Sidlaghatta : ಬಂಡಿ ದ್ಯಾವರ (Bandi Dyavara) ಆಚರಣೆಯನ್ನು ತಾಲ್ಲೂಕಿನ ಹಿತ್ತಲಹಳ್ಳಿ (Hittalahalli) ಗ್ರಾಮದಲ್ಲಿ ಆನೂರು (Anur), ಹಿತ್ತಲಹಳ್ಳಿ ಮತ್ತು ಶಿಡ್ಲಘಟ್ಟದ ಒಕ್ಕಲಿಗ (Vokkaliga) ಕುಟುಂಬದವರು ಭಾನುವಾರ ವಿಜೃಂಭಣೆಯಿಂದ ಆಚರಿಸಿದರು. ಬಂಡಿ ದ್ಯಾವರವನ್ನು ಒಕ್ಕಲಿಗ ಜನಾಂಗದವರು ಆಚರಿಸುವರಾದರೂ ಊರಿನ ಎಲ್ಲಾ ಜನರು ಸಂತೋಷ ಸಂಭ್ರಮಗಳಿಂದ ದ್ಯಾವರ ನಡೆಸುವವರೊಂದಿಗೆ ಕಲೆತು ದ್ಯಾವರ ಅತ್ಯಂತ ಮನರಂಜನಿಯವೆನಿಸುವಂತೆ ಸಹಕರಿಸುತ್ತಾರೆ.
ಈ ಆಚರಣೆಗೆ ಚಾಲನೆ ನೀಡಿದ ಜಿಲ್ಲಾಧಿಕಾರಿ ಆರ್.ಲತಾ ಅವರು ಮಾತನಾಡಿ, “ಅವಿಭಕ್ತ ಕುಟುಂಬಗಳೆ ಕಣ್ಮರೆಯಾಗುತ್ತಿರುವ ಈ ಸಂದರ್ಭದಲ್ಲಿ ಬಂಡಿದ್ಯಾವರ ಆಚರಣೆ ವೇಳೆ ಕುಟುಂಬದ ಎಲ್ಲರೂ ಒಂದೆಡೆ ಸೇರುವುದೆ ವಿಶೇಷ. ಆ ಕ್ಷಣ ಪೂರ್ವಿಕರ ಕಾಲದಲ್ಲಿದ್ದ ಅವಿಭಕ್ತ ಕುಟುಂಬ ಕಣ್ಮುಂದೆ ಬರಲಿದೆ. ಸಾವಿರಾರು ಮಂದಿಗೆ ಊಟದ ವ್ಯವಸ್ಥೆಯನ್ನು ಮಾಡಲಾಗುತ್ತದೆ. ಇದು ವೈಯಕ್ತಿಕವಾಗಿ ಆಚರಿಸುವುದಾದರೂ, ಇಡೀ ಗ್ರಾಮದಲ್ಲಿ ಹಬ್ಬದ ವಾತಾವರಣ ಕಂಡುಬಂದಿದೆ” ಎಂದರು.
ಈ ದ್ಯಾವರದಲ್ಲಿ ಕಿವಿ ಚುಚ್ಚುವುದು ಹಾಗೂ ಬೆರಳು ಕೊಡುವುದು ಸಂಪ್ರದಾಯ ಆಚರಣೆ ಕೂಡ ಇದೆ. ಈ ಬಂಡಿ ದ್ಯಾವರದಲ್ಲಿ ಶಿಡ್ಲಘಟ್ಟ, ಹಿತ್ತಲಹಳ್ಳಿ ಮತ್ತು ಆನೂರು ಒಕ್ಕಲಿಗರ ಕುಲಮಾತೆಗೆ ಸೇರಿದ ಕುಟುಂಬಸ್ಥರಿಂದ ದ್ಯಾವರ ನಡೆಯಿತು. ಈ ದ್ಯಾವರದ ಅಂಗವಾಗಿ ರಾತ್ರಿ ದೀಪಗಳಿಂದ ಪೂಜೆ ಮಾಡುವುದು, ಕುಟುಂಬದಲ್ಲಿ ಜನಸಿದ ಮಕ್ಕಳಿಗೆ ಕಿವಿ ಚುಚ್ಚುವ ಹಾಗೂ ಬೆರಳು ಕೊಡುವ, ದ್ಯಾವರ ಮಾಡಿದ ನಂತರವೇ ವಿವಾಹ ಮಾಡುವ ಸಂಪ್ರದಾಯವಿದೆ.
ಗ್ರಾಮದಲ್ಲಿ ದೇವಾಲಯಗಳು ಸೇರಿದಂತೆ ವಿವಿಧ ಮನೆಗಳ ಮೇಲೆ ವಿದ್ಯುತ್ ದೀಪಾಲಂಕಾರ ಮಾಡಲಾಗಿತ್ತು. ಶಿಡ್ಲಘಟ್ಟ, ಹಿತ್ತಲಹಳ್ಳಿ ಮತ್ತು ಆನೂರು ಗ್ರಾಮಕ್ಕೆ ಸೇರಿದ 65 ಕ್ಕೂ ಹೆಚ್ಚು ಕುಟುಂಬಗಳ ಸದಸ್ಯರು ದೀಪಗಳನ್ನು ಮಾಡಿದರು. ತಂದೆ, ತಾಯಿ ತಮ್ಮ ಮಕ್ಕಳಿಗೆ ಬಟ್ಟೆ, ಚಿನ್ನ ಸೇರಿದಂತೆ ಇತರೆ ಕೊಡುಗೆ ನೀಡಿ ದ್ಯಾವರವನ್ನು ಅವರಿಗೆ ನೀಡಿದರು.
