Sidlaghatta : ಮುಂಬರುವ ತಾಲ್ಲೂಕು, ಜಿಲ್ಲಾ ಪಂಚಾಯಿತಿ ಹಾಗೂ ಲೋಕಸಭಾ ಚುನಾವಣೆಗೆ ನಾವೆಲ್ಲರೂ ಸಜ್ಜಾಗಬೇಕಿದೆ. ಕಳೆದ ವಿಧಾನಸಭಾ ಚುನಾವಣೆಯಲ್ಲಿ ನಮಗಾದ ಸೋಲಿನಿಂದ ದೃತಿಗೆಡದೆ ಸೋಲಿಗೆ ಕಾರಣಗಳನ್ನು ಹುಡುಕಿ ಸೋಲುಕಂಡ ಕ್ಷೇತ್ರದಲ್ಲೆ ಗೆಲುವನ್ನು ಕಾಣುವಂತಾಗಬೇಕು ಎಂದು ಶಿಡ್ಲಘಟ್ಟ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷೆ ಸಹನಾರಾಜೀವ್‌ಗೌಡ ತಿಳಿಸಿದರು.
ಶಿಡ್ಲಘಟ್ಟ ನಗರದ ಕಾಂಗ್ರೆಸ್ ಭವನದಲ್ಲಿ ಬುಧವಾರ ಹಮ್ಮಿಕೊಂಡಿದ್ದ ಕಾಂಗ್ರೆಸ್ ಕಾರ್ಯಕರ್ತರು, ಮುಖಂಡರ ಸಂಘಟನಾ ಸಭೆಯಲ್ಲಿ ಅವರು ಮಾತನಾಡಿದರು.
ಇನ್ನೊಂದು ವರ್ಷದೊಳಗೆ ಲೋಕಸಭೆ ಚುನಾವಣೆ ಎದುರಾಗಲಿದೆ. ಅದಕ್ಕೂ ಮೊದಲೆ ಜಿಲ್ಲಾ ಪಂಚಾಯಿತಿ ಹಾಗೂ ತಾಲ್ಲೂಕು ಪಂಚಾಯಿತಿ ಚುನಾವಣೆಗಳು ಎದುರಾಗುತ್ತವೆ. ಶಿಡ್ಲಘಟ್ಟ ಕ್ಷೇತ್ರವು ಕಾಂಗ್ರೆಸ್‌ನ ಭದ್ರಕೋಟೆಯಾಗಿದ್ದು ಕಳೆದ ವಿಧಾನಸಭೆ ಚುನಾವಣೆಯಲ್ಲಿ ನಮಗೆ ಸೋಲಾಗಿರಬಹುದು. ಆದರೆ ಸೋಲು ಶಾಶ್ವತವಲ್ಲ ಗೆಲುವು ನಮ್ಮದಾಗಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಪಕ್ಷ ಸದೃಡವಾಗಿದ್ದು ಇನ್ನಷ್ಟು ಬಲಿಷ್ಠಗೊಳಿಸಬೇಕಿದೆ. ಹಾಗಾಗಿ ಪ್ರತಿ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲೂ ತಲಾ 30 ಮಂದಿಯ ಸದಸ್ಯರನ್ನು ಸೇರಿ ಸಮಿತಿಯನ್ನು ರಚಿಸಿ ಸಮಿತಿ ಮೂಲಕ ಪಕ್ಷದ ಸಂಘಟನೆ ಹಾಗೂ ಎಲ್ಲ ರಾಜಕೀಯ ಚಟುವಟಿಕೆಗಳನ್ನು ನಡೆಸಲಾಗುವುದು ಎಂದು ವಿವರಿಸಿದರು.
