Sidlaghatta : ರಾಗಿ ಕಟಾವು ಯಂತ್ರದ ಮಾಲೀಕರು ಹಾಗೂ ಮಧ್ಯವರ್ತಿಗಳು ಹೆಚ್ಚುವರಿ ಹಣ ವಸೂಲಿಸುತ್ತಿರುವುದರಿಂದ ರೈತರು ತೊಂದರೆ ಅನುಭವಿಸುತ್ತಿದ್ದಾರೆ. ಈ ಸಂಬಂಧ ತಕ್ಷಣ ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿ, ಕರ್ನಾಟಕ ರಾಜ್ಯ ರೈತ ಸಂಘ (ಪುಟ್ಟಣ್ಣಯ್ಯ ಬಣ)ದ ಸದಸ್ಯರು ಗುರುವಾರ ತಹಶೀಲ್ದಾರ್ ಅವರ ಹೆಸರುಗೆ ಹಕ್ಕು ದಾಖಲೆ ಶಿರಸ್ತೇದಾರ್ ಆಸೀಯಾ ಬಿ. ಆವರ ಮೂಲಕ ಮನವಿ ಸಲ್ಲಿಸಿದರು.
ರಾಗಿ ಕಟಾವು ಪ್ರಕ್ರಿಯೆ ಪ್ರಸ್ತುತ ನಡೆಯುತ್ತಿದ್ದು, ಕೂಲಿಯಾಳುಗಳ ಕೊರತೆಯನ್ನು ಮನಗಂಡು ಜಿಲ್ಲಾಧಿಕಾರಿಗಳು ಯಂತ್ರಗಳಿಗೆ ಒಂದು ಗಂಟೆಗೆ ₹2,700 ವಸೂಲಿಸಲು ಆದೇಶ ನೀಡಿದ್ದಾರೆ. ಆದೇಶ ಉಲ್ಲಂಘನೆ ಮಾಡುವ ಯಂತ್ರ ಮಾಲೀಕರು ಅಥವಾ ಮಧ್ಯವರ್ತಿಗಳ ವಿರುದ್ಧ ಕಾನೂನು ಕ್ರಮ ಕೈಗೊಳ್ಳುವುದಾಗಿ ಜಿಲ್ಲಾಧಿಕಾರಿಗಳು ಸ್ಪಷ್ಟಪಡಿಸಿದ್ದಾರೆ.
ಆದರೆ ತಾಲ್ಲೂಕಿನ ಹಲವು ಕಡೆ ₹3,500 ರಿಂದ ₹5,000 ವರೆಗೆ ಹಣ ವಸೂಲಿ ಮಾಡಲಾಗುತ್ತಿದೆ ಎಂದು ರೈತರು ದೂರಿದರು. ಈ ಬಗ್ಗೆ ತಹಶೀಲ್ದಾರ್ ಅವರು ಪರಿಶೀಲನೆ ನಡೆಸಿ, ಹೋಬಳಿ ಮಟ್ಟದ ರಜಸ್ವ ನಿರೀಕ್ಷಕರ ವರದಿ ಪಡೆದ ನಂತರ ಕೃಷಿ ಇಲಾಖೆಯ ಅಧಿಕಾರಿಗಳೊಂದಿಗೆ ಸಮಾಲೋಚನೆ ಮಾಡಿ ಸೂಕ್ತ ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸಿದರು.
ಈ ಕಾರ್ಯಕ್ರಮದಲ್ಲಿ ರೈತ ಸಂಘದ ತಾಲ್ಲೂಕು ಅಧ್ಯಕ್ಷ ಎಸ್.ಎಂ. ರವಿಪ್ರಕಾಶ್, ಜಿಲ್ಲಾ ಗೌರವಾಧ್ಯಕ್ಷ ಕೋಟೆ ಚನ್ನೇಗೌಡ, ಜಿಲ್ಲಾ ಉಪಾಧ್ಯಕ್ಷ ಅರುಣ್ ಕುಮಾರ್, ನಾಗರಾಜ್, ಮಾರುತಿ, ನಾಘರಾಜು ಮತ್ತು ಶ್ರೀಧರ ಉಪಸ್ಥಿತರಿದ್ದರು.