Sidlaghatta : Congress ಪಕ್ಷಕ್ಕೆ ದ್ರೋಹ ಬಗೆದ ಪುಟ್ಟು ಆಂಜಿನಪ್ಪ ಅವರನ್ನು ಯಾವುದೆ ಕಾರಣಕ್ಕೂ ಮತ್ತೆ ಪಕ್ಷಕ್ಕೆ ಸೇರಿಸಿಕೊಳ್ಳಬಾರದು ಎಂದು ಶಿಡ್ಲಘಟ್ಟದ ಕಾಂಗ್ರೆಸ್ ಕಾರ್ಯಕರ್ತರು ಚಿಕ್ಕಬಳ್ಳಾಪುರ ಹಾಗೂ ಕೋಲಾರ ಜಿಲ್ಲಾ ಉಸ್ತುವಾರಿ ಸಚಿವರನ್ನು ಆಗ್ರಹಿಸಿದ್ದಲ್ಲದೆ, ಪ್ರತಿಭಟನೆ ನಡೆಸಿ ತಮ್ಮ ಆಕ್ರೋಶವನ್ನು ವ್ಯಕ್ತಪಡಿಸಿದರು.
ಮುಳಬಾಗಿಲಿನ ಕುರುಡುಮಲೆಯ ವಿನಾಯಕನ ದೇವಾಲಯದಲ್ಲಿ ಪೂಜೆ ಸಲ್ಲಿಸಲು ಕೋಲಾರ ಸಂಸತ್ ಕ್ಷೇತ್ರದ ಅಭ್ಯರ್ಥಿ ಗೌತಮ್ ಅವರೊಂದಿಗೆ ಸೋಮವಾರ ಆಗಮಿಸಿದ್ದ ಸಚಿವ ಡಾ.ಎಂ.ಸಿ.ಸುಧಾಕರ್, ಬೈರತಿ ಸುರೇಶ್ ಅವರನ್ನು ರಾಜೀವ್ ಗೌಡ ನೇತೃತ್ವದಲ್ಲಿ ನೂರಾರು ಕಾಂಗ್ರೆಸ್ ಕಾರ್ಯಕರ್ತರು ಭೇಟಿ ಮಾಡಿ ಪುಟ್ಟು ಆಂಜಿನಪ್ಪ ಅವರನ್ನು ಮತ್ತೆ ಕಾಂಗ್ರೆಸ್‌ಗೆ ಸೇರಿಸಿಕೊಳ್ಳಬಾರದು ಎಂದು ಒತ್ತಾಯಿಸಿದರು.
ಕಳೆದ ವಿಧಾನಸಭಾ ಚುನಾವಣೆಯಲ್ಲಿ ಸ್ವತಂತ್ರ್ಯ ಅಭ್ಯರ್ಥಿಯಾಗಿ ಸ್ಪರ್ಧಿಸಿ ಕಾಂಗ್ರೆಸ್ ನ ಅಧಿಕೃತ ಅಭ್ಯರ್ಥಿ ರಾಜೀವ್ ಗೌಡ ಅವರ ಸೋಲಿಗೆ ಕಾರಣವಾಗಿರುವ ಪುಟ್ಟು ಆಂಜಿನಪ್ಪ ಅವರನ್ನು ಈಗಾಗಲೆ ಪಕ್ಷ ವಿರೋಧಿ ಚಟುವಟಿಕೆಗಳ ಆಧಾರದಲ್ಲಿ ಕಾಂಗ್ರೆಸ್ ಪಕ್ಷದಿಂದ ಉಚ್ಛಾಟಿಸಲಾಗಿದೆ.
