Sidlaghatta : ರೈತರು ಕೃಷಿ, ತೋಟಗಾರಿಕೆ, ರೇಷ್ಮೆ ಸೇರಿದಂತೆ ಎಲ್ಲಾ ಬೆಳೆಗಳ ಉತ್ಪಾದನೆಯಲ್ಲಿ ನೂತನ ತಾಂತ್ರಿಕತೆಗಳನ್ನು ಅಳವಡಿಸಿಕೊಂಡು ಕಡಿಮೆ ವೆಚ್ಚದಲ್ಲಿ ಹೆಚ್ಚು ಇಳುವರಿಗಾಗಿ ಶ್ರಮಿಸಬೇಕೆಂದು ಕೃಷಿ ಪಂಡಿತ ಪ್ರಶಸ್ತಿ ಪುರಸ್ಕೃತ ಹಿತ್ತಲಹಳ್ಳಿ ಗೋಪಾಲಗೌಡ ಸಲಹೆ ನೀಡಿದರು.
ತಾಲ್ಲೂಕಿನ ಬೀರಪ್ಪನಹಳ್ಳಿಯ ಚಾತುರ್ಯ ಗೋಡಂಬಿ ಸಂಸ್ಕರಣ ಘಟಕದಲ್ಲಿ ಬಾಗಲಕೋಟೆಯ ತೋಟಗಾರಿಕೆ ವಿಜ್ಞಾನಗಳ ವಿಶ್ವವಿದ್ಯಾಲಯ, ಹೊಗಳಗೆರೆಯ ತೋಟಗಾರಿಕೆ ಸಂಶೋಧನೆ ಮತ್ತು ವಿಸ್ತರಣಾ ಕೇಂದ್ರ, ಅಖಿಲ ಭಾರತ ಸಮನ್ವಯ ಗೋಡಂಬಿ ಸಂಶೋಧನೆ ಯೋಜನೆ, ಹಾಗೂ ತೋಟಗಾರಿಕೆ ಇಲಾಖೆಯ ಆಶ್ರಯದಲ್ಲಿ ಹಮ್ಮಿಕೊಂಡ ರೈತ ತರಬೇತಿ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
“ಬಯಲುಸೀಮೆ ಪ್ರದೇಶದಲ್ಲಿ ಗೋಡಂಬಿ, ಮಾವು, ದಾಳಿಂಬೆ, ನೇರಳೆ ಮತ್ತು ಹಲವು ತರಕಾರಿ ಬೆಳೆಗಳು ಯಶಸ್ವಿಯಾಗಿ ಬೆಳೆಯಲಾಗುತ್ತಿವೆ. ಆದರೆ ಹಲವು ರೈತರು ಹಳೆಯ ಪದ್ಧತಿಗಳನ್ನು ಅನುಸರಿಸುತ್ತಿರುವುದರಿಂದ ನಿರೀಕ್ಷಿತ ಫಲಿತಾಂಶಗಳು ಸಿಗುತ್ತಿಲ್ಲ. ಇದರಿಂದ ಕೃಷಿ ಮತ್ತು ತೋಟಗಾರಿಕೆಯಲ್ಲಿ ರೈತರಿಗೆ ನಷ್ಟದ ಪ್ರಮಾಣ ಹೆಚ್ಚಾಗಿದೆ,” ಎಂದು ಗೋಪಾಲಗೌಡ ಬೇಸರ ವ್ಯಕ್ತಪಡಿಸಿದರು.
