Home Sidlaghatta ಕೇಂದ್ರ ನೀಡಿರುವ ಬರ ಪರಿಹಾರದ ಜತೆಗೆ ರಾಜ್ಯ ಸರ್ಕಾರವೂ ಪರಿಹಾರ ನೀಡಬೇಕು : ಕೋಡಿಹಳ್ಳಿ ಚಂದ್ರಶೇಖರ್

ಕೇಂದ್ರ ನೀಡಿರುವ ಬರ ಪರಿಹಾರದ ಜತೆಗೆ ರಾಜ್ಯ ಸರ್ಕಾರವೂ ಪರಿಹಾರ ನೀಡಬೇಕು : ಕೋಡಿಹಳ್ಳಿ ಚಂದ್ರಶೇಖರ್

0

Bhaktarahalli, Sidlaghatta : ಬರಗಾಲದಲ್ಲಿ ರೈತರ ಬೆಂಬಲಕ್ಕೆ ನಿಲ್ಲುವಲ್ಲಿ ಕೇಂದ್ರ ಮತ್ತು ರಾಜ್ಯ ಸರ್ಕಾರ ಸಂಪೂರ್ಣ ವಿಫಲವಾಗಿದೆ. ರೈತರ ಬೆನ್ನಿಗೆ ನಿಂತು ಪರಿಹಾರ ನೀಡಿ ಆತ್ಮಸ್ಥೈರ್ಯ ತುಂಬಬೇಕಾದ ರಾಜ್ಯ ಸರ್ಕಾರಕ್ಕೆ ತೆಲಂಗಾಣ ಚುನಾವಣೆಯೆ ಮುಖ್ಯವಾಯಿತೆ ವಿನಃ ರೈತರ ಹಿತವಲ್ಲ ಎಂದು ರೈತ ಸಂಘದ ರಾಜ್ಯಾಧ್ಯಕ್ಷ ಕೋಡಿಹಳ್ಳಿ ಚಂದ್ರಶೇಖರ್ ದೂರಿದರು.

ತಾಲ್ಲೂಕಿನ ಭಕ್ತರಹಳ್ಳಿಯಲ್ಲಿ ಭಾನುವಾರ ನಡೆದ ಬಂಡಿ ದ್ಯಾವರ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಅವರು ಸ್ಥಳೀಯ ರೈತರ ಜತೆ ಮಾತನಾಡಿ ಸಧ್ಯದ ರೈತರ ಸ್ಥಿತಿಗತಿ, ಮುಂಗಾರು ಕೃಷಿ ಚಟುವಟಿಕೆಗಳ ಬಗ್ಗೆ ಚರ್ಚಿಸಿದ ನಂತರ ಮಾಧ್ಯಮದವರೊಂದಿಗೆ ಮಾತನಾಡಿದರು.
ಬರಗಾಲದ ಪರಿಹಾರವನ್ನು ಕೊಡುವಂತೆ ಕೇಂದ್ರ ಸರ್ಕಾರಕ್ಕೆ ದುಂಬಾಲು ಬಿದ್ದ ರಾಜ್ಯ ಸರ್ಕಾರಕ್ಕೆ ಕೇಂದ್ರ ನೀಡಿರುವ ಬರ ಪರಿಹಾರದ ಹಣದ ಜತೆಗೆ ತಾವೂ ಕೂಡ ಬರ ಪರಿಹಾರದ ಪಾಲು ಕೊಡಬೇಕೆಂಬ ಪ್ರಜ್ಞೆ ಇಲ್ಲವೇ ಎಂದು ಪ್ರಶ್ನಿಸಿದರು.

ಬರ ಪರಿಹಾರಕ್ಕೆ ಅವರ ಮೇಲೆ ಇವರು ಇವರ ಮೇಲೆ ಅವರು ಆರೋಪ ಪ್ರತ್ಯಾರೋಪ ಮಾಡುತ್ತಾ ಮೂರ್ನಾಲ್ಕು ತಿಂಗಳು ಕಾಲ ಕಳೆದ ರಾಜ್ಯ ಸರ್ಕಾರವು ಕೊನೆಗೂ ಕೇಂದ್ರ ಸರ್ಕಾರ ಕೊಟ್ಟಂತಹ 3,400 ಕೋಟಿ ರೂ.ಗಳನ್ನು ನೀಡಿ ಕೈ ತೊಳೆದುಕೊಳ್ಳುತ್ತಿದೆ. ರಾಜ್ಯ ಸರ್ಕಾರವೂ ತನ್ನ ಪಾಲಿನ ಹಣವನ್ನು ರೈತರಿಗೆ ನೀಡಬೇಕೆಂದು ಆಗ್ರಹಿಸಿದರು.

ಕೇಂದ್ರ ಸರ್ಕಾರವು ಇಂದಲ್ಲ ಕಳೆದ ಹಲವು ವರ್ಷಗಳಿಂದಲೂ ರಾಜ್ಯದ ಬಗ್ಗೆ ತಾತ್ಸಾರ ಮನೋಭಾವ ತೋರುತ್ತಲೆ ಬಂದಿದೆ. ಕೇಂದ್ರವನ್ನು ಗಟ್ಟಿಯಾಗಿ ಕೇಳುವ ಕೆಲಸ ಹಿಂದಿನಿಂದಲೂ ನಡೆಯಲಿಲ್ಲ. ಇದೀಗ ಕೇಳಿ ಒಂದಷ್ಟು ಪಡೆದುಕೊಳ್ಳಲಾಗಿದೆ ಎಂದರು.

ಆದರೆ ಅದು ಸಾಲದು, ರಾಜ್ಯವೂ ತನ್ನ ಪಾಲಿನ ಹಣ ಸೇರಿಸಿ ರೈತರಿಗೆ ಕೊಡಬೇಕು, ಜತೆಗೆ ಬರ ಪರಿಹಾರ ವಿತರಿಸಲು ಕೂಡ ಒಂದು ನಿಯಮ ಇದೆ. ಕೇಂದ್ರ ಕೊಟ್ಟಷ್ಟು ಹಣವನ್ನು ಕೊಟ್ಟು ಕೈ ತೊಳೆದುಕೊಳ್ಳುವುದಲ್ಲ. ಬರದಿಂದ ಬೆಳೆ ನಷ್ಟ ಆಗಿದ್ದಾಗ ನಿಯಮದಂತೆ ಪರಿಹಾರ ಕೊಡುವ ಕೆಲಸವೂ ಆಗಲೇಬೇಕೆಂದು ತಾಕೀತು ಮಾಡಿದರು.

ಮೂರು ಹಂತದ ಶುದ್ಧೀಕರಣ :

ಎಚ್.ಎನ್.ವ್ಯಾಲಿ ಹಾಗೂ ಕೆ.ವಿ.ವ್ಯಾಲಿಯ ನೀರನ್ನು ಮೂರು ಹಂತಗಳಲ್ಲಿ ಶುದ್ದೀಕರಿಸಿ ಈ ಭಾಗದ ಕೆರೆಗಳಿಗೆ ಹರಿಸಬೇಕೆಂಬುದು ಮೊದಲಿನಿಂತಲೂ ಇರುವಂತ ಬೇಡಿಕೆ ನಮ್ಮದು. ಈಗಲೂ ಅದಕ್ಕೆ ಬದ್ಧವಾಗಿದ್ದು ಈ ಬಗ್ಗೆ ಸರ್ಕಾರಕ್ಕೆ ಹೇಳಿಕೊಂಡು ಬಂದರೂ ಪ್ರಯೋಜನ ಆಗಲಿಲ್ಲ. ಹಾಗಾಗಿ ಇಷ್ಟರಲ್ಲೆ ಹೋರಾಟಕ್ಕೆ ಇಳಿಯಲಿದ್ದೇವೆ ಎಂದರು.

ಎತ್ತಿನ ಹೊಳೆ :

ಎತ್ತಿನ ಹೊಳೆ ಯೋಜನೆಯನ್ನು ಅನುಷ್ಠಾನಗೊಳಿಸಲು ಸರ್ಕಾರ ನಿಧಾನಗತಿ ಅನುಸರಿಸುತ್ತಿದೆ. ತುಮಕೂರು ದೊಡ್ಡಬಳ್ಳಾಪುರ ಮಾರ್ಗದ ಮದ್ಯೆ ರೈತರು ತಮ್ಮ ಜಮೀನಿಗೆ ಪರಿಹಾರದ ಮೊತ್ತ ಹೆಚ್ಚು ಕೇಳಿದ್ದು ಅದನ್ನು ಕೊಡದೆ ಸರ್ಕಾರ ವಿಳಂಬ ಮಾಡುತ್ತಿರುವ ಕಾರಣ ಯೋಜನೆಯೂ ನಿಧಾನವಾಗುತ್ತಿದೆ ಎಂದು ಆರೋಪಿಸಿದರು.

ಆ ಭಾಗದ ಶಾಸಕರೂ ಆದ ಗೃಹ ಮಂತ್ರಿ ಜಿ.ಪರಮೇಶ್ವರ್ ಅವರು, ಆ ಭಾಗದ ರೈತರ ಹಿತವನ್ನಷ್ಟೆ ಬಯಸುತ್ತಿದ್ದು ಅಲ್ಲಿನ ರೈತರಲ್ಲಿ ಗೊಂದಲ ಮೂಡಿಸುವುದನ್ನು ಬಿಡಬೇಕು. ಅಲ್ಲಿನ ರೈತರು ಕೇಳಿದ ಪರಿಹಾರದ ಹಣವನ್ನು ಸರ್ಕಾರ ಕೊಡಬೇಕು. ಕಾಮಗಾರಿಯನ್ನು ಮುಂದುವರೆಸಬೇಕು. ಯೋಜನೆಯಂತೆ ಕೋಲಾರ, ಚಿಕ್ಕಬಳ್ಳಾಪುರ ಜಿಲ್ಲೆಗಳಿಗೆ ತಲಾ ಐದು ಟಿಎಂಸಿಯಷ್ಟು ನೀರನ್ನು ಹರಿಸಬೇಕೆಂದು ಆಗ್ರಹಿಸಿದರು.