ಆದರೆ ಮತ್ತೆ ಇದೀಗ ಅವರನ್ನು ಕಾಂಗ್ರೆಸ್ ಪಕ್ಷಕ್ಕೆ ಸೇರಿಸಿಕೊಳ್ಳುವ ಪ್ರಯತ್ನ ನಡೆದಿದ್ದು, ಇದರಿಂದ ಪಕ್ಷಕ್ಕೆ ಲಾಭದ ಬದಲಿಗೆ ನಷ್ಟವೇ ಹೆಚ್ಚು. ಜತೆಗೆ ಕೇತ್ರದ ಕಾಂಗ್ರೆಸ್ ಕಾರ್ಯಕರ್ತರಲ್ಲಿ ಗೊಂದಲಗಳು ಉದ್ಭವಿಸಲಿದೆ. ಸಂಘಟನೆ ಕುಂಠಿತಗೊಳ್ಳಲಿದೆ, ಇದರಿಂದ ವಿರೋಧ ಪಕ್ಷದವರಿಗೆ ಅನುಕೂಲ ಆಗಲಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಶಿಡ್ಲಘಟ್ಟ ಕ್ಷೇತ್ರದಲ್ಲಿ ಕಾಂಗ್ರೆಸ್ ಪಕ್ಷ ಸಂಘಟನೆಗೆ ಪುಟ್ಟು ಆಂಜಿನಪ್ಪ ಅವರ ಕೊಡುಗೆ ಏನೂ ಇಲ್ಲ. ಜೆಡಿಎಸ್ ಪಕ್ಷದವರೊಂದಿಗೆ ಒಳ ಒಪ್ಪಂದ ಮಾಡಿಕೊಂಡಿರುವ ಅವರು ಚುನಾವಣೆ ಬಂದಾಗ ಕಾಂಗ್ರೆಸ್ ಪಕ್ಷದಲ್ಲಿ ಗೊಂದಲಗಳನ್ನು ಸೃಷ್ಟಿಸಿ ಕಾಂಗ್ರೆಸ್ ಪಕ್ಷಕ್ಕೆ ಹಿನ್ನಡೆ ಆಗುವಂತೆ ಮಾಡುವುದೆ ಅವರ ಸಾಧನೆಯಾಗಿದೆ. ಅಂತಹವರನ್ನು ಕಾಂಗ್ರೆಸ್ ಪಕ್ಷಕ್ಕೆ ಯಾವುದೆ ಕಾರಣಕ್ಕೂ ಸೇರಿಸಿಕೊಳ್ಳಬಾರದು ಎಂದು ಒತ್ತಾಯಿಸಿದರು.
ಸಚಿವ ಬೈರತಿ ಸುರೇಶ್ ಭರವಸೆ :
ಈ ವೇಳೆ ಶಿಡ್ಲಘಟ್ಟದ ಕಾಂಗ್ರೆಸ್ ಕಾರ್ಯಕರ್ತರನ್ನು ಉದ್ದೇಶಿಸಿ ಮಾತನಾಡಿದ ಕೋಲಾರ ಜಿಲ್ಲಾ ಉಸ್ತುವಾರಿ ಸಚಿವ ಬೈರತಿ ಸುರೇಶ್, ಕಾಂಗ್ರೆಸ್ ಪಕ್ಷ ದೊಡ್ಡ ಸಮುದ್ರ ಇದ್ದಂತೆ. ಇಲ್ಲಿ ಅನೇಕರು ಬರುತ್ತಾರೆ ಹೋಗುತ್ತಾರೆ. ಎಲ್ಲರಿಗೂ ಕಾಂಗ್ರೆಸ್ ಪಕ್ಷ ಅನಿವಾರ್ಯವೇ ಹೊರತು ಕಾಂಗ್ರೆಸ್ ಗೆ ಯಾರೂ ಅನಿವಾರ್ಯವಲ್ಲ ಎಂದರು.