“ಗೋಡಂಬಿ ಬೆಳೆ ಸೇರಿದಂತೆ ಎಲ್ಲಾ ತೋಟಗಾರಿಕೆ ಉತ್ಪಾದನೆಗೆ ವೈಜ್ಞಾನಿಕ ತಂತ್ರಜ್ಞಾನವನ್ನು ಅಳವಡಿಸಿಕೊಳ್ಳುವುದು ಅನಿವಾರ್ಯ. ಇದಕ್ಕಾಗಿ ರೈತರಿಗೆ ಸರ್ಕಾರವು ತರಬೇತಿ ಹಾಗೂ ಪ್ರಾಯೋಗಿಕ ಪಾಠಗಳನ್ನು ನೀಡುತ್ತಿದೆ. ಈ ತರಬೇತಿಗಳನ್ನು ಬಳಸಿಕೊಂಡು ಹೆಚ್ಚು ಫಸಲು ಪಡೆಯಲು ಶ್ರಮಿಸಬೇಕು,” ಎಂದು ಗೋಪಾಲಗೌಡ ಹೇಳಿದರು.
ಡಾ. ಆರ್.ಕೆ. ರಾಮಚಂದ್ರ ಮಾತನಾಡಿ, “ತೋಟಗಾರಿಕೆ ಕ್ಷೇತ್ರದಲ್ಲಿ ಸಂಶೋಧನೆ ಮತ್ತು ತಾಂತ್ರಿಕ ಮುನ್ನೋಟದ ಆವಶ್ಯಕತೆಯು ಹೆಚ್ಚಿನ ಇಳುವರಿಗಾಗಿ ಮುಖ್ಯವಾಗಿದೆ. ಆದರೆ, ಹಲವು ರೈತರು ಈ ತಾಂತ್ರಿಕತೆಗೆ ತಕ್ಕಂತೆ ಬದಲಾವಣೆ ಮಾಡುವಲ್ಲಿ ಯಶಸ್ವಿಯಾಗುತ್ತಿಲ್ಲ,” ಎಂದರು.
ಕೃಷಿ ತಾಂತ್ರಿಕ ತಜ್ಞರು ಮತ್ತು ಪ್ರಗತಿಪರ ರೈತರಿಂದ ಗೋಡಂಬಿ ಬೆಳೆಯ ವೈಜ್ಞಾನಿಕ ತಾಂತ್ರಿಕತೆ ಕುರಿತಾದ ತರಬೇತಿ ನೀಡಲಾಗಿದ್ದು, ಹೆಚ್ಚಿನ ಇಳುವರಿಗಾಗಿ ನೂತನ ತಂತ್ರಜ್ಞಾನಗಳ ಉಪಯೋಗದ ಕುರಿತು ವಿವರಿಸಲಾಯಿತು.
ಕಾರ್ಯಕ್ರಮದಲ್ಲಿ ತೋಟಗಾರಿಕೆ ವಿಜ್ಞಾನಗಳ ವಿಶ್ವವಿದ್ಯಾಲಯದ ನಿರ್ದೇಶಕ ಡಾ. ಪಕ್ರುದ್ದೀನ್, ತೋಟಗಾರಿಕೆ ಸಂಶೋಧನೆ ಮತ್ತು ವಿಸ್ತರಣಾ ಕೇಂದ್ರದ ಎಸ್.ಎಲ್. ಜಗದೀಶ್, ಉಪ ನಿರ್ದೇಶಕಿ ಗಾಯತ್ರಿ, ಸಹಾಯಕ ನಿರ್ದೇಶಕಿ ಮಂಜುಳ, ಕೊತ್ತನೂರು ಗ್ರಾಮ ಪಂಚಾಯಿತಿ ಅಧ್ಯಕ್ಷೆ ಪಾರ್ವತಮ್ಮ, ಚಾತುರ್ಯ ಗೋಡಂಬಿ ಘಟಕದ ಮಾಲೀಕ ವೆಂಕಟಸ್ವಾಮಿ ಸೇರಿದಂತೆ ರೈತ ಮುಖಂಡರು, ವಿಜ್ಞಾನಿಗಳು, ಅಧಿಕಾರಿಗಳು ಹಾಗೂ ಸ್ಥಳೀಯ ಮುಖಂಡರು ಉಪಸ್ಥಿತರಿದ್ದರು.