Handiganala, Sidlaghatta : ಶಿಡ್ಲಘಟ್ಟ ತಾಲ್ಲೂಕಿನ ಹಂಡಿಗನಾಳ ಗ್ರಾಮ ಪಂಚಾಯಿತಿ ವತಿಯಿಂದ ಸೋಮವಾರ ಪ್ಲಾಸ್ಟಿಕ್ ಮುಕ್ತ ಪಂಚಾಯಿತಿಯನ್ನಾಗಿಸಲು ಕಾರ್ಯಾಚರಣೆ ನಡೆಸಲಾಯಿತು.
ಹಂಡಿಗನಾಳ, ಹಂಡಿಗನಾಳ ಸರ್ಕಲ್, ಕೇಶವಪುರ, ಲಕ್ಕಹಳ್ಳಿ ಗೇಟ್ ಬಳಿ ಇರುವ ಅಂಗಡಿಗಳಲ್ಲಿ ಪ್ಲಾಸ್ಟಿಕ್ ಕವರ್ ಗಳನ್ನು ವಶಪಡಿಸಿಕೊಂಡು, ಅಂಗಡಿ ಮಾಲೀಕರಿಗೆ ಎಚ್ಚರಿಕೆಯನ್ನು ಕೊಟ್ಟು ಮುಂದಿನ ದಿನಗಳಲ್ಲಿ ಗ್ರಾಮ ಪಂಚಾಯಿತಿಯ ಎಲ್ಲಾ ಗ್ರಾಮಗಳ ಅಂಗಡಿಗಳಲ್ಲಿ ಪ್ಲಾಸ್ಟಿಕ್ ಬಳಸದಂತೆ ತಿಳಿಸಲಾಯಿತು.
ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಕೆ.ಎಸ್. ಮಧು ಅವರು ಈ ಸಂದರ್ಭದಲ್ಲಿ ಮಾತನಾಡಿ, ಹಂಡಿಗನಾಳ ಗ್ರಾಮ ಪಂಚಾಯಿತಿಯ ಎಲ್ಲಾ ಗ್ರಾಮಗಳ ಅಂಗಡಿಗಳಿಗೆ ಭೇಟಿ ನೀಡಿ ಪರಿಶೀಲಿಸಿ, ಪ್ಲಾಸ್ಟಿಕ್ ಕವರ್ ಗಳು ಕಂಡುಬಂದಲ್ಲಿ ದಂಡವನ್ನು ವಿಧಿಸಿ ಪ್ರಕರಣವನ್ನು ದಾಖಲಿಸಲಾಗುವುದು. ಈ ಬಗ್ಗೆ ಅಂಗಡಿ ಮಾಲೀಕರಿಗೆ ಹಾಗೂ ಸಾರ್ವಜನಿಕರಿಗೆ ಅರಿವು ಸಹ ಮೂಡಿಸಲಾಗುತ್ತಿದೆ ಎಂದು ಹೇಳಿದರು.
ಪಂಚಾಯಿತಿ ಕಾರ್ಯದರ್ಶಿ ಎಚ್.ಎನ್.ಶ್ರೀನಿವಾಸ ಮಾತನಾಡಿ, ಪ್ಲಾಸ್ಟಿಕ್ ನಿಂದ ಆಗುವ ಅನಾಹುತಗಳ ಬಗ್ಗೆ ಜನರಿಗೆ ಮಾಹಿತಿ ನೀಡುತ್ತಿದ್ದೇವೆ. ಪ್ಲಾಸ್ಟಿಕ್ ಕವರ್ ಗಳು ದನಕರುಗಳ ಹೊಟ್ಟೆಗೆ ಸೇರಿದರೆ ಅವುಗಳ ಜೀವಕ್ಕೆ ಅಪಾಯ ಹಾಗೂ ಪರಿಸರ ಮಾಲಿನ್ಯ ಸಹ ಉಂಟಾಗುತ್ತದೆ. ಆದುದರಿಂದ ಪ್ಲಾಸ್ಟಿಕ್ ನ್ನು ಯಾರೂ ಉಪಯೋಗಿಸಬಾರದೆಂದು ಹೇಳುತ್ತಿದ್ದೇವೆ ಎಂದರು.
ಈ ಸಂದರ್ಭದಲ್ಲಿ ಮಾಜಿ ಪಂಚಾಯಿತಿ ಸದಸ್ಯ ಎ.ಎಂ ತ್ಯಾಗರಾಜ್, ಜಲಗಾರರಾದ ವೆಂಕಟೇಶ್, ದೇವರಾಜು, ಗ್ರಂಥಪಾಲಕ ಮುನಿರಾಜು, ಎಚ್.ಎನ್.ಮೋಹನ್, ನರಸಿಂಹಪ್ಪ, ಮುನಿಯಪ್ಪ ಹಾಜರಿದ್ದರು.