Sidlaghatta : ಶಿಡ್ಲಘಟ್ಟ ನಗರದ ಸಾರ್ವಜನಿಕ ಸರ್ಕಾರಿ ಆಸ್ಪತ್ರೆ ಆವರಣದಲ್ಲಿ ಗುರುವಾರ ಆರೋಗ್ಯ ಇಲಾಖೆಯ ವತಿಯಿಂದ ರಾಷ್ಟ್ರೀಯ ಡೆಂಗಿ ದಿನಾಚರಣೆಯ ಅಂಗವಾಗಿ ಜನಜಾಗೃತಿ ಜಾಥಾ ಹಮ್ಮಿಕೊಳ್ಳಲಾಗಿತ್ತು.
ಜಾಥಾ ಕಾರ್ಯಕ್ರಮಕ್ಕೆ ಚಾಲನೆ ನೀಡಿದ ತಾಲ್ಲೂಕು ಆರೋಗ್ಯ ಅಧಿಕಾರಿ ಡಾ. ವೆಂಕಟೇಶ್ ಮೂರ್ತಿ ಮಾತನಾಡಿ, ಹೆಣ್ಣು ಈಡಿಸ್ ಈಜಿಪ್ಟಿ ಸೊಳ್ಳೆ ಕಡಿತದಿಂದ ಡೆಂಗಿ ಖಾಯಿಲೆ ಹರಡುತ್ತದೆ. ನಿಂತ ನೀರಲ್ಲಿ ಈ ಸೊಳ್ಳೆ ಹುಟ್ಟಿಕೊಳ್ಳುತ್ತದೆ. ಸಾರ್ವಜನಿಕರು ತಮ್ಮ ಮನೆ ಪರಿಸರದಲ್ಲಿ ನೀರು ನಿಲ್ಲದಂತೆ ಎಚ್ಚರಿಕೆ ವಹಿಸಬೇಕು ಎಂದು ತಿಳಿಸಿದರು.
ಡೆಂಗಿ ಬಗ್ಗೆ ಮುನ್ನೆಚ್ಚರಿಕೆ ವಹಿಸಲು ಆರೋಗ್ಯ ಇಲಾಖೆಯಿಂದ ಸಾರ್ವಜನಿಕರಲ್ಲಿ ಅರಿವು ಮೂಡಿಸಲಾಗುತ್ತಿದೆ. ಲಾರ್ವಾ ಸರ್ವೆ ಕೈಗೊಳ್ಳಲು ಆರೋಗ್ಯ ಇಲಾಖೆ ಸಿಬ್ಬಂದಿ, ಆಶಾ ಕಾರ್ಯಕರ್ತೆಯರು ಬಂದಾಗ ಸಾರ್ವಜನಿಕರು ಸಹಕರಿಸಬೇಕು ಎಂದು ಕೋರಿದರು.
ಸೊಳ್ಳೆ ಕಡಿತದಿಂದ ಪಾರಾಗುವುದೊಂದೇ ರೋಗ ನಿಯಂತ್ರಣಕ್ಕಿರುವ ಪ್ರಥಮ ದಾರಿ. ಮೈ ತುಂಬ ಬಟ್ಟೆಯನ್ನು ಧರಿಸುವುದು, ಮಲಗುವಾಗ ಸೊಳ್ಳೆ ಪರದೆ ಬಳಸುವುದು, ಸೊಳ್ಳೆ ನಿರೋಧಕ ಕ್ರೀಮ್ ಗಳನ್ನು ಬಳಸುವುದು, ಮನೆಯಲ್ಲಿ, ಸುತ್ತಮುತ್ತ ಸೊಳ್ಳೆ ಸುಳಿಯದಂತೆ ನೋಡಿಕೊಳ್ಳುವುದರಿಂದ ರೋಗದಿಂದ ಪಾರಾಗಬಹುದು. ಪರಿಸರ ವಿಧಾನ, ರಾಸಾಯನಿಕ ವಿಧಾನ, ಜೈವಿಕ ವಿಧಾನದ ಮೂಲಕವೂ ಸೊಳ್ಳೆ ಹರಡದಂತೆ ತಡೆಗಟ್ಟಲು ಅವಕಾಶವಿದೆ ಎಂದು ವಿವರಿಸಿದರು.
ಈ ಸಂದರ್ಭದಲ್ಲಿ ಸಾರ್ವಜನಿಕ ಆಸ್ಪತ್ರೆಯ ವೈದ್ಯರಾದ ಡಾ. ಮಂಜಾ ನಾಯಕ್ , ಡಾ.ಮಂಜುನಾಥ್, ಡಾ. ಮಾಧವ್ , ಡಾ.ಸ್ವಾತಿ, ಡಾ. ಸುಗುಣ,ತಾಲ್ಲೂಕು ಆರೋಗ್ಯ ನಿರೀಕ್ಷಣಾಧಿಕಾರಿ ಎಂ ಎಸ್ ದೇವರಾಜ್. ನಂದಿನಿ, ಅಪ್ರೊಜ್, ಪ್ರಯೋಗ ಶಾಲಾ ನೋಡಲ್ ಅಧಿಕಾರಿ ಟಿ.ಟಿ. ನರಸಿಂಹಪ್ಪ, ಆರ್ ಬಿ ಎಸ್ ಕೆ ವೈದ್ಯರಾದ ಡಾ. ಅಮೃತ ಹಾಗೂ ಅಕ್ಕಲರೆಡ್ಡಿ,ಚೈತ್ರ, ಧನಂಜಯ, ಕೀರ್ತಿ, ಮಂಜು ಹಾಜರಿದ್ದರು.