Sidlaghatta : ಭಾವೈಕ್ಯ ಯುವಜನ ಸಂಘ ಮತ್ತು ಗ್ರಾಮಾಂತರ ಟ್ರಸ್ಟ್ ಸಹಯೋಗದಡಿ ಇಂಗ್ಲಿಷ್ ಬರವಣಿಗೆಯ ಕೌಶಲ್ಯವನ್ನು ಅಭಿವೃದ್ಧಿಪಡಿಸಲು “ಇಂಗ್ಲಿಷ್ ಕರ್ಸಿವ್ ಡ್ರೈವ್ ಸ್ಕೀಮ್” ಮೂಲಕ ಶನಿವಾರ ನಗರದಲ್ಲಿರುವ ಸರ್ಕಾರಿ ಉರ್ದು ಕಿರಿಯ ಪ್ರಾಥಮಿಕ ಶಾಲೆ ದರ್ಗಾ ಮೊಹಲ್ಲಾ ವಿದ್ಯಾರ್ಥಿಗಳಿಗೆ ಇಂಗ್ಲಿಷ್ ಕರ್ಸಿವ್ ಬರವಣಿಗೆ ಪುಸ್ತಕಗಳನ್ನು ವಿತರಿಸಲಾಯಿತು.
ಭಾವೈಕ್ಯ ಯುವಜನ ಸಂಘದ ಸಂಸ್ಥಾಪಕ ಕಾರ್ಯದರ್ಶಿ ಕೆ.ವಿ. ಪ್ರಜ್ವಲ್ ಮಾತನಾಡಿ, “ಕಳೆದ ಮೂರು ವರ್ಷಗಳಿಂದ ವಿವಿಧ ಸರ್ಕಾರಿ ಶಾಲೆಗಳಲ್ಲಿ ಇಂಗ್ಲಿಷ್ ಕರ್ಸಿವ್ ಬರವಣಿಗೆ ಉತ್ತೇಜನ ಯೋಜನೆ ಜಾರಿಗೆ ತಂದಿದ್ದೇವೆ. ಈ ಪ್ರಯತ್ನ ವಿದ್ಯಾರ್ಥಿಗಳ ಬರವಣಿಗೆಯಲ್ಲಿ ವಿಶೇಷ ಸುಧಾರಣೆ ತಂದುಕೊಟ್ಟಿದೆ. ಗ್ರಾಮೀಣ ಸರ್ಕಾರಿ ಶಾಲೆಗಳ ವಿದ್ಯಾರ್ಥಿಗಳೂ ಕಾನ್ವೆಂಟ್ ಶಾಲಾ ಮಕ್ಕಳಂತೆ ಇಂಗ್ಲಿಷ್ ಕರ್ಸಿವ್ ಬರವಣಿಗೆಯಲ್ಲಿ ಪ್ರಗತಿಸಬೇಕು ಎನ್ನುವುದು ನಮ್ಮ ಮುಖ್ಯ ಉದ್ದೇಶವಾಗಿದೆ” ಎಂದು ಹೇಳಿದರು.
ಈ ಬಾರಿ ತಾಲ್ಲೂಕಿನ ಮುತ್ತೂರು, ಬಂಡಹಳ್ಳಿ ಮತ್ತು ದರ್ಗಾ ಮೊಹಲ್ಲಾ ಶಾಲೆಗಳಿಗೆ ಸೇರಿ 14 ಸರ್ಕಾರಿ ಶಾಲೆಗಳಲ್ಲಿ ಈ ಯೋಜನೆಯನ್ನು ಜಾರಿಗೊಳಿಸಲಾಗಿದೆ. ಮಾರ್ಚ್ ತಿಂಗಳಲ್ಲಿ ಶಾಲಾ ಮಟ್ಟದ ಬರವಣಿಗೆ ಸ್ಪರ್ಧೆಯನ್ನು ಆಯೋಜಿಸಲಾಗಿದ್ದು, ವಿದ್ಯಾರ್ಥಿಗಳಿಗೆ ಬಹುಮಾನ ವಿತರಿಸಲಾಗುವುದು ಎಂದು ಪ್ರಜ್ವಲ್ ಮಾಹಿತಿ ನೀಡಿದರು.
ಭಾವೈಕ್ಯ ಯುವಜನ ಸಂಘದ ಅಧ್ಯಕ್ಷ ಪವನ್ ಕಲ್ಯಾಣ್, ಉಪಾಧ್ಯಕ್ಷೆ ಮಧುಶ್ರೀ, ಮತ್ತು ಗ್ರಾಮಾಂತರ ಟ್ರಸ್ಟ್‌ನ ಉಷಾಶೆಟ್ಟಿ ಅವರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.