Sidlaghatta : ಸರ್ಕಾರದ ವಿವಿಧ ಯೋಜನೆಗಳು ಸೇರಿದಂತೆ ಧ್ಯೇಯೋದ್ದೇಶಗಳು ಸಫಲವಾಗಬೇಕಾದರೆ ಅಧಿಕಾರಿಗಳ ಜವಾಬ್ದಾರಿ ಬಹಳ ಮುಖ್ಯವಾಗಿರುತ್ತದೆ ಎಂದು ಜಿಲ್ಲಾ ಲೋಕಾಯುಕ್ತ ಎಸ್.ಪಿ ಡಾ.ರಾಮ್ ಎಲ್ ಅರಸಿದ್ದಿ ಹೇಳಿದರು.
ನಗರದ ತಾಲ್ಲೂಕು ಕಚೇರಿ ಸಭಾಂಗಣದಲ್ಲಿ ಬುಧವಾರ ಚಿಕ್ಕಬಳ್ಳಾಪುರ ಜಿಲ್ಲಾ ಲೋಕಾಯುಕ್ತ ರಿಂದ ಆಯೋಜಿಸಲಾಗಿದ್ದ ಸಾರ್ವಜನಿಕ ಕುಂದುಕೊರತೆಗಳ ಬಗ್ಗೆ ಅಹವಾಲುಗಳನ್ನು ಸ್ವೀಕರಿಸುವ ಸಭೆಯಲ್ಲಿ ಅವರು ಮಾತನಾಡಿದರು.
ಸರ್ಕಾರಿ ಅಧಿಕಾರಿಗಳು ಪ್ರತಿಯೊಬ್ಬರೂ ಎಚ್ಚರಿಕೆಯಿಂದ ಕೆಲಸ ಮಾಡುವ ಜೊತೆಗೆ ಸಾರ್ವಜನಿಕರ ಭಾವನೆಗಳನ್ನು ಕೆರಳಿಸುವ ರೀತಿಯಲ್ಲಿ ನಡೆದುಕೊಳ್ಳಬಾರದು. ಸಾರ್ವಜನಿಕರು ಬಯಸಿದ ಕೆಲಸ ಮಾಡಲು ಯೋಗ್ಯವಾಗಿದ್ದು ಎಷ್ಟು ದಿನಗಳಲ್ಲಿ ಆಗುತ್ತದೆ ಅಥವ ಅವರ ಕೆಲಸ ಮಾಡಲು ಏನು ತೊಂದರೆಯಿದೆ ಎನ್ನುವುದನ್ನು ಅವರಿಗೆ ಅರ್ಥವಾಗುವ ರೀತಿ ತಿಳಿಹೇಳಬೇಕು ಹಾಗೂ ಲಿಖಿತವಾಗಿ ಅವರಿಗೆ ಉತ್ತರ ನೀಡಿದಲ್ಲಿ ಬಹಳಷ್ಟು ಸಮಸ್ಯೆಗಳಿಗೆ ಸ್ಥಳದಲ್ಲಿಯೇ ಪರಿಹಾರ ಸಿಗುತ್ತದೆ ಎಂದರು.
ಭ್ರಷ್ಟಾಚಾರ ನಿರ್ಮೂಲನೆ ಮಾಡುವ ಕೆಲಸಕ್ಕೆ ಸಾರ್ವಜನಿಕರ ಸಹಕಾರ ಅತ್ಯಗತ್ಯ. ಸಾರ್ವಜನಿಕರು ಪ್ರಶ್ನೆ ಮಾಡುವುದನ್ನು ರೂಡಿಸಿಕೊಳ್ಳಬೇಕು. ಸಾರ್ವಜನಿಕರ ಕೆಲಸ ಕಾರ್ಯಗಳನ್ನು ಅಧಿಕಾರಿಗಳು ಮಾಡದೆ ವಿಳಂಬ ಅಥವ ನಿರ್ಲಕ್ಷ್ಯ ಮಾಡುತ್ತಿದ್ದಲ್ಲಿ ಹಾಗು ಸರ್ಕಾರಿ ಯೋಜನೆಗಳ ಅನುಷ್ಠಾನದಲ್ಲಿ ಅಕ್ರಮ ನಡೆಸಿ ಹಣ ದುರುಪಯೋಗ ಅಥವಾ ಲಂಚದ ಬೇಡಿಕೆಯನ್ನಿಟ್ಟರೆ ಸಾರ್ವಜನಿಕರು ನಿರ್ದಿಷ್ಟ ಮಾಹಿತಿ ಹಾಗು ಅಗತ್ಯ ದಾಖಲೆಗಳೊಂದಿಗೆ ಲೋಕಾಯುಕ್ತ ಕಚೇರಿಗೆ ನೇರವಾಗಿ ಅಥವ ಅಂಚೆ ಮೂಲಕ ದೂರು ಸಲ್ಲಿಸಬಹುದು ಎಂದರು.
ಯಾವುದೇ ಕೆಲಸವಾದರೂ ಸಹಿ ಮಧ್ಯವರ್ತಿಗಳ ಮೂಲಕ ಹೋಗುವ ಬದಲಿಗೆ ನೇರವಾಗಿ ಸಂಬಂಧಪಟ್ಟ ಅಧಿಕಾರಿಯನ್ನು ಭೇಟಿ ಮಾಡಿ ಕೆಲಸ ಮಾಡಿಸಿಕೊಳ್ಳುವ ಮನಸ್ಥಿತಿ ಪ್ರತಿಯೊಬ್ಬರೂ ಬೆಳೆಸಿಕೊಳ್ಳಬೇಕು ಎಂದರು.
ಕಂದಾಯ ಇಲಾಖೆ, ಹಾಗು ಭೂಮಾಪನಾ ಇಲಾಖೆಗೆ ಸಂಬಂದಿಸಿದಂತೆ ಅರ್ಜಿದಾರರಿಂದ ಒಟ್ಟು ಏಳು ಅರ್ಜಿಗಳನ್ನು ಸ್ವೀಕರಿಸಲಾಯಿತು.
ಈ ಸಂದರ್ಭದಲ್ಲಿ ಲೋಕಾಯುಕ್ತ ಡಿ ವೈ ಎಸ್ ಪಿ ವೀರೇಂದ್ರಕುಮಾರ್, ಇನ್ ಸ್ಪೆಕ್ಟರ್ ಶಿವಪ್ರಸಾದ್, ತಹಶೀಲ್ದಾರ್ ಬಿ.ಎನ್.ಸ್ವಾಮಿ, ತಾ.ಪಂ ಇಓ ನಾರಾಯಣ, ನಗರಸಭೆ ಪೌರಾಯುಕ್ತ ಮಂಜುನಾಥ್, ಸೇರಿದಂತೆ ತಾಲ್ಲೂಕು ಮಟ್ಟದ ವಿವಿಧ ಇಲಾಖೆಗಳ ಅಧಿಕಾರಿಗಳು ಹಾಜರಿದ್ದರು.