Devaramallur, Sidlaghatta : ಬೆಂಗಳೂರು ಬ್ಯಾಪ್ಟಿಸ್ಟ್ ಆಸ್ಪತ್ರೆ ಸಮುದಾಯ ಆರೋಗ್ಯ ವಿಭಾಗ ಹಾಗೂ ದೇವರಮಳ್ಳೂರು ಗ್ರಾಮ ಪಂಚಾಯಿತಿ ಸಹಯೋಗದಲ್ಲಿ ಗ್ರಾಮ ಪಂಚಾಯಿತಿ ಆವರಣದಲ್ಲಿ ಬುಧವಾರ ಉಚಿತ ಆರೋಗ್ಯ ತಪಾಸಣಾ ಶಿಬಿರವನ್ನು ಆಯೋಜಿಸಲಾಗಿತ್ತು.
ಬ್ಯಾಪ್ಟಿಸ್ಟ್ ಆಸ್ಪತ್ರೆಯ ತಜ್ಞ ವೈದ್ಯಕೀಯ ಅತ್ಯಾಧುನಿಕ ಉಪಕರಣಗಳ ನೆರವಿನಿಂದ ಸಾಮಾನ್ಯ ರೋಗ ತಪಾಸಣೆ, ದಂತ ತಪಾಸಣೆ, ರಕ್ತದೊತ್ತಡ, ಮಧುಮೇಹ ತಪಾಸಣೆ, ಕಣ್ಣಿನ ತಪಾಸಣೆ, ಮಾನಸಿಕ ಅಸ್ವಸ್ಥತೆ ಮತ್ತು ಕ್ಯಾನ್ಸರ್ ಖಾಯಿಲೆಗಳ ಪರೀಕ್ಷೆ ನಡೆಸಲಾಯಿತು.
“ಗ್ರಾಮೀಣ ಭಾಗಗಳಲ್ಲಿ ಮಧುಮೇಹ ಮತ್ತು ರಕ್ತದ ಒತ್ತಡ ಖಾಯಿಲೆ ಬಗ್ಗೆ ಹೆಚ್ಚಾಗಿ ಅರಿವು ಇರುವುದಿಲ್ಲ. ತಮಗೆ ಖಾಯಿಲೆ ಇದೆಯೇ ಇಲ್ಲವೇ ಎಂಬುದೂ ಅವರಿಗೆ ತಿಳಿದಿರುವುದಿಲ್ಲ. ಈ ಖಾಯಿಲೆಗಳು ಇತರ ಖಾಯಿಲೆಗಳಿಗೆ ರಹದಾರಿಯಿದ್ದಂತೆ. ಆದ್ದರಿಂದ ಪ್ರತಿ ತಿಂಗಳೂ ನಮ್ಮ ಆಸ್ಪತ್ರೆಯ ತಜ್ಞ ವೈದ್ಯರು ಬಂದು ಪರೀಕ್ಷೆ ನಡೆಸಿ ಸೂಕ್ತ ಚಿಕಿತ್ಸೆ ಮತ್ತು ಔಷಧಿಗಳನ್ನು ನೀಡುತ್ತಾರೆ. ಗ್ರಾಮೀಣ ಜನರ ಆರೋಗ್ಯವನ್ನು ಉತ್ತಮಪಡಿಸುವುದು ನಮ್ಮ ಉದ್ದೇಶವಾಗಿದೆ” ಎಂದು ಬ್ಯಾಪ್ಟಿಸ್ಟ್ ಆಸ್ಪತ್ರೆ ಸಮುದಾಯ ಆರೋಗ್ಯ ವಿಭಾಗದ ಮುಖ್ಯಸ್ಥ ಕೃಷ್ಣಮೂರ್ತಿ ತಿಳಿಸಿದರು.
ಬ್ಯಾಪ್ಟಿಸ್ಟ್ ಆಸ್ಪತ್ರೆ ಸಮುದಾಯ ಆರೋಗ್ಯ ವಿಭಾಗದ ವೈದ್ಯರಾದ ಡಾ.ಸುಮನ್, ಡಾ.ಕ್ಯಾನಿ, ಡಾ.ಪೂಜ, ಎಂ.ಪಿ.ಸಿ.ಎಸ್ ಅಧ್ಯಕ್ಷ ದೇವರಾಜ್, ಗ್ರಾಮ ಪಂಚಾಯಿತಿ ಅಧ್ಯಕ್ಷೆ ಸುಶೀಲಮ್ಮ ಮುನಿಶಾಮಪ್ಪ, ಸದಸ್ಯರಾದ ವೆಂಕಟೇಶ್, ಸುಗುಣಮ್ಮ, ಲಕ್ಷ್ಮಿ, ರಾಜಣ್ಣ, ಪಿಡಿಒ ಸುಧಾಮಣಿ, ಕಾರ್ಯದರ್ಶಿ ಗೋಪಾಲ್, ದ್ಯಾವಪ್ಪ, ಆಸ್ಪತ್ರೆ ಸಿಬ್ಬಂದಿ ಮುಕುಂದ, ರಾಜ, ಕೃಷ್ಣಮೂರ್ತಿ, ನಂದೀಶ್, ಮಧು, ರಾಮಪ್ಪ, ರವಿ, ವಿಕ್ರಮ್, ಸುಮನ್, ದೇವಾ, ಅಮೃತಾ, ವಿಜಯಾ, ರಶ್ಮಿ, ಜೋಸೆಫ್ ಹಾಜರಿದ್ದರು.