Sidlaghatta: ರಾಷ್ಟ್ರೀಯ ಹಬ್ಬಗಳ ಆಚರಣಾ ಸಮಿತಿ ವತಿಯಿಂದ ನಗರದ ನೆಹರು ಕ್ರೀಡಾಂಗಣದಲ್ಲಿ ಸೋಮವಾರ 76 ನೇ ಸ್ವಾತಂತ್ರ್ಯ ದಿನಾಚರಣೆ (Independence Day) ಸಮಾರಂಭದಲ್ಲಿ ಭಾಗಿಯಾಗಿ ಶಾಸಕ ವಿ.ಮುನಿಯಪ್ಪ (V Muniyappa) ಅವರು ಮಾತನಾಡಿದರು.
ಸ್ವಾತಂತ್ರ್ಯಕ್ಕಾಗಿ ಬಲಿದಾನವನ್ನು ನೀಡಿದ ಹೋರಾಟಗಾರರನ್ನು ನೆನೆದು ಅವರ ಆಶಯವನ್ನು ಈಡೇರಿಸುವ ನಿಟ್ಟಿನಲ್ಲಿ ದೇಶವನ್ನು ಕಟ್ಟುವ ಕಾರ್ಯದಲ್ಲಿ ಎಲ್ಲರೂ ಭಾಗಿಯಾಗಬೇಕು. ಎಲ್ಲರೂ ಸಮಾಜದ ಅಭಿವೃದ್ಧಿಗೆ ಕೈಜೋಡಿಸಬೇಕು. ಕಷ್ಟದಲ್ಲಿರುವವರಿಗೆ ನೆರವಾಗಬೇಕು. ಇದುವೇ ಸ್ವಾತಂತ್ರ್ಯ ದಿನಾಚರಣೆಯ ನಿಜವಾದ ಅರ್ಥ ಎಂದು ತಿಳಿಸಿದರು.
ಧ್ವಜಾರೋಹಣವನ್ನು ಶಾಸಕ ವಿ.ಮುನಿಯಪ್ಪ ಮತ್ತು ತಹಶೀಲ್ದಾರ್ ಬಿ.ಎಸ್.ರಾಜೀವ್ ನೆರವೇರಿಸಿದರು. ಎಸ್ಸೆಸ್ಸೆಲ್ಸಿ ಮತ್ತು ಪಿಯುಸಿ ಪರೀಕ್ಷೆಯಲ್ಲಿ ಹೆಚ್ಚು ಅಂಕಪಡೆದ ವಿದ್ಯಾರ್ಥಿಗಳನ್ನು ಗೌರವಿಸಲಾಯಿತು. ರಾಜ್ಯಪಾಲರಿಂದ ಪುರಸ್ಕೃತರಾದ ಸ್ಕೌಟ್ಸ್ ಮತ್ತು ಗೈಡ್ಸ್ ವಿದ್ಯಾರ್ಥಿಗಳನ್ನು ಸನ್ಮಾನಿಸಲಾಯಿತು. ಯೋಧರು ಹಾಗೂ ಹೆಚ್ಚು ಬಾರಿ ರಕ್ತದಾನ ಮಾಡಿರುವ ಆರೋಗ್ಯ ಇಲಾಖೆಯ ಟಿ.ಟಿ.ನರಸಿಂಹಪ್ಪ ಮತ್ತು ಕಂದಾಯ ಇಲಾಖೆಯ ಮಂಜುನಾಥ್ ಅವರನ್ನು ಗೌರವಿಸಲಾಯಿತು. 2020-21 ನೇ ಸಾಲಿನಲ್ಲಿ ಹೆಚ್ಚು ಅಂಕ ಗಳಿಸಿದ ಮೂವರು ಎಸ್ಸೆಸ್ಸೆಲ್ಸಿ ವಿದ್ಯಾರ್ಥಿಗಳಿಗೆ ಲ್ಯಾಪ್ ಟಾಪ್ ನೀಡಲಾಯಿತು. ನಾಲ್ವರು ಪೌರಕಾರ್ಮಿಕರು ಮತ್ತು ನಿವೃತ್ತ ಶಿಕ್ಷಕರಾದ ಕೆಂಪಣ್ಣ ಹಾಗೂ ರಂಗನಾಥ್ ಅವರನ್ನು ಸನ್ಮಾನಿಸಲಾಯಿತು.
ಜಂಗಮಕೋಟೆ ಜ್ಞಾನ ಜ್ಯೋತಿ, ಹನುಮಂತಪುರ ಯೂನಿವರ್ಸಲ್, ಬಶೆಟ್ಟಹಳ್ಳಿ ಸಾಯಿರಾಮ್, ದಿ ಕ್ರೆಸೆಂಟ್ ಹಾಗೂ ಡಾಲ್ಫಿನ್ ವಿದ್ಯಾಸಂಸ್ಥೆಯ ವಿದ್ಯಾರ್ಥಿಗಳು ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ನಡೆಸಿಕೊಟ್ಟರು.
ತಹಶೀಲ್ದಾರ್ ಬಿ.ಎಸ್.ರಾಜೀವ್, ನಗರ ಯೋಜನಾ ಪ್ರಾಧಿಕಾರದ ಅಧ್ಯಕ್ಷ ಬಿ.ಸಿ.ನಂದೀಶ್, ನಗರಸಭೆ ಅಧ್ಯಕ್ಷೆ ಸಿ.ಎಂ.ಸುಮಿತ್ರಾ ರಮೇಶ್, ತಾಲ್ಲೂಕು ಪಂಚಾಯಿತಿ ಇಒ ಮುನಿರಾಜು, ನಗರಸಭೆ ಪೌರಾಯುಕ್ತ ಶ್ರೀಕಾಂತ್, ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಸುಬ್ಬಾರೆಡ್ಡಿ ಹಾಜರಿದ್ದರು.