Sidlaghatta : ಕೀಟಜನ್ಯ ಸಾಂಕ್ರಾಮಿಕ ರೋಗಗಳಾದ ಡೆಂಗ್ಯೂ, ಚಿಕಂಗುನ್ಯಾ ಹಾಗೂ ಜಿಕಾ ವೈರಸ್ ಜ್ವರ ಪ್ರಕರಣಗಳನ್ನು ತಡೆಗಟ್ಟುವ ನಿಟ್ಟಿನಲ್ಲಿ ಸೊಳ್ಳೆಗಳ ಸಂತಾನೋತ್ಪತ್ತಿ ತಡೆಗಟ್ಟುವಿಕೆಯನ್ನು ಸಮರ್ಪಕವಾಗಿ ನಿಭಾಯಿಸಬೇಕು. ಆಶಾ ಕಾರ್ಯಕರ್ತೆಯರು ಬಂದಾಗ ಗ್ರಾಮಸ್ಥರು ಸಹಕರಿಸಿ, ಒಣಗಲು ದಿನ ಆಚರಿಸಬೇಕು ಎಂದು ಜಿಲ್ಲಾ ಆರೋಗ್ಯಾಧಿಕಾರಿ ಡಾ.ಎಸ್.ಎಸ್.ಮಹೇಶ್ ಕುಮಾರ್ ತಿಳಿಸಿದರು.
ತಾಲ್ಲೂಕಿನ ವಿವಿಧ ಭಾಗಗಳ ಗ್ರಾಮಗಳಿಗೆ ಭೇಟಿ ನೀಡಿದ್ದ ಅವರು ಕೀಟಜನ್ಯ ಸಾಂಕ್ರಾಮಿಕ ರೋಗಗಳ ಬಗ್ಗೆ ಅರಿವು ಮೂಡಿಸಿ, ಮುನ್ನೆಚ್ಚರಿಕಾ ಕ್ರಮಗಳ ಬಗ್ಗೆ ವಿವರಿಸಿದರು.
ವಾರದ ಒಣಗಲು ದಿನವನ್ನು ಕಡ್ಡಾಯವಾಗಿ ಪ್ರತಿವಾರವು ಆಚರಿಸಬೇಕು. ಸಂಜೆಯ ಹೊತ್ತು ಧೂಮೀಕರಣ ಮಾಡುವಂತೆ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳಿಗೆ ಇಒ ಮೂಲಕ ತಿಳಿಸಲಾಗಿದೆ ಎಂದರು.
ತಾಲ್ಲೂಕು ಆರೋಗ್ಯಾಧಿಕಾರಿ ಡಾ.ವೆಂಕಟೇಶಮೂರ್ತಿ ಮಾತನಾಡಿ, ಡೆಂಗ್ಯೂ, ಚಿಕಂಗುನ್ಯಾ ಹಾಗೂ ಜಿಕಾ ವೈರಸ್ ಜ್ವರ ಬರದಂತೆ ತಡೆಗಟ್ಟಲು ಸಾರ್ವಜನಿಕರು ಸಹಕರಿಸಬೇಕು. ಡೆಂಗ್ಯೂ, ಹಳದಿ ಜ್ವರ, ಮೆದುಳು ಜ್ವರ (ಜಪಾನೀಸ್ ಎನ್ಸೆಫಾಲಿಟಿಸ್) ಹಾಗೂ ವೆಸ್ಟ್ ನೈಲ್ ವೈರಸ್ ಹರಡುವ ಈಡಿಸ್ ಜಾತಿಯ ಸೊಳ್ಳೆಗಳ ಕಡಿತದಿಂದ ಜಿಕಾ ವೈರಸ್ ವೈರಸ್ ಹರಡುತ್ತದೆ. ತಲೆನೋವು, ಕಣ್ಣು ಕೆಂಪಗಾಗುವುದು, ಜ್ವರ, ಚರ್ಮದ ಮೇಲೆ ಅಲ್ಲಲ್ಲಿ ದದ್ದುಗಳು, ಮೈಕೈ ನೋವು, ಮಾಂಸಖಂಡಗಳ ಸೆಳೆತ, ಕೀಲು ನೋವು ಲಕ್ಷಣಗಳು ಕಂಡು ಬಂದಲ್ಲಿ ತಕ್ಷಣ ಆಸ್ಪತ್ರೆಗೆ ಬಂದು ಸೂಕ್ತ ಚಿಕಿತ್ಸೆ ಪಡೆಯಬೇಕು. ಇದುವರೆಗೆ ಈ ವೈರಸ್‌ನಿಂದ ಸಂರಕ್ಷಣೆ ಪಡೆಯಲು ಯಾವುದೇ ಲಸಿಕೆ ಬಂದಿಲ್ಲ. ಸೊಳ್ಳೆಗಳಿಂದ ಈ ವೈರಸ್ ಹರಡದಂತೆ ಮುಂಜಾಗ್ರತೆ ವಹಿಸುವುದೇ ಇದನ್ನು ತಡೆಯುವ ವಿಧಾನವಾಗಿದೆ ಎಂದು ವಿವರಿಸಿದರು.
ತಲಕಾಲಯಬೆಟ್ಟ, ವೆಂಕಟಾಪುರ ಗ್ರಾಮಗಳಲ್ಲಿ ಗ್ರಾಮಸ್ಥರಿಗೆ ಅರಿವು ಮೂಡಿಸಿ ಕೆಲವು ಗರ್ಭಿಣಿಯರನ್ನು ಪರೀಕ್ಷಿಸಿ, ಅವರಿಗೂ ಮುನ್ನೆಚ್ಚರಿಕಾ ಕ್ರಮಗಳ ಬಗ್ಗೆ ವಿವರಿಸಿದರು.
ಈ ಸಂದರ್ಭದಲ್ಲಿ ಸಮುದಾಯ ಆರೋಗ್ಯ ಅಧಿಕಾರಿಗಳು, ಡಾ.ಯಶವಂತ್ ಪ್ರಸಾದ್, ಜಿಲ್ಲಾ ಮಲೇರಿಯಾ ಅಧಿಕಾರಿ ಡಾ.ಪ್ರಕಾಶ್, ಗ್ರಾಮ ಪಮ್ಚಾಯಿತಿ ಅಧ್ಯಕ್ಷ ವೆಂಕಟೇಶಯ್ಯ, ಪಿಡಿಒ ಗಳಾದ ಶ್ರೀನಿವಾಸ್ ಮತ್ತು ಕನಕಮ್ಮ ಹಾಜರಿದ್ದರು.