
Sidlaghatta : ಶಿಡ್ಲಘಟ್ಟ ತಾಲ್ಲೂಕಿನ ಬೈರಗಾನಹಳ್ಳಿ (Byraganahalli) ಗ್ರಾಮದ ರೈತರ ಹೊಲದಲ್ಲಿ ಸಾಮೂಹಿಕವಾಗಿ ನವಿಲುಗಳು ಸಾವನ್ನಪ್ಪಿರುವ (Peacock Death) ಘಟನೆ ಗುರುವಾರ ನಡೆದಿದೆ. ನವಿಲುಗಳ ಸಾವಿಗೆ ನಿಖರ ಕಾರಣ ತಿಳಿದು ಬಂದಿಲ್ಲವಾದರೂ, ವಿಷ ಮಿಶ್ರಿತ ನೀರು ಅಥವಾ ಆಹಾರ ಸೇವಿಸಿರಬಹುದು ಎನ್ನಲಾಗಿದೆ.
ಗ್ರಾಮದ ತಿರುಮಲ ದಿನ್ನೆ ಪ್ರದೇಶದ ಹೊರಹೊಲಯದ ಹೊಲವೊಂದರಲ್ಲಿ ನೂರು ಮೀಟರ್ ವಿಸ್ತೀರ್ಣ ಜಾಗದಲ್ಲಿ ಅಲ್ಲಲ್ಲಿ ನವಿಲುಗಳು ಸತ್ತು ಬಿದ್ದಿದ್ದುದು ಕಂಡುಬಂದಿದೆ. ಹೊಲಕ್ಕೆ ಹೋದಾಗ ಗ್ರಾಮಸ್ಥರು ಕಂಡು ಅರಣ್ಯ ಇಲಾಖೆಗೆ ಸುದ್ದಿ ಮುಟ್ಟಿಸಿದ್ದಾರೆ.
ಇನ್ನು ಸ್ಥಳಕ್ಕೆ ಆಗಮಿಸಿದ ಅರಣ್ಯ ಇಲಾಖೆ ಅಧಿಕಾರಿಗಳಾದ ಜಯಚಂದ್ರ ಮತ್ತು ಅರಣ್ಯ ರಕ್ಷಕ ಗೋವಿಂದ ರಾಜು ಸ್ಥಳ ಪರಿಶೀಲನೆ ಮಾಡಿ ಮರಣೋತ್ತರ ಪರೀಕ್ಷೆಗೆ ತಾಲ್ಲೂಕಿನ ಪಶು ಚಿಕಿತ್ಸಾಲಯಕ್ಕೆ ರವಾನಿಸಿದ್ದಾರೆ.
ಮರಣೋತ್ತರ ಪರೀಕ್ಷೆ ನಡೆಸಿದ ಪಶುವೈದ್ಯರಾದ ಡಾ.ಪ್ರಶಾಂತ್ ಮತ್ತು ಮುನಿಕೃಷ್ಣ ವಿಷ ಮಿಶ್ರಿತ ನೀರು ಅಥವಾ ಆಹಾರ ಸೇವನೆಯಿಂದ ಸತ್ತಿರಬಹುದು ಎಂದು ಮಾಹಿತಿ ನೀಡಿದ್ದಾರೆ.
ಬೈರಗಾನಹಳ್ಳಿ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಇತ್ತೀಚಿಗೆ ನವಿಲುಗಳ ಸಂಖ್ಯೆ ಗಣನೀಯವಾಗಿ ಹೆಚ್ಚಾಗಿದ್ದು, ಸದ್ಯ ಏಳು ನವಿಲುಗಳ ಸಾವಿನಿಂದಾಗಿ ಪರಿಸರ ಪ್ರೇಮಿಗಳಲ್ಲಿ ಕಳವಳವುಂಟು ಮಾಡಿದೆ. ಇತ್ತೀಚಿಗೆ ಬೈರಗಾನಹಳ್ಳಿ ಅರಣ್ಯ ಪ್ರಾಂತ್ಯದ ಅಕ್ಕ ಪಕ್ಕದ ಹೊಲಗಳಲ್ಲಿ ರೈತರು ಕೊಳವೆ ಬಾವಿ ಕೊರೆಯಿಸಿಕೊಂಡು ಕೃಷಿ ಚಟುವಟಿಕೆಗಳನ್ನು ಮಾಡುತ್ತಿದ್ದು, ಬೆಳೆಗಳಿಗೆ ಔಷಧಿ ಸಿಂಪಡಣೆ ಮಾಡುವುದು ಸಾಮಾನ್ಯವಾಗಿದೆ.
“ಒಟ್ಟಾರೆಯಾಗಿ ನವಿಲುಗಳು ಸಾವಿಗೆ ಮೇಲ್ನೋಟಕ್ಕೆ ವಿಷ ಪ್ರಾಷನವೇ ಕಾರಣ ಎಂದು ಗೊತ್ತಾಗಿದೆ. ಈ ರೀತಿ ನವಿಲುಗಳು ಇಷ್ಟೊಂದು ಸಂಖ್ಯೆಯಲ್ಲಿ ಸತ್ತಿರುವುದು ಜಿಲ್ಲೆಯಲ್ಲಿಯೇ ಮೊದಲು. ರೈತರು ಕೃಷಿ ಹೊಂಡಕ್ಕೆ ರಾಸಾಯನಿಕ ಗೊಬ್ಬರಗಳನ್ನು ನೀರಿನೊಂದಿಗೆ ಬೆರೆಸುವುದು ಅದನ್ನು ಡ್ರಿಪ್ ಮೂಲಕ ಹಾಯಿಸುವ ಕೆಲಸ ಮಾಡುತ್ತಿದ್ದಾರೆ. ರಾಸಾಯನಿಕ ಗೊಬ್ಬರಗಳನ್ನು ಹೆಚ್ಚಾಗಿ ಬಳಸಲಾಗುತ್ತಿದೆ. ರೈತರ ಬೆಳೆಗಳ ಬಳಿಯೇ ನವಿಲುಗಳು ಹೋಗುತ್ತವೆ. ಹಾಗಾಗಿ ರೈತರು ಕಾಳಜಿ ವಹಿಸಬೇಕು” ಎಂದು ವಲಯ ಅರಣ್ಯಾಧಿಕಾರಿ ದಿವ್ಯಾ ಅವರು ತಿಳಿಸಿದರು.
For Daily Updates WhatsApp ‘HI’ to 7406303366
Follow Chikkaballapur District News
Facebook: https://www.facebook.com/hicbpur
Twitter: https://twitter.com/hicbpur