Sidlaghatta : ಶಿಡ್ಲಘಟ್ಟ ತಾಲ್ಲೂಕಿನ ಹಂಡಿಗನಾಳದ ಕೆ.ವಿ.ಭವನದಲ್ಲಿ ಶ್ರೀ ಕೆಂಪಣ್ಣಸ್ವಾಮಿ ಶ್ರೀ ವೀರಣ್ಣಸ್ವಾಮಿ ದೇವಾಲಯ ಟ್ರಸ್ಟ್ ವತಿಯಿಂದ ಸೋಮವಾರ ಆಯೋಜಿಸಿದ್ದ 2020-21 ನೇ ಸಾಲಿನ 7ನೇ ವರ್ಷದ ಪ್ರತಿಭಾ ಪುರಸ್ಕಾರ ಸಮಾರಂಭದಲ್ಲಿ ಶಾಸಕ ವಿ.ಮುನಿಯಪ್ಪ ಮಾತನಾಡಿದರು.
ಸಮಾಜದಲ್ಲಿ ಸಮಾನತೆಯನ್ನು ಸಾಧಿಸಲು ಶೈಕ್ಷಣಿಕವಾಗಿ ಪ್ರಗತಿ ಕಾಣಬೇಕು. ಸಾಮಾಜಿಕ ನ್ಯಾಯವು ಎಲ್ಲರಿಗೂ ತಲುಪುವಂತಾಗಬೇಕು. ಪ್ರತಿಭಾ ಪುರಸ್ಕಾರ ಎಲ್ಲಾ ವರ್ಗದವರಿಗೂ ವಿಸ್ತರಣೆಯಾಗಲಿ, ಶೈಕ್ಷಣಿಕ ತರಬೇತಿ ಮತ್ತು ಪ್ರೋತ್ಸಾಹ ಹೆಚ್ಚಾಗಲಿ. ಬಯಲು ಸೀಮೆಯ ಗ್ರಾಮಾಂತರ ಪ್ರದೇಶದ ಪ್ರತಿಭಾವಂತ ಮಕ್ಕಳಿಗೆ ಉತ್ತಮ ಅವಕಾಶಗಳು ಸಿಗಬೇಕು. ವಿದ್ಯಾರ್ಥಿಗಳಿಗೆ ಪ್ರೋತ್ಸಾಹ ನೀಡಿ, ಪುರಸ್ಕರಿಸುತ್ತಾ ಅಕ್ಷರ ದಾಸೋಹವನ್ನು ಹಂಡಿಗನಾಳದಲ್ಲಿ ಶ್ರೀ ಕೆಂಪಣ್ಣಸ್ವಾಮಿ ಶ್ರೀ ವೀರಣ್ಣಸ್ವಾಮಿ ದೇವಾಲಯದ ಒಕ್ಕಲಿನವರು ನಡೆಸುತ್ತಿರುವುದು ಶ್ಲಾಘನೀಯ ಎಂದು ಅವರು ತಿಳಿಸಿದರು.
ಹೊಸಕೋಟೆ ಶಾಸಕ ಶರತ್ ಬಚ್ಚೇಗೌಡ ಮಾತನಾಡಿ, ಒಕ್ಕಲಿಗರು ಹಿಂದಿನಿಂದಲೂ ಭೂತಾಯಿಯನ್ನು ನಂಬಿ ಕೃಷಿ ಮಾಡುತ್ತಾ ಬಂದವರು. ಈಗ ಕಾಲಕ್ಕೆ ತಕ್ಕ ಹಾಗೆ ಬದಲಾಗಬೇಕಿದೆ. ಮಕ್ಕಳ ವಿದ್ಯಾಭ್ಯಾಸಕ್ಕೆ ಪ್ರಾಧಾನ್ಯತೆ ನೀಡಿ. ಇತರೆ ಜನಾಂಗದಲ್ಲಿ ಐ.ಎ.ಎಸ್ ಮತ್ತು ಕೆ.ಎ.ಎಸ್ ಓದಿದವರು ಹೆಚ್ಚಿದ್ದಾರೆ. ನಮ್ಮ ಜನಾಂಗದಲ್ಲಿ ಈ ಕೊರತೆ ತುಂಬುವ ಕೆಲಸ ಆಗಬೇಕಿದೆ. ಎಲ್ಲರೂ ಒಗ್ಗೂಡಿದಾಗ ಪ್ರಗತಿಯತ್ತ ಹೆಜ್ಜೆಯಿಡಲು ಸಾಧ್ಯ ಎಂದು ಹೇಳಿದರು.
