Sidlaghatta : ಶಿಡ್ಲಘಟ್ಟ ನಗರಸಭೆಗೆ (City Municipal Council) ಸಂಪನ್ಮೂಲ ಕ್ರೂಡೀಕರಣ ಮಾಡುವ ಉದ್ದೇಶದಿಂದ ವ್ಯಾಪಾರ ಪರವಾನಗಿ ಹಾಗೂ ಕಂದಾಯವನ್ನು(Tax Collection) ಸ್ಥಳಕ್ಕೆ ತೆರಳಿ ಕಟ್ಟಿಸಿಕೊಳ್ಳುತ್ತಿದ್ದೇವೆ. ಸಾರ್ವಜನಿಕರಿಗೆ ಈ ಬಗ್ಗೆ ಅರಿವನ್ನು ಸಹ ಮೂಡಿಸುತ್ತಿದ್ದೇವೆ ಎಂದು ನಗರಸಭೆ ಪೌರಾಯುಕ್ತ ಶ್ರೀಕಾಂತ್ ತಿಳಿಸಿದರು.
ನಗರದ ಎರಡನೇ ವಾರ್ಡಿನ ವಾಸವಿ ರಸ್ತೆಯಿಂದ ಸಂತೆ ಬೀದಿ ಮೂಲಕ ಮಂಗಳವಾರ ನಗರಸಭೆ ಸಿಬ್ಬಂದಿಯೊಂದಿಗೆ ಅಂಗಡಿಗಳಲ್ಲಿ ಪರವಾನಗಿ ಶುಲ್ಕವನ್ನು ಹಾಗೂ ಮನೆಗಳ ಕಂದಾಯವನ್ನು ಕಟ್ಟಿಸಿಕೊಳ್ಳುವ ಅಭಿಯಾನದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.
ಪ್ಲಾಸ್ಟಿಕ್ ನಿಷೇಧ, ನೀರಿನ ತೆರಿಗೆ, ವೃತ್ತಿ ಪರವಾನಗಿ ಹಾಗೂ ಆಸ್ತಿ ತೆರಿಗೆಯನ್ನು ಯಾರೂ ಬಾಕಿ ಉಳಿಸಿಕೊಳ್ಳಬಾರದು. ನಗರಸಭೆ ಸಿಬ್ಬಂದಿಯ ಮೂರು ತಂಡಗಳನ್ನು ರಚಿಸಿದ್ದು, ದಿನಕ್ಕೊಂದು ವಾರ್ಡಿಗೆ ತೆರಳಿ ಜಾಗೃತಿ ಮೂಡಿಸುತ್ತಾ ಹಣ ಕಟ್ಟಿಸಿಕೊಳ್ಳುತ್ತಿದ್ದೇವೆ ಎಂದರು.
ಪ್ಲಾಸ್ಟಿಕ್ ನಿಷೇಧ ಮಾಡಿದ್ದು, ಅದರ ಕುರಿತಾಗಿ ಈಗಾಗಲೇ ಸರ್ಕಾರದ ಸುತ್ತೋಲೆಯನ್ನು ಪ್ರಚುರಪಡಿಸಲಾಗಿದೆ. ಆದರೂ ಕೆಲವರು ಕದ್ದು ಮುಚ್ಚಿ ಪ್ಲಾಸ್ಟಿಕ್ ಬಳಸುತ್ತಿರುವುದು ಕಮ್ಡುಬಂದಿತು. ಈದಿನ ಸುಮಾರು ನಾಲ್ಕು ಕೇಜಿ ಪ್ಲಾಸ್ಟಿಕ್ ವಶಪಡಿಸಿಕೊಂಡು ಸುಮಾರು ಮೂರು ಸಾವಿರ ರೂ ದಂಡ ವಿಧಿಸಿದ್ದೇವೆ ಎಂದರು.