Sidlaghatta : ಶಿಡ್ಲಘಟ್ಟ ನಗರಸಭೆಯ ವ್ಯಾಪ್ತಿಯಲ್ಲಿ ಮೂಲಭೂತ ಸೌಲಭ್ಯಗಳನ್ನು ಮೇಲ್ದರ್ಜೆಗೇರಿಸಲು ರಾಜ್ಯ ಸರ್ಕಾರ ನಗರೋತ್ಥಾನ ಹಂತ – 4ರ ಯೋಜನೆಯಡಿ 30 ಕೋಟಿ ಮಂಜೂರು ಮಾಡಿರುವ ಹಿನ್ನೆಲೆಯಲ್ಲಿ ಕಾಮಗಾರಿಯ ಪಟ್ಟಿಯನ್ನು ಪರಿಶೀಲಿಸಲು ತೆರಳಿದ್ದ ನಗರಸಭೆಯ (City Municipal Council) ಅಧ್ಯಕ್ಷೆ (President) ಮತ್ತು ಪೌರಾಯುಕ್ತರ (Commissioner) ಮೇಲೆ ಉಪಾಧ್ಯಕ್ಷ ಹಾಗೂ ಅವರ ಬೆಂಬಲಿಗರು ಹಲ್ಲೆ (Assault) ನಡೆಸಿರುವ ಘಟನೆ ಗುರುವಾರ ನಡೆದಿದೆ.
ನಗರೋತ್ಥಾನ ಹಂತ 4 ರ ಯೋಜನೆಯಡಿ ರಾಜ್ಯ ಸರ್ಕಾರ ಬಿಡುಗಡೆಗೊಳಿಸಿರುವ 30 ಕೋಟಿ ಅನುದಾನದಲ್ಲಿ ನಗರದ ಒಟ್ಟು 31 ವಾರ್ಡುಗಳಲ್ಲಿ ಏನೆಲ್ಲಾ ಕೆಲಸ ಕಾರ್ಯಗಳು ಮಾಡಬಹುದು ಎನ್ನುವ ದೃಷ್ಠಿಯಿಂದ ಕಳೆದ ಒಂದು ತಿಂಗಳಿಂದ ನಗರಸಭೆ ಅಧ್ಯಕ್ಷರೂ ಸೇರಿದಂತೆ ಪೌರಾಯುಕ್ತರು ಹಾಗೂ ಸಿಬ್ಬಂದಿ ಎಲ್ಲಾ ವಾರ್ಡುಗಳಿಗೆ ಭೇಟಿ ನೀಡಿ ಕಾಮಗಾರಿಗಳ ಪಟ್ಟಿ ಮಾಡುತ್ತಿದ್ದರು. ಅದರಂತೆ ಗುರುವಾರ ಉಪಾಧ್ಯಕ್ಷ ಬಿ.ಅಪ್ಸರ್‌ಪಾಷ ಗೆ ಸೇರಿದ ನಗರದ 29 ನೇ ವಾರ್ಡಿಗೆ ವೀಕ್ಷಣೆಗೆ ತೆರಳಿದ ವೇಳೆಯಲ್ಲಿ ನಗರಸಭೆಯ ಉಪಾಧ್ಯಕ್ಷ ಅಫ್ಸರ್‌ಪಾಷಾ ಮತ್ತು ಅವರ ಬೆಂಬಲಿಗರು ಅನುಚಿತವಾಗಿ ವರ್ತಿಸಿ, ನಗರಸಭೆ ಅಧ್ಯಕ್ಷೆ ಸುಮಿತ್ರ ರಮೇಶ್, ಪೌರಾಯುಕ್ತ ಆರ್.ಶ್ರೀಕಾಂತ್ ಸೇರಿದಂತೆ ಸಿಬ್ಬಂದಿ ಮೇಲೆ ಹಲ್ಲೆ ನಡೆಸಿರುವ ಘಟನೆ ನಡೆದಿದೆ.
