಕ್ಕಳನ್ನು ಅತ್ಯಂತ ಪ್ರೀತಿಯಿಂದ ಸಾಕಿದರೆ ನಿಮ್ಮ ಪ್ರೀತಿಯೇ ಮಕ್ಕಳ ಜೀವನಕ್ಕೆ ಮುಳುವಾಗುತ್ತದೆ. ಅತಿಯಾದ ಮುದ್ದು ಮಾಡಿ ಮಕ್ಕಳನ್ನು ಬೆಳೆಸುವುದರಿಂದ ಮಕ್ಕಳು ಹಾದಿ ತಪ್ಪುವುದೇ ಹೆಚ್ಚು. ಹಾಗಾಗಿ ಮಕ್ಕಳು ತಂದೆ, ತಾಯಿ ಹೇಳಿದಂತೆ ಕೇಳುವ ಹಾಗೆ ಬೆಳೆಸಬೇಕು. ನಾಡಪ್ರಭು ಕೆಂಪೇಗೌಡರ ಜಯಂತಿಯ ಹಿನ್ನಲೆಯಲ್ಲಿ ಸಮಾಜಕ್ಕೆ ಏನಾದರೂ ಒಳ್ಳೆಯದನ್ನು ಮಾಡಬೇಕು ಎನ್ನುವ ಸಂಕಲ್ಪ ಪ್ರತಿಯೊಬ್ಬರು ಮಾಡಬೇಕೆಂದರು.
ಚಿಕ್ಕಬಳ್ಳಾಪುರ ಶಾಖಾ ಮಠದ ಶ್ರೀ ಮಂಗಳಾನಂದನಾಥ ಸ್ವಾಮೀಜಿ ಮಾತನಾಡಿ, ಸಮಾಜದ ಎಲ್ಲಾ ಸಮುದಾಯಗಳ ಕಷ್ಟ, ಕಾರ್ಪಣ್ಯಗಳಿಗೆ ಸ್ಪಂದಿಸುವ ಗುಣ ಯಾರಿಗಾದರೂ ಇದೆ ಎಂದರೆ ಅದು ಕೇವಲ ಒಕ್ಕಲಿಗ ಸಮುದಾಯಕ್ಕೆ ಮಾತ್ರ ಎಂದರು.
ಮುಖ್ಯ ಭಾಷಣಕಾರ ಮುನಿರೆಡ್ಡಿ ಮಾತನಾಡಿ, ಸಮಾಜದ ಎಲ್ಲಾ ಸಮುದಾಯಗಳ ಎಲ್ಲಾ ಕಸುಬುಗಳಿಗೆ ಮನ್ನಣೆ ಸಿಕ್ಕಾಗ ಮಾತ್ರ ಉತ್ತಮ ಸಮಾಜ ನಿರ್ಮಾಣ ಮಾಡಲು ಸಾಧ್ಯವಾಗುತ್ತದೆ ಎಂಬ ಸತ್ಯವನ್ನಿರಿತು ನಾಡಪ್ರಭು ಕೆಂಪೇಗೌಡರು ನಿರ್ಮಿಸಿದ ಬೆಂಗಳೂರು ಇಂದು ಬೃಹತ್ ಬೆಂಗಳೂರು ಆಗಿ ವಿಶ್ವ ಖ್ಯಾತಿ ಪಡೆದಿದೆ. ಅವರ ಆದರ್ಶಗಳನ್ನು ಪ್ರತಿಯೊಬ್ಬರೂ ತಮ್ಮ ಜೀವನದಲ್ಲಿ ಅಳವಡಿಸಿಕೊಳ್ಳಬೇಕು ಎಂದು ಹೇಳಿದರು.
ಎಸ್ಸೆಸ್ಸೆಲ್ಸಿ ಮತ್ತು ಪಿಯುಸಿ ಪರೀಕ್ಷೆಯಲ್ಲಿ ಅತಿ ಹೆಚ್ಚು ಅಂಕಗಳನ್ನು ಪಡೆದಿರುವ ಸಮುದಾಯದ ವಿದ್ಯಾರ್ಥಿಗಳನ್ನು ಪುರಸ್ಕರಿಸಲಾಯಿತು.
ಮಾಜಿ ಶಾಸಕ ಎಂ.ರಾಜಣ್ಣ, ಜೆಡಿಎಸ್ ಮುಖಂಡ ಬಿ.ಎನ್.ಸಚಿನ್, ಎಸ್.ಎನ್.ಕ್ರಿಯಾ ಟ್ರಸ್ಟ್ ಅಧ್ಯಕ್ಷ ಕಾಂಗ್ರೆಸ್ ಮುಖಂಡ ಆಂಜಿನಪ್ಪ ಪುಟ್ಟು, ಶಿವಮೊಗ್ಗ ಶಾಖಾ ಮಠದ ಶ್ರೀ ರಮಾನಂದ ಸ್ವಾಮೀಜಿ, ಮುಖಂಡರಾದ ತಾದೂರು ರಘು, ಕೆ.ಲಕ್ಷ್ಮಿನಾರಾಯಣ ರೆಡ್ಡಿ, ಶ್ರೀ ಕೆಂಪೇಗೌಡರ ಜಯಂತೋತ್ಸವ ಆಚರಣಾ ಸಮಿತಿಯ ಬಿ.ನಾರಾಯಣಸ್ವಾಮಿ, ಕೆ.ಎನ್.ಸುಬ್ಬಾರೆಡ್ಡಿ, ಜೆ.ವಿ.ವೆಂಕಟಸ್ವಾಮಿ, ಎ.ಎಂ.ತ್ಯಾಗರಾಜ್, ಪುರುಶೋತ್ತಮ್ ಹಾಗೂ ಆಚರಣಾ ಸಮಿತಿ ಪದಾಧಿಕಾರಿಗಳು ಹಾಜರಿದ್ದರು.