ಫೆಡರೇಷನ್ ಆಫ್ ಕರ್ನಾಟಕ ಇಂಜಿನಿಯರ್ಸ್ ಅಸೋಸಿಯೇಷನ್ಸ್ ಅಧ್ಯಕ್ಷ ಎಂ.ನಾಗರಾಜ್ ಮಾತನಾಡಿ, ಮಕ್ಕಳಿಗೆ ಹಣ, ಜ್ಮೀನು ಕೊಡುವುದಕ್ಕಿಂತ ಒಳ್ಳೆ ವಿದ್ಯೆ ಕೊಡಿಸಿ. ನಮ್ಮ ಸರ್ಕಾರದ ಹಣದಲ್ಲಿ ಓದಿ ಪರದೇಶಕ್ಕೆ ಹೋಗಿ ಅಲ್ಲಿನ ಆರ್ಥಿಕ ಅಭಿವೃದ್ಧಿ ಮಾಡಬೇಡಿ. ಎಲ್ಲಿಯೇ ಓದಿದರೂ ದೇಶಕ್ಕೆ ಉಪಯುಕ್ತರಾಗುವಂತೆ ಕೆಲಸ ಮಾಡಿ. ನಮ್ಮ ದೇಶದಲ್ಲಿಯೇ ಹಲವು ಅವಕಾಶಗಳಿವೆ. ಅವಕಾಶ ಸಿಗದಿದ್ದರೆ ಅವಕಾಶವನ್ನು ಸೃಷ್ಟಿಸಿ. ಗ್ರಾಮಾಂತರದ ಒಕ್ಕಲಿಗರೂ ಸೇರಿದಂತೆ ಇತರೆ ಹಿಂದುಳಿದವವರ ಮಕ್ಕಳನ್ನೂ ವಿದ್ಯಾವಂತರನ್ನಾಗಿಸುವ “ಮನೆಗೊಂದು ಬೆಳಕು” ಕಾರ್ಯಕ್ರಮವನ್ನು ಹಮ್ಮಿಕೊಳ್ಳಿ. ವಿದ್ಯೆಗೆ ಪೂರಕ ಪರಿಸರವನ್ನು ನಿರ್ಮಿಸಿ ಎಂದು ಹೇಳಿದರು.
ಶ್ರೀ ಕೆಂಪಣ್ಣಸ್ವಾಮಿ ಶ್ರೀ ವೀರಣ್ಣಸ್ವಾಮಿ ದೇವಾಲಯ ಟ್ರಸ್ಟ್ ಅಧ್ಯಕ್ಷ ಎನ್.ನಾಗರಾಜ್ ಮಾತನಾಡಿ, ಸಮಾಜದಲ್ಲಿ ಒಳ್ಳೆಯ ಕೆಲಸ ಮಾಡಲು ಸಮಾಧಾನ ಮತ್ತು ಸತತ ಪ್ರಯತ್ನ ಅಗತ್ಯ. ಮುಂದಿನ ಪೀಳಿಗೆಯವರು ಇತಿಹಾಸ ಮತ್ತು ಪೂರ್ವಜರ ಕಷ್ಟ ಸುಖ ತಿಳಿಯಬೇಕು. ಆಗಷ್ಟೇ ಭವಿಷ್ಯ ಉಜ್ವಲವಾಗುತ್ತದೆ. ಒಕ್ಕಲಿಗ ಜನಾಂಗದ ಅದರಲ್ಲೂ ಈ ಭಾಗದ ಒಕ್ಕಲಿಗರ ಇತಿಹಾಸದ ಬಗ್ಗೆ ಸಾಹಿತ್ಯ ರಚನೆಯಾಗಬೇಕು. ನಮ್ಮ ಹಿರಿಯರ ಶಕ್ತಿ, ಸಾಮರ್ಥ್ಯ ಮತ್ತು ಜ್ಞಾನದ ಬಗ್ಗೆ ಮಕ್ಕಳಿಗೆ ತಿಳಿಸಬೇಕು ಎಂದರು.
2020-21 ನೇ ಸಾಲಿನ ಎಸ್ಸೆಸ್ಸೆಲ್ಸಿಯಲ್ಲಿ ಉತ್ತಮ ಅಂಕಗಳನ್ನು ಗಳಿಸಿರುವ 34 ವಿದ್ಯಾರ್ಥಿಗಳು ಮತ್ತು ಪೋಷಕರು, ಪಿಯುಸಿಯಲ್ಲಿ ಉತ್ತಮ ಅಂಕಗಳನ್ನು ಗಳಿಸಿರುವ 27 ವಿದ್ಯಾರ್ಥಿಗಳು ಮತ್ತು ಪೋಷಕರನ್ನು ಸನ್ಮಾನಿಸಲಾಯಿತು.
ಶ್ರೀ ಕೆಂಪಣ್ಣಸ್ವಾಮಿ ಶ್ರೀ ವೀರಣ್ಣಸ್ವಾಮಿ ದೇವಾಲಯ ಟ್ರಸ್ಟ್ ಉಪಾಧ್ಯಕ್ಷ ಆರ್.ರವಿ, ಖಜಾಂಚಿ ಮುನಿಸ್ವಾಮಿಗೌಡ, ಕಾರ್ಯದರ್ಶಿ ಅಶ್ವತ್ತಯ್ಯ, ಮಹದೇವಕೊಡಿಗೇಹಳ್ಳಿ ರಾಜಣ್ಣ, ಹಂಡಿಗನಾಳ ಲಕ್ಷ್ಮಣ್, ರಾಮದಾಸ್, ಮುನಿಕೃಷ್ಣಪ್ಪ, ಬಿ.ಎಂ.ಜಯರಾಮ್, ಗೋವಿಂದರಾಜ್, ರವಿಕುಮಾರ್, ಮಧುಸೂದನ್, ಬಿ.ಲಕ್ಷ್ಮಿನಾರಾಯಣ್, ಇಟ್ಟಸಂದ್ರ ಎಂ.ಮುನಿರಾಜು, ತಿರುಮೇನಹಳ್ಳಿ ಎಂ.ನಂಜಪ್ಪ, ಮುನಿವೆಂಕಟಪ್ಪ, ಕೆಂಪಣ್ಣ, ಲಕ್ಷ್ಮೀ ವಿದ್ಯಾಸಂಸ್ಥೆಯ ದೇವರಾಜ್ ಹಾಜರಿದ್ದರು.