Sidlaghatta : ಶಿಡ್ಲಘಟ್ಟ ನಗರದಲ್ಲಿ ಪುನರ್ ನಿರ್ಮಾಣಗೊಳ್ಳುತ್ತಿರುವ ಪುರಾಣ ಪ್ರಸಿದ್ಧ ಕೋಟೆ ಶ್ರೀ ಸೋಮೇಶ್ವರಸ್ವಾಮಿ ದೇವಾಲಯದ ಜೀರ್ಣೋದ್ಧಾರ ಕಾರ್ಯವನ್ನು ತಹಶೀಲ್ದಾರ್ ಬಿ.ಎನ್. ಸ್ವಾಮಿ ಸೋಮವಾರ ವೀಕ್ಷಿಸಿದರು.
ನೂರಾರು ವರ್ಷಗಳ ಇತಿಹಾಸ ಹೊಂದಿರುವ ಈ ದೇವಾಲಯ ಮುಜರಾಯಿ ಇಲಾಖೆಗೆ ಸೇರಿದ್ದು, ಶಿಥಿಲಾವಸ್ಥೆಯ ಕಾರಣದಿಂದ ಪೂಜೆ ಪುನಸ್ಕಾರಗಳು ನಿಂತಿದ್ದವು. ಪ್ರಸ್ತುತ ಸುಮಾರು ₹2 ಕೋಟಿ ವೆಚ್ಚದಲ್ಲಿ ಜೀರ್ಣೋದ್ಧಾರ ಕಾರ್ಯ ಭರದಿಂದ ಸಾಗುತ್ತಿದೆ.
ಫೆಬ್ರವರಿ 2024ರ ಶಿವರಾತ್ರಿಗೂ ಮುನ್ನ ದೇವಾಲಯದ ಪುನರ್ ಪ್ರತಿಷ್ಠಾಪನಾ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗುತ್ತಿದ್ದು, ಗರ್ಭಗುಡಿ, ಗೋಪುರ, ಸಭಾಂಗಣ, ಪ್ರಾಂಗಣ, ಹಾಗೂ ಧ್ವಜಸ್ತಂಭದ ನಿರ್ಮಾಣ ಕೆಲಸಗಳು ಈಗಾಗಲೇ ಪೂರ್ಣಗೊಂಡಿವೆ. ಪಕ್ಕದಲ್ಲಿ ಅರ್ಚಕರ ಮನೆ, ಪ್ರಸಾದ ವಿತರಣಾ ಸಭಾಂಗಣ, ಮತ್ತು ಕಚೇರಿಯಂತಹ ಮೂಲಸೌಕರ್ಯಗಳೂ ಸಿದ್ಧವಾಗಿವೆ. ಇಡೀ ನಿರ್ಮಾಣ ಕಾರ್ಯವು ಕಲ್ಲಿನ ಆಕರ್ಷಕ ಕೆತ್ತನೆಗಳಿಂದ ಕಂಗೊಳಿಸುತ್ತಿದೆ.
ತಹಶೀಲ್ದಾರ್ ಬಿ.ಎನ್. ಸ್ವಾಮಿ ಮಾತನಾಡಿ, “900 ವರ್ಷಗಳಷ್ಟು ಹಳೆಯದಾದ ಈ ದೇವಾಲಯ ನಗರದ ಹೆಮ್ಮೆಯ ಆಧಾರವಾಗಿದೆ. ಭಕ್ತರು, ಸ್ಥಳೀಯ ಶಾಸಕರು, ಮತ್ತು ದಾನಿಗಳ ಸಹಾಯದಿಂದ ಶ್ರೀಕೋಟೆ ಸೋಮೇಶ್ವರಸ್ವಾಮಿ ದೇವಾಲಯ ಅಭಿವೃದ್ದಿ ಟ್ರಸ್ಟ್ ಈ ಸುಂದರ ದೇವಾಲಯವನ್ನು ಪುನರ್ ನಿರ್ಮಿಸುತ್ತಿದೆ. ಫೆಬ್ರವರಿಯೊಳಗೆ ಶೇ.75 ಮುಗಿದ ಕಾಮಗಾರಿಯನ್ನು ಸಂಪೂರ್ಣಗೊಳಿಸಿ ಲೋಕಾರ್ಪಣೆ ಮಾಡುವುದು ನಮ್ಮ ಉದ್ದೇಶ,” ಎಂದು ತಿಳಿಸಿದರು.
ಈ ವೇಳೆ ಟ್ರಸ್ಟ್ ಅಧ್ಯಕ್ಷ ಎ. ನಾಗರಾಜ್, ಕಾರ್ಯದರ್ಶಿ ಮುರಳಿ, ರೂಪಸಿ ರಮೇಶ್, ಶ್ರೀನಾಥ್, ಚಿಕ್ಕಮುನಿಯಪ್ಪ, ನಗರಸಭೆ ಅಧ್ಯಕ್ಷ ವೆಂಕಟಸ್ವಾಮಿ, ಹಾಗೂ ತಾಲ್ಲೂಕು ಆರೋಗ್ಯಾಧಿಕಾರಿ ಡಾ. ವೆಂಕಟೇಶಮೂರ್ತಿ ಹಾಜರಿದ್ದರು.