Sidlaghatta : ಕುಡಿದ ಮತ್ತಿನಲ್ಲಿ ಗ್ರಾಮ ಪಂಚಾಯಿತಿ ಕಾರ್ಯಾಲಯದ ಕಿಟಿಕಿ ಗಾಜುಗಳಿಗೆ ಕಲ್ಲು ಹೊಡೆದು ಪುಡಿ ಮಾಡಿರುವುದು ಹಾಗೂ ಗ್ರಾಮ ಪಂಚಾಯಿತಿ ಗುಮಾಸ್ತನ ಮೇಲೆ ಹಲ್ಲೆ ಮಾಡಿ ಗ್ರಾಮ ಪಂಚಾಯಿತಿ ಕಾರ್ಯಾಲಯದಲ್ಲಿರುವ ದಾಖಲೆಗಳನ್ನು ಚೆಲ್ಲಾಪಿಲ್ಲಿ ಮಾಡಿರುವ ಘಟನೆ ಶಿಡ್ಲಘಟ್ಟ ತಾಲ್ಲೂಕಿನ ತಿಮ್ಮನಾಯಕನಹಳ್ಳಿ (Thimmanayakanahalli Grama Panchayat) ಯಲ್ಲಿ ಮಂಗಳವಾರ ರಾತ್ರಿ ನಡೆದಿದೆ.
ತಾಲ್ಲೂಕಿನ ತಿಮ್ಮನಾಯಕನಹಳ್ಳಿ ಗ್ರಾಮದ ಶ್ರೀರಾಮರೆಡ್ಡಿ ಎಂಬ ವ್ಯಕ್ತಿ ಮಂಗಳವಾರ ರಾತ್ರಿ ಕುಡಿದು ಬಂದು ಗ್ರಾಮ ಪಂಚಾಯಿತಿ ಕಚೇರಿ ಸಿಬ್ಬಂದಿ ನರಸಿಂಹಪ್ಪ ಎಂಬುವವರ ಮೇಲೆ ವಿನಾಕಾರಣ ಹಲ್ಲೆ ನಡೆಸಿ, ಪಂಚಾಯಿತಿ ಕಾರ್ಯಾಲಯದ ಕಿಟಿಕಿ ಗಾಜುಗಳನ್ನು ಕಲ್ಲುಗಳಿಂದ ಒಡೆದು ಪುಡಿ ಮಾಡಿರುವುದಲ್ಲದೆ ಪಂಚಾಯಿತಿ ಕಚೇರಿಯೊಳಗೆ ಹೊಕ್ಕು ಒಳಗಿರುವ ದಾಖಲೆಗಳನ್ನೆಲ್ಲಾ ಎಳೆದು ಚೆಲ್ಲಾ ಪಿಲ್ಲಿ ಮಾಡಿದ್ದಾನೆ ಎನ್ನಲಾಗಿದೆ.
ಈ ಸಂಬಂಧ ತಿಮ್ಮನಾಯಕನಹಳ್ಳಿ ಗ್ರಾಮ ಪಂಚಾಯಿತಿ ಅಭಿವೃದ್ದಿ ಅಧಿಕಾರಿ ಶ್ರೀನಿವಾಸ್, ಆರೋಪಿ ಶ್ರೀರಾಮ್ ವಿರುದ್ದ ದಿಬ್ಬೂರಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ.