Sidlaghatta : ಹನ್ನೆರಡನೇ ಶತಮಾನದಲ್ಲೇ ಪ್ರಜಾಪ್ರಭುತ್ವ ವ್ಯವಸ್ಥೆ ಮಾದರಿಯ ಆಡಳಿತವನ್ನು ಜಾರಿ ಮಾಡಲು ಶರಣರು ಪ್ರಯತ್ನಿಸಿದ್ದು ಆ ನಿಟ್ಟಿನಲ್ಲಿ ಅವರು ಬದುಕಿನ ಉದ್ದಕ್ಕೂ ಶ್ರಮಿಸಿದ ಮಹನೀಯರು ಎಂದು ಶಿರಸ್ತೇದಾರ್ ಆಸೀಯಾ ಬಿ ತಿಳಿಸಿದರು.
ತಾಲ್ಲೂಕು ರಾಷ್ಟ್ರೀಯ ಹಾಗೂ ನಾಡಹಬ್ಬಗಳ ಆಚರಣಾ ಸಮಿತಿಯಿಂದ ತಾಲ್ಲೂಕು ಕಚೇರಿ ಸಭಾಂಗಣದಲ್ಲಿ ಸೋಮವಾರ ಹಮ್ಮಿಕೊಂಡಿದ್ದ “ಕಾಯಕ ಶರಣರ ಜಯಂತಿ” ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಈ ನಮ್ಮ ನಾಡಿನಲ್ಲಿ ಜನಿಸಿದ ಕಾಯಕ ಶರಣರಂತ ಅನೇಕ ಮಹನೀಯರು ಸಾಮಾಜಿಕ ಚಳುವಳಿ ಮೂಲಕ ಮೂಢ ನಂಬಿಕೆಗಳನ್ನು ಮೈಗೂಡಿಸಿಕೊಂಡು ಬದುಕಿನ ಕಷ್ಟಕ್ಕೆ ಬಿದ್ದಿದ್ದವರನ್ನು ಸಮಾಜದ ಮುಖ್ಯವಾಹಿನಿಯಲ್ಲಿ ಕರೆ ತರುವ ಪ್ರಯತ್ನ ನಡೆಸಿದ್ದರು ಎಂದರು.
ಉತ್ತಮ ಶಿಕ್ಷಣವನ್ನು ಪಡೆದರೆ ಮಾತ್ರವೇ ಈ ಎಲ್ಲ ಕಷ್ಟಗಳಿಗೂ ಕೊನೆ ಎಂಬುದು ಸಿಗುತ್ತದೆ ಎಂದು ನಂಬಿದ್ದ ಅವರು ಆಗಿನ ಕಾಲಕ್ಕೆ ಎಲ್ಲರಿಗೂ ಶಿಕ್ಷಣ ಸಿಗಬೇಕೆಂದು ಜಾಗೃತಿ ಮೂಡಿಸುವ ಮೂಲಕ ಉತ್ತಮ ಬದುಕನ್ನು ಕಟ್ಟಿಕೊಳ್ಳಲು ಬುನಾದಿ ಹಾಕಿದ ಶ್ರೇಷ್ಠರೆನಿಸಿಕೊಂಡರು ಎಂದು ಶರಣರ ಕಾಯಕವನ್ನು ಶ್ಲಾಘಿಸಿದರು.
ಹಾಗಾಗಿ ನಾವೆಲ್ಲರೂ ಶಿಕ್ಷಿತರಾಗಬೇಕು ಮತ್ತು ನಮ್ಮ ಮಕ್ಕಳಿಗೂ ಉತ್ತಮ ಶಿಕ್ಷಣ ಕೊಡಿಸಿ ಉತ್ತಮ ಸಮಾಜ ನಿರ್ಮಾಣಕ್ಕೆ ಭದ್ರ ಬುನಾದಿಯನ್ನು ಹಾಕುವ ಕೆಲಸ ಆಗಬೇಕಿದೆ. ಶಿಕ್ಷಣವೊಂದೆ ಎಲ್ಲ ಸಮಸ್ಯೆಗಳಿಗೂ ಪರಿಹಾರ ನೀಡಬಲ್ಲದು ಎಂದು ತಿಳಿಸಿದರು.
ಕಾಯಕ ಶರಣರಾದ ಮಾದಾರ ಚನ್ನಯ್ಯ, ಮಾದಾರಾ ಧೂಳಯ್ಯ, ದೋಹಾರ ಕಕ್ಕಯ್ಯ, ಸಮಗಾರ ಹರಳಯ್ಯ, ಉರಿಲಿಂಗಪೆದ್ದಿ ಅವರ ಭಾವಚಿತ್ರಗಳಿಗೆ ಪೂಜೆ ಸಲ್ಲಿಸಿ ಕೈ ಮುಗಿದು ನಮಿಸಿ ಪುಷ್ಪ ನಮನ ಸಲ್ಲಿಸಿ ಸಿಹಿ ಹಂಚಲಾಯಿತು. ಕೈವಾರ ತಾತಯ್ಯ ಸೇವಾ ಟ್ರಸ್ಟ್ ನ ವೇಣು, ಶಿಶು ಅಭಿವೃದ್ದಿ ಇಲಾಖೆಯ ಶಿವಪ್ಪ, ತಾಲ್ಲೂಕು ಕಚೇರಿ ಸಿಬ್ಬಂದಿ ಹಾಜರಿದ್ದರು.