Mallur, Sidlaghatta : ಆರಿದ್ರಾ ಮಳೆ ಬೀಳುವ ಸಂದರ್ಭದಲ್ಲಿ ತಲತಲಾಂತರದಿಂದ ಬಂದ ರೂಢಿಯಂತೆ ತಾಲ್ಲೂಕಿನ ದೇವರಮಳ್ಳೂರು ಗ್ರಾಮಸ್ಥರು ಮಂಗಳವಾರ ಗ್ರಾಮದೇವರುಗಳಿಗೆ ಪೂಜೆ ಸಲ್ಲಿಸಿ ನಂತರ ದಿಬ್ಬೂರು ಪಂಚಾಯಿತಿಯ ಗೊಳ್ಳುಚಿನ್ನಪ್ಪನಹಳ್ಳಿಯ ದೇವರಿಗೆ ಪೂಜೆ ಸಲ್ಲಿಸಲು ಹೊರಟರು.
ದೇವರಮಳ್ಳೂರು ಗ್ರಾಮದಲ್ಲಿ ಮಳ್ಳೂರಮ್ಮ, ಕಟ್ಟೆ ಮೇಲಿನ ಗಂಗಮ್ಮ, ಆಂಜನೇಯಸ್ವಾಮಿಗೆ ಪೂಜೆ ಸಲ್ಲಿಸಿ, ಹಿಂದಿನಿಂದ ಬಂದ ಸಂಪ್ರದಾಯದಂತೆ ಪ್ರತಿ ಮನೆಗೂ ಕನಿಷ್ಠ ಒಬ್ಬರಂತೆ ಟ್ರಾಕ್ಟರುಗಳಲ್ಲಿ ಪೂಜೆಯ ಸಾಮಾನುಗಳು ಮತ್ತು ದೀಪಗಳೊಂದಿಗೆ ಹೊರಟರು.
ದಾರಿಯಲ್ಲಿ ದ್ಯಾವಪ್ಪನಗುಡಿಯಲ್ಲಿ ಪೂಜೆ ಸಲ್ಲಿಸಿ, ಗೊಳ್ಳುಚಿನ್ನಪ್ಪನಹಳ್ಳಿಯಲ್ಲಿನ ಏಳು ದೇವತೆಗಳಾದ ದೊಡ್ಡಮ್ಮ, ನರಿಡಮ್ಮ, ಗೌತ್ಲಮ್ಮ, ಸಪ್ಪಲಮ್ಮ, ಗಂಗಮ್ಮ, ಪ್ಲೇಗಮ್ಮ ಅವರಿಗೆ ಪೂಜೆ ಸಲ್ಲಿಸಿ ತಣಿಗೆ ಅರ್ಪಿಸಿದರು. ಅಲ್ಲಿಯೇ ದೇವರಿಗಳಿಗೆ ಪ್ರಸಾದ ಅರ್ಪಿಸಿ, ಸೇವಿಸಿದರು.
“ನಮ್ಮ ಗ್ರಾಮ ದೇವತೆಯನ್ನು ಪೂಜಿಸಿ, ಗೊಳ್ಳು ಸಪ್ಪಲಮ್ಮನನ್ನು ಪೂಜಿಸಿ ತಣಿಗೆ ಅರ್ಪಿಸಿ ಬರುವ ಪದ್ಧತಿಯನ್ನು ಆರಿದ್ರಾ ಮಳೆಗಾಲದಲ್ಲಿ ಆಚರಿಸುವ ರೂಢಿ ನಮ್ಮ ಹಿಂದಿನವರಿಂದ ನಾವು ಕಲಿತಿದ್ದೇವೆ. ಇದರಿಂದ ಗ್ರಾಮಕ್ಕೆ, ಜನ ಜಾನುವಾರುಗಳಿಗೆ ಒಳ್ಳೆಯದಾಗುತ್ತದೆ ಎಂಬ ನಂಬಿಕೆಯಿದೆ” ಎಂದು ಗ್ರಾಮದ ಹಿರಿಯ ಬಚ್ಚಪ್ಪ ತಿಳಿಸಿದರು.