ಹಲ್ಲೆಗೊಳಗಾದ ನಗರಸಭೆ ಅಧ್ಯಕ್ಷೆ ಸುಮಿತ್ರ ರಮೇಶ್ ಹಾಗೂ ಪೌರಾಯುಕ್ತ ಆರ್.ಶ್ರೀಕಾಂತ್ ನಗರದ ಸಾರ್ವಜನಿಕ ಆಸ್ಪತ್ರೆಯಲ್ಲಿ ಪ್ರಥಮ ಚಿಕಿತ್ಸೆ ಪಡೆದರು. ನಗರಸಭೆಯ ಅಧ್ಯಕ್ಷೆ ಮೇಲೆ ಹಲ್ಲೆ ನಡೆಸಲಾಗಿದೆ ಎಂಬ ಸುದ್ದಿ ಹರಡುತ್ತಿದ್ದಂತೆಯೇ ನೂರಾರು ಸಂಖ್ಯೆಯಲ್ಲಿ ಜೆಡಿಎಸ್ ಕಾರ್ಯಕರ್ತರು ಹಾಗೂ ನಗರಸಭಾ ಸದಸ್ಯರು ಮತ್ತು ದಲಿತ ಸಂಘಟನೆಗಳ ಕಾರ್ಯಕರ್ತರು ಸಾರ್ವಜನಿಕ ಆಸ್ಪತ್ರೆ ಮುಂಭಾಗ ಜಮಾವಣೆಗೊಂಡರು. ಸ್ಥಳಕ್ಕೆ ಬಂದ ಪೊಲೀಸರು ಸಾರ್ವಜನಿಕರು ಎಲ್ಲರೂ ಶಾಂತಿ ಕಾಪಾಡಬೇಕೆಂದು ಮನವಿ ಮಾಡಿದರು. ಈ ಬಗ್ಗೆ ಕಾನೂನು ರೀತಿಯ ಕ್ರಮ ಜರುಗಿಸಲಾಗುವುದು ಎಂದು ಭರವಸೆ ನೀಡಿದರು.
ಶಿಡ್ಲಘಟ್ಟ ನಗರಸಭೆಯ ಅಧ್ಯಕ್ಷೆ ಸುಮಿತ್ರಾ ರಮೇಶ್ ಹಾಗೂ ಉಪಾಧ್ಯಕ್ಷ ಅಫ್ಸರ್‌ಪಾಷ ಅವರ ನಡುವೆ ಈಗಾಗಲೇ ರಾಜಕೀಯವಾಗಿ ಸಮರ ನಡೆದು ನಗರಸಭೆಯ ಅಧ್ಯಕ್ಷೆ ಸುಮಿತ್ರಾ ರಮೇಶ್ ಅವರು ಈ ಹಿಂದೆಯೂ ತಮಗೆ ನಗರಸಭೆಯ ಉಪಾಧ್ಯಕ್ಷ ಅಫ್ಸರ್ ಪಾಷ ಇನ್ನಿತರರು ಜಾತಿ ನಿಂದನೆ ಮಾಡಿದ್ದಾರೆ ಎಂದು ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ.
ನಗರಸಭೆಯ ಉಪಾಧ್ಯಕ್ಷ ಅಫ್ಸರ್ ಪಾಷಾ ಮತ್ತು ಅವರ ಬೆಂಬಲಿಗರು ಗೂಂಡಾ ವರ್ತನೆಯನ್ನು ತೋರಿಸಿ ನಗರದಲ್ಲಿ ಭಯ ಭೀತಿಯ ವಾತಾವರಣವನ್ನು ನಿರ್ಮಿಸಿದ್ದಾರೆ. ದಲಿತ ಮಹಿಳೆ ಮತ್ತು ನಗರದ ಪ್ರಥಮ ಪ್ರಜೆಯ ಮೇಲೆ ಹಲ್ಲೆ ನಡೆಸಿ ದುಸ್ಸಾಹಸ ಮೆರೆದಿದ್ದಾರೆ. ಕೂಡಲೇ ಇವರ ಮೇಲೆ ಕಾನೂನು ರೀತಿಯ ಕ್ರಮ ಜರುಗಿಸಬೇಕೆಂದು ನಗರಸಭೆ ಅಧ್ಯಕ್ಷರ ಬೆಂಬಲಿಗರು ಆಗ್ರಹಿಸಿದ್ದಾರೆ.