ಪೆನ್ ಡ್ರೈವ್ ಪ್ರಕರಣ :

ಹಾಸನದಲ್ಲಿ ಪ್ರಜ್ವಲ್ ರೇವಣ್ಣ ಅವರ ಪೆನ್ ಡ್ರೈವ್ ಪ್ರಕರಣವನ್ನು ರಾಜ್ಯ ಸರ್ಕಾರ ಸೂಕ್ತ ರೀತಿಯಲ್ಲಿ ನಿಭಾಯಿಸುತ್ತಿಲ್ಲ. ಈ ಘಟನೆಯನ್ನು ರಾಜಕೀಯಕ್ಕ ಲಾಭಕ್ಕಾಗಿ ಎಲ್ಲ ಪಕ್ಷಗಳೂ ಬಳಸಿಕೊಳ್ಳುತ್ತಿವೆ ಎಂದು ರೈತ ಸಂಘದ ರಾಜ್ಯಾಧ್ಯಕ್ಷ ಕೋಡಿಹಳ್ಳೀ ಚಂದ್ರಶೇಖರ್ ಆರೋಪಿಸಿದರು.

ಪ್ರಜ್ವಲ್ ಅವರಾಗಲಿ ಅಥವಾ ಇನ್ನಾರೆ ಆಗಲಿ ಅಂತಹ ನೀಚ ಕೃತ್ಯವನ್ನು ಮಾಡಿದಾಗ ಅದಕ್ಕೆ ಸೂಕ್ತ ಕಾನೂನು ರೀತಿಯಲ್ಲಿ ಕಠಿಣವಾಗಿ ಶಿಕ್ಷಿಸಿ ಸಮಾಜದಲ್ಲಿ ಇಂತಹ ಕೃತ್ಯ ನಡೆಸುವವರಿಗೆ ಕಠಿಣ ಸಂದೇಶವನ್ನು ರವಾನಿಸಬೇಕಾದ ಸರ್ಕಾರವೇ ನಿಧಾನಗತಿ ಅನುಸರಿಸಿ ಇಲ್ಲ ಸಲ್ಲದ ಅನುಮಾನಗಳಿಗೆ ಎಡೆ ಮಾಡಿಕೊಟ್ಟಿದೆ ಎಂದರು.

ವಿದೇಶದಲ್ಲಿ ಅಡಗಿರುವ ಪ್ರಜ್ವಲ್‌ ರನ್ನು ಬಂಧಿಸುವಷ್ಟು ಕಾನೂನು ನೆರವು, ತಾಂತ್ರಿಕತೆ, ದಕ್ಷ, ಅನುಭವಿ ಅಧಿಕಾರಿಗಳಿಗೆ ನಮ್ಮಲ್ಲೇನೂ ಕೊರತೆಯಿಲ್ಲ. ಅಷ್ಟೆಲ್ಲಾ ಇದ್ದರೂ ಇದುವರೆಗೂ ಪ್ರಜ್ವಲ್‌ ರನ್ನು ಬಂಧಿಸದಿರುವುದು, ಪ್ರಕರಣವನ್ನು ಒಂದು ಹಂತಕ್ಕೆ ಕೊಂಡೊಯ್ಯದಿರುವುದು ಜನ ಸಾಮಾನ್ಯರಲ್ಲಿ ಸರ್ಕಾರ, ತನಿಖೆ ಮೇಲೆ ನಂಬಿಕೆ ಕಳೆದುಕೊಳ್ಳುವಂತಾಗುತ್ತಿದೆ ಎಂದು ದೂರಿದರು.
ರಾಜ್ಯ ಪ್ರಧಾನ ಕಾರ್ಯದರ್ಶಿ ಭಕ್ತರಹಳ್ಳಿ ಬೈರೇಗೌಡ, ಜಿಲ್ಲಾಧ್ಯಕ್ಷ ರಾಮನಾಥ, ತಾಲ್ಲೂಕು ಅಧ್ಯಕ್ಷ ತಾದೂರು ಮಂಜುನಾಥ್, ಜಿಲ್ಲಾ ಉಪಾಧ್ಯಕ್ಷ ವೀರಾಪುರ ಮುನಿನಂಜಪ್ಪ, ಬೀರಪ್ಪ ಹಾಜರಿದ್ದರು.

For Daily Updates WhatsApp ‘HI’ to 7406303366

NO COMMENTS

LEAVE A REPLY

Please enter your comment!
Please enter your name here
This site is protected by reCAPTCHA and the Google Privacy Policy and Terms of Service apply.

error: Content is protected !!
Exit mobile version