ಜಿಲ್ಲೆಯಲ್ಲಿ ಅಧಿಕ ಸಂಖ್ಯೆಯಲ್ಲಿ “ಮೊರಸು” ಹಾಗೂ “ಮುಸುಕು” ಒಕ್ಕಲಿಗರು ವಾಸವಾಗಿದ್ದಾರೆ. ಇವರು ಹಲವಾರು ವರ್ಷಗಳಿಗೊಮ್ಮೆ ಅಥವಾ ತಮಗೆ ಅನುಕೂಲವಾದಾಗ ಕುಲದೇವರನ್ನು ವಿಶೇಷವಾಗಿ ಆರಾಧಿಸುತ್ತಾರೆ. ತಮ್ಮ ಮನೆಗಳಿಂದ “ಕುಲದೇವರ” ಆಲಯಕ್ಕೆ ಬಂಡಿ ಮೇಲೆ ಬಂದು ಪೂಜೆ ಸಲ್ಲಿಸುತ್ತಾರೆ.
ಹಿತ್ತಲಹಳ್ಳಿಯಲ್ಲಿ ಬಂಡಿಗಳನ್ನು ಎತ್ತುಗಳನ್ನು ಅಲಂಕರಿಸಿ ಹಳ್ಳಿಯ ಮುಂದೆ ಸಾಲಾಗಿ ನಿಲ್ಲಿಸಿದ್ದರು. ಹೆಣ್ಣುಮಕ್ಕಳು ಅಲಂಕರಿಸಿಕೊಂಡು ದೀಪಗಳನ್ನು ಹೊತ್ತುಕೊಂಡು ಸಾಲಾಗಿ ಬಂದರು. ದೀಪದ ಆರತಿಯೊಂದಿಗೆ “ಗರಿಗಲು ಗುಡಿ”ಯಲ್ಲಿ ಇಟ್ಟಿರುವ ಎರಡು ಗಡಿಗೆಗಳನ್ನು ಪ್ರತಿಯೊಬ್ಬ ಗಂಡ ಹೆಂಡತಿಯರು ತಲೆಮೇಲಿಟ್ಟುಕೊಂಡು ವಾದ್ಯ ಮೇಳಗಳ ಜೊತೆಯಲ್ಲಿ “ನಡೆ ಮುಡಿ”ಯ ಮೇಲೆ ನಡೆಯುತ್ತಾ ಬಂದರು. ಚಪ್ಪರ ಹಾಸಿ ನಿರ್ಮಿಸಿದ ಗುಡಿಯಲ್ಲಿ ಗ್ರಾಮದೇವತೆಗಳಿಗೆ ಪೂಜೆ ಸಲ್ಲಿಸಲಾಯಿತು. ದೇವರುಗಳಿಗೆ ಸಲಮುದ್ದೆ ಹಾಗೂ ಬಲಿಯ ರಕ್ತ ಸಿಂಪಡಿಸಿದ ಅನ್ನದ ಅಗಳುಗಳನ್ನು ಚೆಲ್ಲಿ, ಬಂಡಿಯಲ್ಲಿ ಪ್ರದಕ್ಷಿಣೆ ಬಂದರು.
ವಿವಾಹ ಸಂದರ್ಭದಲ್ಲಿ ಹೊಸ ದ್ಯಾವರ, ಬಂಡಿದ್ಯಾವರ ಆಚರಣೆಯನ್ನು ಪರಿಗಣಿಸಲಾಗುತ್ತದೆ. ಹೊಸದ್ಯಾವರ, ಬಂಡಿದ್ಯಾವರ ಆಚರಣೆ ಇರುವ ಕುಟುಂಬದವರಿಗೆ ಮಾತ್ರ ತಮ್ಮ ಮಕ್ಕಳನ್ನು ಕೊಟ್ಟು ವಿವಾಹ ಮಾಡಲಾಗುತ್ತದೆ. ಇಲ್ಲವಾದರೆ ನಿರಾಕರಿಸಲಾಗುತ್ತದೆ. ಸಂಪ್ರದಾಯ ನೋಡಿ ವಿವಾಹ ಮಾಡುವುದು ಇಂದಿಗೂ ಕಾಣಬಹುದಾಗಿದೆ. ಮಾಂಸ ಆಹಾರವೇ ಇಲ್ಲಿ ಪ್ರಧಾನವಾಗಿರುತ್ತದೆ. ಸ್ನೇಹಿತರು ಹಾಗೂ ಬಂಧುಮಿತ್ರರನ್ನೆಲ್ಲಾ ಊಟಕ್ಕೆ ಆಹ್ವಾನಿಸಲಾಗಿತ್ತು.
“ಕುಟುಂಬದಿಂದ ವಂಶ ಪಾರಂಪರ್ಯವಾಗಿ ಈ ದ್ಯಾವರ ಆಚರಿಸಿಕೊಂಡು ಬರುತ್ತಿದ್ದೇವೆ. ಕುಟುಂಬದ ಹಿರಿಯರು ಹಾಕಿಕೊಟ್ಟ ಸಂಪ್ರದಾಯದಂತೆ ದ್ಯಾವರದ ಮಹತ್ವ ವನ್ನು ಮಕ್ಕಳಿಗೂ ತಿಳಿಸುತ್ತೇವೆ. ಹಲವು ವರ್ಷಗಳ ಬಳಿಕ ಅದ್ದೂರಿಯಾಗಿ ಆಚರಣೆ ಮಾಡಿರುವುದು ಖುಷಿ ತಂದಿದೆ” ಎಂದು ಆನೂರು ದೇವರಾಜ್ ತಿಳಿಸಿದರು.