Sidlaghatta : ಶಿಡ್ಲಘಟ್ಟ ತಾಲ್ಲೂಕಿನ ಜಂಗಮಕೋಟೆ ಗ್ರಾಮ ಪಂಚಾಯಿತಿ (Jangamakote Grama Panchayat) ಕೇಂದ್ರಸ್ಥಾನದಲ್ಲಿ ನಿರ್ಮಾಣವಾಗುತ್ತಿರುವ ಗ್ರಾಮ ಪಂಚಾಯಿತಿಯ ನೂತನ ಕಟ್ಟಡ ಕಾಮಗಾರಿಯನ್ನು ಪಿಡಿಒ, ಗುತ್ತಿಗೆದಾರರೊಂದಿಗೆ ವೀಕ್ಷಿಸಿ ಜಂಗಮಕೋಟೆ ಗ್ರಾಮಪಂಚಾಯಿತಿ ಅಧ್ಯಕ್ಷ ಜೆ.ಆರ್.ಶ್ರೀನಿವಾಸ್ ಮಾತನಾಡಿದರು.
ಗ್ರಾಮ ಪಂಚಾಯಿತಿಯ ನೂತನ ಕಟ್ಟಡ ನಿರ್ಮಾಣವಾದರೆ ಪಂಚಾಯಿತಿ ವ್ಯಾಪ್ತಿಯ ನಾಗರಿಕರಿಗೆ ಇನ್ನೂ ಹೆಚ್ಚಿನ ಸವಲತ್ತು, ಅನುಕೂಲ ಮಾಡಿಕೊಡಲು ಸಹಕಾರಿಯಾಗಲಿದೆ ಎಂದು ಅವರು ತಿಳಿಸಿದರು.
ಇಡೀ ಚಿಕ್ಕಬಳ್ಳಾಪುರ ಜಿಲ್ಲೆಯಲ್ಲಿಯೆ ಜಂಗಮಕೋಟೆ ಅತಿದೊಡ್ಡ ಹೋಬಳಿಯಾಗಿದ್ದು ಹೋಬಳಿ ಕೇಂದ್ರ ಸ್ಥಾನದಲ್ಲಿನ ಪಂಚಾಯಿತಿಯಲ್ಲಿ ಸ್ವಂತ ಕಟ್ಟಡ ಇಲ್ಲದಿರುವುದು ಬೇಸರದ ವಿಷಯ. ಬಾಡಿಗೆ ಕಟ್ಟಡದಲ್ಲಿ ಪಂಚಾಯಿತಿ ಕಾರ‍್ಯನಿರ್ವಹಿಸುತ್ತಿದೆ.
ಇದರಿಂದ ನಿರೀಕ್ಷಿತ ಮಟ್ಟದಲ್ಲಿ ನಾವು ಸಾರ್ವಜನಿಕರಿಗೆ ಸೌಕರ್ಯಗಳನ್ನು ಒದಗಿಸಲು ಸಾಧ್ಯವಾಗುತ್ತಿಲ್ಲ ಎನ್ನುವ ಕೊರಗು ಕಾಡುತ್ತಿದ್ದು ಇದೀಗ ಪಂಚಾಯಿತಿಯ ಸ್ವಂತ ಕಟ್ಟಡ ನಿರ್ಮಾಣವಾಗುವ ಹಂತದಲ್ಲಿದೆ ಎಂದು ಹೇಳಿದರು.
ನರೇಗಾ ಹಾಗೂ ಇತರೆ ಯೋಜನೆಯ ಹಣ ಬಳಸಿಕೊಂಡು ಪಂಚಾಯಿತಿ ಕಟ್ಟಡದ ಕಾಮಗಾರಿಯನ್ನು ವೀಕ್ಷಿಸಿದ ಅವರು, ಕಾಮಗಾರಿಯಲ್ಲಿ ಗುಣಮಟ್ಟವನ್ನು ಕಾಪಾಡಿಕೊಳ್ಳಲು ಹಾಗೂ ನಿಗದಿತ ಅವಧಿಯಲ್ಲಿ ಕಾಮಗಾರಿ ಮುಗಿಸಲು ಮನವಿ ಮಾಡಿದರು.
ನರೇಗಾ ಯೋಜನೆಯಲ್ಲಿ ನಿರ್ಮಿಸಿ ಅಭಿವೃದ್ಧಿಪಡಿಸುತ್ತಿರುವ ಕಾಲುವೆ, ಕಲ್ಯಾಣಿ, ಅಂಗನವಾಡಿ ಕಟ್ಟಡ, ನೌಕರರ ಕಟ್ಟಡ, ತಳಮಟ್ಟದ ನೀರಿನ ಸಂಪನ್ನು ವೀಕ್ಷಿಸಿದರು.
ಪಿಡಿಒ ಶಿವಣ್ಣ, ಸದಸ್ಯರಾದ ಪ್ರಕಾಶ್, ನಾರಾಯಣಸ್ವಾಮಿ, ಚಂದ್ರಮೋಹನ್, ಸಲೀಂ, ಶಬ್ಬೀರ್, ನಹೀಂ, ನಾಗರಾಜ್, ಗೋಪಾಲ್, ಶ್ರೀನಾಥ್, ಶ್ರೀಧರ್ ಹಾಜರಿದ್ದರು.