Sidlaghatta : ಹೆಣ್ಣುಮಕ್ಕಳಿಗೆ ಕಡ್ಡಾಯವಾಗಿ ಶಿಕ್ಷಣ ಕೊಡಬೇಕಾದ ಅಗತ್ಯವಿದೆ. ಆರೋಗ್ಯ ರಕ್ಷಣೆ, ಹೆಣ್ಣುಮಕ್ಕಳ ರಕ್ಷಣೆ ಮತ್ತು ಸಬಲೀಕರಣ, ಲಿಂಗ ಸಮಾನತೆ, ಹೆಣ್ಣುಮಕ್ಕಳ ಹಕ್ಕುಗಳ ರಕ್ಷಣೆ ಮತ್ತು ಯೋಗಕ್ಷೇಮವನ್ನು ಪ್ರತಿಯೊಬ್ಬರೂ ಉತ್ತೇಜಿಸಬೇಕಾದ ಅನಿವಾರ್ಯತೆ ಇದೆ ಎಂದು ಹಿರಿಯ ಸಿವಿಲ್ ನ್ಯಾಯಾಧೀಶ ಮತ್ತು ಜೆ.ಎಂ.ಎಫ್.ಸಿ ಮೊಹಮ್ಮದ್ ರೋಷನ್ ಷಾ ತಿಳಿಸಿದರು.
ನಗರದ ಆಜಾದ್ ನಗರದ ಉರ್ದು ಸರ್ಕಾರಿ ಪ್ರೌಢಶಾಲೆಯ ಆವರಣದಲ್ಲಿ ತಾಲ್ಲೂಕು ಕಾನೂನು ಸೇವಾ ಸಮಿತಿ, ವಕೀಲರ ಸಂಘ, ಪೊಲೀಸ್ ಇಲಾಖೆ, ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆಗಳ ಆಶ್ರಯದಲ್ಲಿ ಹಮ್ಮಿಕೊಳ್ಳಲಾಗಿದ್ದ ಕಾನೂನು ಅರಿವು-ನೆರವು ಮತ್ತು ಅಂತರಾಷ್ಟ್ರೀಯ ಹೆಣ್ಣುಮಕ್ಕಳ ದಿನಾಚರಣೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಹೆಣ್ಣುಮಕ್ಕಳು ವಿದ್ಯಾವಂತರೂ, ಆರೋಗ್ಯಪೂರ್ಣರೂ, ಅವರಲ್ಲಿನ ಸಾಮರ್ಥ್ಯ ಪ್ರದರ್ಶನಕ್ಕೆ ಸೂಕ್ತ ಅವಕಾಶಗಳನ್ನು ಒದಗಿಸಿದಾಗ ಕುಟುಂಬ, ಸಮುದಾಯ, ದೇಶದ ಅಭಿವೃದ್ಧಿ ಧನಾತ್ಮಕವಾಗಿ ಸಾಗಲು ಸಾದ್ಯವಿದೆ. ಹೆಣ್ಣುಮಕ್ಕಳು ಶಿಕ್ಷಣದ ಮೂಲಕ ಜ್ಞಾನ, ಕೌಶಲ ಮತ್ತು ಆತ್ಮವಿಶ್ವಾಸವನ್ನು ಹೆಚ್ಚಿಸಿಕೊಳ್ಳಲು ಪ್ರೇರೇಪಿಸುವುದರಿಂದ ಬಡತನ ಚಕ್ರ ಮುರಿದು ಸಾಮಾಜಿಕವಾಗಿ, ಶೈಕ್ಷಣಿಕ, ಆರ್ಥಿಕ ಪ್ರಗತಿ ಸಾಧಿಸಲು ಸಾಧ್ಯವಿದೆ ಎಂದರು.
ಮುಖ್ಯಶಿಕ್ಷಕ ಆಂಜನೇಯ ಮಾತನಾಡಿ, ಹುಡುಗಿಯರು ಉತ್ತಮ ಆರೋಗ್ಯ ಕ್ರಮಗಳನ್ನು ಅನುಸರಿಸಬೇಕು. ಸಶಕ್ತ ಹೆಣ್ಣುಮಕ್ಕಳು ಆರ್ಥಿಕ ಬೆಳವಣಿಗೆ ಮತ್ತು ಅಭಿವೃದ್ಧಿಯಲ್ಲಿ ಕಾಣ್ಕೆ ನೀಡಬಹುದಾದ್ದರಿಂದ ಶಿಕ್ಷಣ, ಉದ್ಯೋಗದಲ್ಲಿ ಅವಕಾಶಗಳನ್ನು ಕೊಡಬೇಕು ಎಂದರು.
ಶಿಡ್ಲಘಟ್ಟ ತಾಲ್ಲೂಕು ವಕೀಲರ ಸಂಘದ ಅಧ್ಯಕ್ಷ ಎ.ನಾರಾಯಣಸ್ವಾಮಿ ಮಾತನಾಡಿ, ಬಾಲ್ಯವಿವಾಹ, ಪೂರ್ವಾಗ್ರಹ ಪೀಡಿತ ಮನೋಧೋರಣೆಗಳು, ಲಿಂಗ ಆಧಾರಿತ ಸಮಸ್ಯೆಗಳು, ಅಸಮರ್ಪಕ ಶಿಕ್ಷಣಾವಕಾಶಗಳಂತಹ ಸ್ತ್ರೀಸಮಸ್ಯೆಗಳ ನಿವಾರಣೆಗೆ ಹೆಚ್ಚು ಆದ್ಯತೆ ಅಗತ್ಯ ಎಂದರು.
ಕಾರ್ಯಕ್ರಮಕ್ಕೆ ಮುನ್ನ ಶಾಲಾ ಆವರಣದಲ್ಲಿ ಸಸಿಗಳನ್ನು ನೆಡಲಾಯಿತು. ವಿದ್ಯಾರ್ಥಿ ನಿರ್ಮಿತ ಸೌರಶಕ್ತಿ ಚಾಲಿತ ಕಳೆನಾಶಕ ಯಂತ್ರದ ಪ್ರಾತ್ಯಕ್ಷಿಕೆಯನ್ನು ಪ್ರದರ್ಶಿಸಲಾಯಿತು. ವಿದ್ಯಾರ್ಥಿಗಳೊಂದಿಗೆ ಸಂವಾದ ನಡೆಯಿತು.
ತಾಲ್ಲೂಕು ವಕೀಲರ ಸಂಘದ ಕಾರ್ಯದರ್ಶಿ ಸಿ.ಜಿ.ಭಾಸ್ಕರ್ ಮಾತನಾಡಿದರು. ಶಿಕ್ಷಕಿ ಫಾತೀಮ್ ಉನ್ನೀಸಾ, ಹರ್ಷಿಕಮರ್, ಶಿಕ್ಷಕ ನಾರಾಯಣಸ್ವಾಮಿ, ಶ್ರೀನಿವಾಸರೆಡ್ಡಿ, ಅರುಣ್‌ಕುಮಾರ್ ಹಾಜರಿದ್ದರು.