Muttur, Sidlaghatta : ಶಿಡ್ಲಘಟ್ಟ ತಾಲ್ಲೂಕಿನ ಮುತ್ತೂರು ಗ್ರಾಮದಲ್ಲಿ ಗ್ರಾಮ ದೇವತೆಗಳ ಊರ ಜಾತ್ರಾ ಮಹೋತ್ಸವವನ್ನು ಮಂಗಳವಾರ ವಿಜೃಂಭಣೆಯಿಂದ ಆಚರಿಸಲಾಯಿತು.
ಭಾನುವಾರದಿಂದ ಮಂಗಳವಾರದವರೆಗೆ ಮೂರು ದಿನಗಳ ಕಾಲ ಗ್ರಾಮ ದೇವತೆಗಳ ಜಾತ್ರೆಯನ್ನು ನಡೆಸಲಾಗುತ್ತಿದೆ. ಗ್ರಾಮಸ್ಥರು ವಿವಿಧ ದೇವತೆಗಳ ತಂಬಿಟ್ಟು ದೀಪೋತ್ಸವವನ್ನು ಉತ್ಸಾಹ ಹಾಗೂ ಭಕ್ತಿಯಿಂದ ಆಚರಿಸಿದರು.
ತವರಿಗೆ ಬಂದ ಹೆಣ್ಣುಮಕ್ಕಳು ವಿಶೇಷವಾಗಿ ಅಲಂಕರಿಸಿಕೊಂಡು ಅಲಂಕೃತ ದೀಪಗಳನ್ನು ಹೊತ್ತು, ತಮಟೆ ವಾದನದೊಂದಿಗೆ ಗ್ರಾಮ ದೇವತೆಗಳನ್ನು ಪೂಜಿಸಲು ಹಳ್ಳಿಯಲ್ಲಿ ಮೆರವಣಿಗೆಯನ್ನು ಮಾಡಿದರು.
ಭಾನುವಾರದಂದು ಮೆರವಣಿಗೆ ದೇವರುಗಳಾದ ಶ್ರೀ ಮಹೇಶ್ವರಮ್ಮ, ಶ್ರೀ ಗಂಗಮ್ಮದೇವಿ, ಶ್ರೀ ಮುನೇಶ್ವರಸ್ವಾಮಿ, ಶ್ರೀ ಸಪ್ಪಲಮ್ಮದೇವಿ, ಶ್ರೀ ಯಲ್ಲಮ್ಮದೇವಿ ದೇವರುಗಳನ್ನು ಗ್ರಾಮಕ್ಕೆ ಬರಮಾಡಿಕೊಳ್ಳಲಾಯಿತು.
ಸೋಮವಾರ ಗ್ರಾಮದಲ್ಲಿನ ಗಂಡು ದೇವರುಗಳಿಗೆ ದೀಪದಾರತಿಯನ್ನು ನೆರವೇರಿಸಲಾಯಿತು. ಮಂಗಳವಾರ ಶ್ರೀ ಮಾರಮ್ಮ ದೇವಾಲಯದಿಂದ ಕೆರೆಯ ಅಂಗಳದವರೆಗೂ ದೀಪಗಳನ್ನು ಹೊತ್ತ ಮಹಿಳೆಯರು ಮೆರವಣಿಗೆಯಲ್ಲಿ ಸಾಗಿದರು. ಶ್ರೀ ಮಹೇಶ್ವರಮ್ಮ, ಶ್ರೀ ಗಂಗಮ್ಮದೇವಿ, ಶ್ರೀ ಮುನೇಶ್ವರಸ್ವಾಮಿ, ಶ್ರೀ ಸಪ್ಪಲಮ್ಮದೇವಿ, ಶ್ರೀ ಯಲ್ಲಮ್ಮದೇವಿ ದೇವರುಗಳ ಉತ್ಸವ ನಡೆಸಿ ಹಾಗೂ ದೀಪವನ್ನು ಬೆಳಗಲಾಯಿತು.