ಕಳೆದ ವಿಧಾನಸಭೆ ಚುನಾವಣೆಯಲ್ಲಿ ನಮ್ಮ ಸೋಲಿಗೆ ಕಾರಣಗಳನ್ನು ಹುಡುಕಿ ಅವುಗಳನ್ನು ಸರಿಪಡಿಸಿಕೊಳ್ಳೋಣ. ಹಾಗಂತ ಕಳೆದ ತಪ್ಪುಗಳನ್ನೆ ಆತ್ಮಾವಲೋಕನ ಮಾಡಿಕೊಂಡು ಕೂರದೆ ಪಕ್ಷ ಸಂಘಟಿಸಿ ಗೆಲುವಿನತ್ತ ಸಾಗುವ ಕೆಲಸವೂ ಜತೆ ಜತೆಗೆ ಆಗಬೇಕು ಎಲ್ಲರೂ ಸೇರಿ ಸಂಘಟನಾತ್ಮಕವಾಗಿ ಆ ಕೆಲಸವನ್ನು ಮಾಡೋಣ ಎಂದು ಹೇಳಿದರು.
ಮುಂದಿನ ದಿನಗಳಲ್ಲಿ ಸರಕಾರದ ನಾನಾ ಸಂಸ್ಥೆ, ಇಲಾಖೆ, ನಿಗಮಗಳು, ಸಮಿತಿಗಳಿಗೆ ನಾಮ ನಿರ್ದೇಶನದಂತ ನೇಮಕಗಳು ನಡೆಯಲಿದ್ದು ಪಕ್ಷದ ಸಂಘಟನೆಯಲ್ಲಿ ಗುರ್ತಿಸಿಕೊಂಡ ಎಲ್ಲರಿಗೂ ಗ್ರಾಮ ಪಂಚಾಯಿತಿವಾರು ಆಧ್ಯತೆ ನೀಡಿ ಎಲ್ಲರಿಗೂ ಅವಕಾಶಗಳನ್ನು ಕೊಡಿಸುವ ಕೆಲಸವನ್ನು ಪ್ರಾಮಾಣಿಕವಾಗಿ ಮಾಡಲಿದ್ದೇವೆ ಎಂದು ತಿಳಿಸಿದರು.
ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷೆ ಸಹನಾ ರಾಜೀವ್ ಗೌಡ , ವಿಧಾನಸಭಾ ಉನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿಯಾಗಿದ್ದ ರಾಜೀವ್ ಗೌಡ, ಸಾದಲಿ ಗೋವಿಂದರಾಜು, ಚಿಲಕಲನೇರ್ಪು ಕೃಷ್ಣರೆಡ್ಡಿ, ಕೋಚಿಮುಲ್ ಮಾಜಿ ಅಧ್ಯಕ್ಷ ಕೆ.ಗುಡಿಯಪ್ಪ, ಹಿರೇಬಲ್ಲ ಕೃಷ್ಣಪ್ಪ,ಬ್ಯಾಟರಾಯಶೆಟ್ಟಿ, ಓಬಳಪ್ಪ, ನಿರಂಜನ್, ಡಿ.ವಿ.ವೆಂಕಟೇಶ್, ನಗರಸಭೆಯ ಮಾಜಿ ಅಧ್ಯಕ್ಷ ಅಫ್ಸರ್ ಪಾಷ ,ಗಂಜಿಗುಂಟೆ ಮೌಲಾ, ಚೀಮನಹಳ್ಳಿ ನರೇಂದ್ರ, ರಾಯಪ್ಪನಹಳ್ಳಿ ಅಶ್ವತ್ಥನಾರಾಯಣರೆಡ್ಡಿ, ಡಿ.ಪಿ. ನಾಗರಾಜ್, ಕುಂದಲಗುರ್ಕಿ ವೆಂಕಟೇಶ್, ನಗರಸಭಾ ಸದಸ್ಯ ತನ್ವೀರ್ ಅಹಮದ್, ಕೆ.ಆನಂದ್, ಬಸವಪಟ್ಟಣ ಬೈರೇಗೌಡ, ಶೆಟ್ಟಿಹಳ್ಳಿ ರಾಮಚಂದ್ರಗೌಡ, ಹಂಡಿಗನಾಳ ಗ್ರಾ.ಪಂ ಸದಸ್ಯ ಜಯರಾಂ, ಕೆಪಿಸಿಸಿ ಮಾಜಿ ಸದಸ್ಯ ನಾರಾಯಣಸ್ವಾಮಿ ಹಾಜರಿದ್ದರು.