ಸಂಸತ್ ಚುನಾವಣೆಯಲ್ಲಿ ಪಕ್ಷದ ಅಭ್ಯರ್ಥಿಗಳ ಗೆಲುವು ಮುಖ್ಯ. ಹಾಗಾಗಿ ಪಕ್ಷದ ತತ್ವ ಸಿದ್ದಾಂತಗಳನ್ನು ಒಪ್ಪಿ ಬರುವ ಎಲ್ಲರನ್ನೂ ಪಕ್ಷ ಬರ ಮಾಡಿಕೊಳ್ಳುತ್ತದೆ. ಅದರಂತೆ ಪುಟ್ಟು ಆಂಜಿನಪ್ಪ ಅವರನ್ನೂ ಸಹ ಹೈ ಕಮಾಂಡ್‌ನ ಒಪ್ಪಿಗೆ ಇದ್ದರೆ ಪಕ್ಷಕ್ಕೆ ಬರ ಮಾಡಿಕೊಳ್ಳಲಾಗುತ್ತದೆ.
ಪುಟ್ಟು ಆಂಜಿನಪ್ಪ ಬರಲಿ, ಇನ್ನಾರೇ ಬರಲಿ ಶಿಡ್ಲಘ್ಟಟ್ಟದ ಕಾಂಗ್ರೆಸ್ ಗೆ ರಾಜೀವ್ ಗೌಡ ಅವರೇ ನಮ್ಮ ಲೀಡರ್. ಅವರ ನೇತೃತ್ವದಲ್ಲೆ ಪಕ್ಷ ಸಂಘಟನೆ ಆಗಬೇಕು, ಚುನಾವಣೆ ನಡೆಯಬೇಕು, ನಾಮನಿರ್ದೇಶನ ಸ್ಥಾನಗಳಿಗೆ ನೇಮಕಾತಿಯೂ ಆಗಬೇಕು.
ಅದನ್ನು ಬಿಟ್ಟು ರಾಜೀವ್ ಗೌಡರನ್ನು ನಿರ್ಲಕ್ಷಿಸುವ ಪ್ರಶ್ನೆಯೆ ಇಲ್ಲ. ಊಹಾಪೋಹಗಳಿಗೆ ಕಿವಿಗೊಡಬೇಡಿ. ಸಿಎಂ ಸಿದ್ದರಾಮಯ್ಯ, ಡಿಸಿಎಂ ಶಿವಕುಮಾರ್ ಅವರು ಕೂಡ ರಾಜೀವ್ ಗೌಡರ ಬಗ್ಗೆ ಒಳ್ಳೆಯ ಅಭಿಪ್ರಾಯ ಇಟ್ಟುಕೊಂಡಿದ್ದು, ಶಿಡ್ಲಘಟ್ಟದ ಕಾಂಗ್ರೆಸ್ ಪಾಲಿಗೆ ರಾಜೀವ್ ಗೌಡ ಅವರೆ ಹೈ ಕಮಾಂಡ್ ಇದ್ದಂತೆ ಎಂದು ಸ್ಪಷ್ಟಪಡಿಸಿದರು.
ಶಿಡ್ಲಘಟ್ಟ ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್ ಮುಖಂಡ ರಾಜೀವ್ ಗೌಡ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಸಹನಾ ರಾಜೀವ್ ಗೌಡ, ಡಿಸಿಸಿ ಬ್ಯಾಂಕ್ ಮಾಜಿ ಉಪಾಧ್ಯಕ್ಷ ಡಾಲ್ಫಿನ್ ನಾಗರಾಜ್, ಸಾದಲಿ ಗೋವಿಂದರಾಜು, ಎಲ್.ಮಧುಸೂಧನ್, ಅಫ್ಸರ್‌ಪಾಷ, ಗಂಗನಹಳ್ಳಿ ವೆಂಕಟೇಶ್, ಹೀರೆಬಲ್ಲ ರವಿಕುಮಾರ್, ಗುಡಿಹಳ್ಳಿ ನಾರಾಯಣಸ್ವಾಮಿ, ಕೃಷ್ಣಮೂರ್ತಿ, ಮುಸ್ತು, ಮುತ್ತೂರು ವೆಂಕಟೇಶ್ ಹಾಜರಿದ್ದರು.