Sidlaghatta : ದೇಶದಲ್ಲಿ ತಲೆದೋರಿದ ಆಹಾರ ಸಮಸ್ಯೆ ಹೋಗಲಾಡಿಸಿ, ಹಸಿರು ಕ್ರಾಂತಿಗೆ ಕಾರಣರಾದ ಭಾರತದ ಮಾಜಿ ಉಪ ಪ್ರಧಾನಿ ಡಾ.ಬಾಬು ಜಗಜೀವನರಾಂ (Dr. Babu Jagjivan Ram) ಅವರ ಆದರ್ಶಗಳನ್ನು ಪಾಲಿಸಬೇಕಿದೆ. ಕಾರ್ಮಿಕ ಸಚಿವರಾಗಿ ಕಾರ್ಮಿಕರ ಹಲವಾರು ಸಮಸ್ಯೆಗಳನ್ನು ಪರಿಹರಿಸಲು ಕಾರ್ಮಿಕ ಕಾನೂನುಗಳನ್ನು ಜಾರಿಗೆ ತಂದಂತಹ ಕಾರ್ಮಿಕ ಕಾನೂನುಗಳ ಶಿಲ್ಪಿ ಅವರು ಎಂದು ತಹಶೀಲ್ದಾರ್ ಬಿ.ಎನ್ ಸ್ವಾಮಿ ತಿಳಿಸಿದರು’
ನಗರದ ತಾಲ್ಲೂಕು ಪಂಚಾಯಿತಿ ಸಭಾಂಗಣದಲ್ಲಿ ಶುಕ್ರವಾರ ರಾಷ್ಟ್ರೀಯ ಹಬ್ಬಗಳ ಆಚರಣೆ ಸಮಿತಿ ಹಾಗೂ ತಾಲ್ಲೂಕು ಸಮಾಜ ಕಲ್ಯಾಣ ಇಲಾಖೆಯ ವತಿಯಿಂದ ಹಸಿರು ಕ್ರಾಂತಿಯ ಹರಿಕಾರ ಭಾರತದ ಮಾಜಿ ಉಪ ಪ್ರಧಾನಿ ಡಾ.ಬಾಬು ಜಗಜೀವನರಾಂ ಅವರ 117ನೇ ಜನ್ಮ ದಿನಾಚರಣೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಲೋಕಸಭಾ ಚುನಾವಣೆ 2024 ಘೋಷಣೆಯಾಗಿರುವ ಹಿನ್ನೆಲೆಯಲ್ಲಿ ಚುನಾವಣಾ ನೀತಿ ಸಂಹಿತೆ ಜಾರಿಯಲ್ಲಿರುವುದರಿಂದ ಸಾಂಕೇತಿಕವಾಗಿ ಸರಳವಾಗಿ ಜಯಂತಿಯನ್ನು ಸಮತಾ ದಿನವನ್ನಾಗಿ ಆಚರಿಸಲಾಗಿದೆ. ದೇಶದ ಸರ್ವಾಂಗೀಣ ಶ್ರೇಯೋಭಿವೃದ್ಧಿಗೆ ನೀಡಿದ ಅವರ ಕೊಡುಗೆ ಅಪಾರ. ಜಗಜೀವನ್ ರಾಮ್- ಅಂಬೇಡ್ಕರ್ ಮತ್ತಿತರ ಮಹಾನೀಯರ ಸಿದ್ಧಾಂತ ಆದರ್ಶಗಳನ್ನು ಪಾಲಿಸಬೇಕು ಎಂದರು.
ಸಮಾಜ ಕಲ್ಯಾಣ ಇಲಾಖೆಯ ಸಹಾಯಕ ನಿರ್ದೇಶಕ ಜಗದೀಶ್ ಮಾತನಾಡಿ, ಭಾರತದ ಸಾರ್ವಭೌಮತೆ ಅಖಂಡತೆ ಮತ್ತು ಏಕತೆಯನ್ನು ಎತ್ತಿ ಹಿಡಿಯುವುದು ಮತ್ತು ಕಾಪಾಡುವುದು ಪ್ರತಿಯೊಬ್ಬ ಭಾರತೀಯನ ಸಂವಿಧಾನ ಬದ್ಧ ಮೂಲ ಕರ್ತವ್ಯ ಎಂದರು.
ತಾಲ್ಲೂಕು ಪಂಚಾಯಿತಿ ಕಾರ್ಯನಿರ್ವಹಣಾಧಿಕಾರಿ ಜಿ.ಮುನಿರಾಜ, ಸರ್ಕಲ್ ಇನ್ಸ್ ಪೆಕ್ಟರ್ ಎಂ.ಶ್ರೀನಿವಾಸ್, ಕ್ಷೇತ್ರಶಿಕ್ಷಣಾಧಿಕಾರಿ ನರೇಂದ್ರ ಕುಮಾರ್, ಜನಜಾಗೃತಿ ಸಮಿತಿ ಸದಸ್ಯ ಮೇಲೂರು ಮಂಜುನಾಥ್, ಕೆ.ಎನ್ ಸುಬ್ಬಾರೆಡ್ಡಿ, ರೇಷ್ಮೆ ಇಲಾಖೆಯ್ ಸಹಾಯಕ ನಿರ್ದೇಶಕ ತಿಮ್ಮರಾಜು, ಸಿಡಿಪಿ ಓ ನವತಾಜ್, ಆರೋಗ್ಯ ಇಲಾಖೆಯ ದೇವರಾಜ್, ದಲಿತ ಮುಖಂಡ ಮುನೀಂದ್ರ, ಛಲಪತಿ, ರವಿಕುಮಾರ್, ತಿರುಮಳಪ್ಪ, ಗೋಕುಲ್ ಹಾಜರಿದ್ದರು.