Sidlaghatta : ಶಿಡ್ಲಘಟ್ಟ ತಾಲ್ಲೂಕಿನಲ್ಲಿ ಕುರುಬ ಸಮುದಾಯಕ್ಕೆ ಸಮುದಾಯ ಭವನ ಮತ್ತು ಶಿಕ್ಷಣ ಸಂಸ್ಥೆ, ವಸತಿನಿಲಯ ಆರಂಭಿಸಲು ನಗರಕ್ಕೆ ಹತ್ತಿರವಿರುವ ಸೂಕ್ತವಾದ ಜಾಗವನ್ನು ಗುರುತಿಸುವಂತೆ ತಹಶಿಲ್ದಾರರಿಗೆ ತಿಳಿಸಿದ್ದು, ಈ ಬಗ್ಗೆ ಪ್ರಾಮಾಣಿಕ ಪ್ರಯತ್ನ ಮಾಡುವುದಾಗಿ ಶಾಸಕ ಬಿ.ಎನ್.ರವಿಕುಮಾರ್ ತಿಳಿಸಿದರು.
ನಗರದ ತಾಲ್ಲೂಕು ಕಚೇರಿ ಮುಂಭಾಗದಲ್ಲಿ ಗುರುವಾರ ರಾಷ್ಟ್ರೀಯ ಹಬ್ಬಗಳ ಆಚರಣಾ ಸಮಿತಿ ವತಿಯಿಂದ ಆಚರಿಸಲಾದ ದಾಸಶ್ರೇಷ್ಠ ಶ್ರೀಕನಕದಾಸರ ಜಯಂತ್ಯುತ್ಸವ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ದಾಸಶ್ರೇಷ್ಠ ಶ್ರೀಕನಕದಾಸರಂತಹ ಮಹಾನ್ ಆದರ್ಶ ವ್ಯಕ್ತಿಗಳನ್ನು ನೆನೆಯುವ ಮತ್ತು ಅವರ ಜೀವನವನ್ನು ಅರಿಯುವ ಮೂಲಕ ಅವರ ಬದುಕಿನ ಸಂದೇಶವನ್ನು ಅಳವಡಿಸಿಕೊಳ್ಳೋಣ ಎಂದು ಹೇಳಿದರು.
ಕನಕದಾಸರು ಬರಿ ಕುರುಬ ಜಾತಿಗೆ ಸೀಮಿತವಾದ ಮಹಾನ್ ವ್ಯಕ್ತಿಯಲ್ಲ. ಎಲ್ಲಾ ಜಾತಿಗಳಿಗೆ ಬೇಕಾದವರು. 15 -16 ನೆಯ ಶತಮಾನದಲ್ಲೇ ಜಾತಿ ವ್ಯವಸ್ಥೆಯ ಬಗ್ಗೆ ಸಮರ ಸಾರಿದ ಭಕ್ತ ಎಂದರೆ ಕನಕದಾಸರು ಎಂದರು.
ಕುರುಬ ಸಮುದಾಯದ ಎಸ್ಸೆಸ್ಸೆಲ್ಸಿ, ದ್ವಿತೀಯ ಪಿಯುಸಿ ಹಾಗೂ ಪದವಿ ತರಗತಿಗಳಲ್ಲಿನ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಪುರಸ್ಕಾರ ಹಾಗೂ ಮಳ್ಳೂರು ವೈದ್ಯರು ಹಾಗೂ ಪುವ್ವಾಡ ಟ್ರಸ್ಟ್ ನ ಡಾ.ಪುವ್ವಾಡ ಸಂದೀಪ್ ಮತ್ತು ಹಿರಿಯರಿಗೆ ಸನ್ಮಾನ ಮಾಡಲಾಯಿತು. ಜಯಪ್ರಕಾಶ್ ನಾರಾಯಣ್ ಹಾಗೂ ಎಚ್.ಡಿ.ದೇವೇಗೌಡ ಸೇವಾಭಿವೃದ್ಧಿ ಟ್ರಸ್ಟ್ ವತಿಯಿಂದ ವಿದ್ಯಾರ್ಥಿಗಳಿಗೆ ತಲಾ ಐದು ಸಾವಿರ ರೂ ಪ್ರೋತ್ಸಾಹ ಧನ ನೀಡಲಾಯಿತು. ಕನಕದಾಸರ ಜೀವನ ಕುರಿತು ಉಪನ್ಯಾಸ ನಡೆಯಿತು.
ವಿವಿಧ ಗ್ರಾಮಗಳಿಂದ ಆಗಮಿಸಿದ್ದ ಪಲ್ಲಕ್ಕಿಗಳು ಹಾಗೂ ಡೊಳ್ಳು ಕುಣಿತ, ಗಾರುಡಿಗೊಂಬೆ, ಕೀಲುಕುದುರೆ ಮುಂತಾದ ಕಲಾ ತಂಡಗಳು ನಗರದಾದ್ಯಂತ ಮೆರವಣಿಗೆಯಲ್ಲಿ ಸಾಗಿದವು.
ತಹಶೀಲ್ದಾರ್ ಬಿ.ಎನ್.ಸ್ವಾಮಿ, ತಾಲ್ಲೂಕು ಪಂಚಾಯಿತಿ ಇಒ ಜಿ.ಮುನಿರಾಜ, ಡಿ.ಸಿ.ಸಿ ಬ್ಯಾಂಕ್ ಉಪಾಧ್ಯಕ್ಷ ಎ.ನಾಗರಾಜ್, ಕುರುಬರ ಸಂಘದ ಅಧ್ಯಕ್ಷ ಕೆ.ಮಂಜುನಾಥ್, ಕಾರ್ಯದರ್ಶಿ ಎಂ.ರಾಮಾಂಜಿ, ಗೌರವಾಧ್ಯಕ್ಷ ಎಂ.ಗಣೇಶಪ್ಪ, ರೈತಸಂಘದ ರಾಜ್ಯ ಪ್ರಧಾನ ಕಾರ್ಯದರ್ಶಿ ಭಕ್ತರಹಳ್ಳಿ ಬೈರೇಗೌಡ, ಜಿಲ್ಲಾ ಜಾಗೃತಿ ಮತ್ತು ಉಸ್ತುವಾರಿ ಸಮಿತಿ ಸದಸ್ಯ ಮೇಲೂರು ಮಂಜುನಾಥ, ತಾಲ್ಲೂಕು ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಕೆ.ಎನ್.ಸುಬ್ಬಾರೆಡ್ಡಿ, ರಾಮಚಂದ್ರಪ್ಪ, ನಗರಸಭೆ ಆಯುಕ್ತ ಮಂಜುನಾಥ, ಸರ್ಕಲ್ ಇನ್ಸ್ ಪೆಕ್ಟರ್ ಶ್ರೀನಿವಾಸ್ ಹಾಜರಿದ್ದರು.