
Narayanadasarahalli, Sidlaghatta : ರಾಜ್ಯ ಸರ್ಕಾರವು ತನ್ನ ಐದು ಗ್ಯಾರಂಟಿಗಳೊಂದಿಗೆ ಆರನೇ ಗ್ಯಾರಂಟಿಯಾಗಿ ಹೈನುಗಾರರಿಗೆ ಪ್ರೋತ್ಸಾಹಧನ ನೀಡಬೇಕು ಹಾಗೂ ರಾಜ್ಯದ ಹಾಲು ಉತ್ಪಾದನೆಯನ್ನು ಉತ್ತೇಜಿಸಬೇಕು ಎಂದು ಶಾಸಕ ಬಿ.ಎನ್. ರವಿಕುಮಾರ್ ಅಭಿಪ್ರಾಯಪಟ್ಟರು.
ತಾಲ್ಲೂಕಿನ ನಾರಾಯಣದಾಸರಹಳ್ಳಿಯಲ್ಲಿ ಹಾಲು ಉತ್ಪಾದಕರ ಸಹಕಾರ ಸಂಘದ ನೂತನ ಕಟ್ಟಡ ಉದ್ಘಾಟನಾ ಸಮಾರಂಭದಲ್ಲಿ ಭಾಗವಹಿಸಿದ ಅವರು, ಹಾಲು ಉತ್ಪಾದನೆಯನ್ನು ಹೆಚ್ಚಿಸಲು ಹೈನುಗಾರರಿಗೆ ಸಕಾಲದಲ್ಲಿ ಬೆಂಬಲ ನೀಡುವುದು ಅಗತ್ಯವೆಂದರು. ಏಳು ಕೋಟಿ ಜನಸಂಖ್ಯೆಯ ರಾಜ್ಯಕ್ಕೆ ಹೊರರಾಜ್ಯಗಳಿಂದ ಹಾಲು ಆಮದು ಮಾಡುವ ಅಗತ್ಯ ಉಂಟಾಗಬಾರದು. ಹೈನುಗಾರಿಕೆ ಯುವಜನರಿಗೆ ಆಕರ್ಷಕವಾಗಿ ಕಾಣಬೇಕಾದರೆ, ಹಾಲಿಗೆ ಉತ್ತಮ ಬೆಲೆ ಸಿಗಬೇಕು ಮತ್ತು ಸರ್ಕಾರದಿಂದ ಹೆಚ್ಚಿನ ಉತ್ತೇಜನ ಇರಬೇಕು ಎಂದು ಅಭಿಪ್ರಾಯಿಸಿದರು.
ಕೆ.ಎಂ.ಎಫ್ ನಿರ್ದೇಶಕ ಶ್ರೀನಿವಾಸ್ ರಾಮಯ್ಯ ಮಾತನಾಡಿ, ಗ್ರಾಮಗಳಲ್ಲಿ ದೇವಸ್ಥಾನ ಎಷ್ಟು ಮುಖ್ಯವೋ, ಹಾಲು ಉತ್ಪಾದಕರ ಸಹಕಾರ ಸಂಘವೂ ಅಷ್ಟೇ ಮುಖ್ಯವೆಂದರು. ರೇಷ್ಮೆ ಸಾಕಾಣಿಕೆ ಮತ್ತು ಹೈನುಗಾರಿಕೆ ಪರಸ್ಪರ ಅವಿನಾಭಾವ ಸಂಬಂಧ ಹೊಂದಿದ್ದು, ಇತ್ತೀಚಿನ ದಿನಗಳಲ್ಲಿ ರೇಷ್ಮೆ ಸಾಕಾಣಿಕೆ ಇಳಿಮುಖವಾಗಿರುವುದರಿಂದ ಹೈನುಗಾರಿಕೆಗೆ ಸಹ ಪರಿಣಾಮ ಬಿದ್ದಿದೆ. ಹಾಲಿನ ಬೇಡಿಕೆ ಹೆಚ್ಚಾದರೂ, ಉತ್ಪಾದನೆ ತಕ್ಕಮಟ್ಟಿಗೆ ಏರದಿರುವುದನ್ನು ಉಲ್ಲೇಖಿಸಿ, ನಂದಿನಿ ಬ್ರಾಂಡ್ ತನ್ನ ಗುಣಮಟ್ಟದಿಂದ ಹೆಸರಾಗಿರುವ ಕಾರಣ, ಹಾಲು ಉತ್ಪಾದಕರು ಹೆಚ್ಚಿನ ಗುಣಮಟ್ಟದ ಹಾಲು ಉತ್ಪಾದನೆಗೆ ಒತ್ತು ನೀಡಬೇಕು ಎಂದು ಸಲಹೆ ನೀಡಿದರು.
ಈ ಕಾರ್ಯಕ್ರಮದಲ್ಲಿ ನಾರಾಯಣದಾಸರಹಳ್ಳಿ ಹಾಲು ಉತ್ಪಾದಕರ ಸಹಕಾರ ಸಂಘದ ಅಧ್ಯಕ್ಷ ಟಿ. ಲಕ್ಷ್ಮೀನಾರಾಯಣ, ಮಾಜಿ ಜಿಲ್ಲಾ ಪಂಚಾಯಿತಿ ಅಧ್ಯಕ್ಷ ಸುಬ್ರಮಣಿ, ಪಿ.ಎಲ್.ಡಿ. ಬ್ಯಾಂಕ್ ಅಧ್ಯಕ್ಷ ಬಂಕ್ ಮುನಿಯಪ್ಪ, ನಿರ್ದೇಶಕ ಮುರಳಿ, ಸುನಂದಮ್ಮ ನಾಗರಾಜು, ತಾದೂರು ರಘು, ಜಿಲ್ಲಾ ಹಾಲು ಒಕ್ಕೂಟ ವ್ಯವಸ್ಥಾಪಕ ನಿರ್ದೇಶಕ ಡಾ. ಎ.ಸಿ. ಶ್ರೀನಿವಾಸಗೌಡ, ವ್ಯವಸ್ಥಾಪಕ ಡಾ. ಜಿ. ಮಾಧವ, ಉಪವ್ಯವಸ್ಥಾಪಕ ಡಾ. ಬಿ.ಆರ್. ರವಿಕಿರಣ್, ವಿಸ್ತರಣಾಧಿಕಾರಿ ಎನ್.ಜಿ. ಜಯಚಂದ್ರ, ಕೃಷಿ ಮಂತ್ರಾಲಯದ ಮಾಜಿ ಹಿರಿಯ ತಾಂತ್ರಿಕ ನಿರ್ದೇಶಕ ಎನ್.ಆರ್. ಸಮರ್ಥರಾಮ್, ಹುಜಗೂರು ರಾಮಣ್ಣ, ಗ್ರಾಮ ಪಂಚಾಯಿತಿ ಅಧ್ಯಕ್ಷೆ ಮಾದವಮ್ಮ, ಸದಸ್ಯರಾದ ಶಾರದಮ್ಮ ಲಕ್ಷ್ಮೀನಾರಾಯಣ, ದೇವರಾಜು, ಪಿಡಿಒ ತನ್ವೀರ್ ಅಹಮದ್ ಸೇರಿದಂತೆ ಅನೇಕ ಗಣ್ಯರು ಹಾಜರಿದ್ದರು.