Sidlaghatta : ಶಿಡ್ಲಘಟ್ಟ ಗ್ರಾಮಾಂತರ ಠಾಣೆಯ ಪೊಲೀಸರು ಇಬ್ಬರು ಅಂತರ ಜಿಲ್ಲಾ ಕಳ್ಳರನ್ನು ಬಂಧಿಸಿ ಅವರಿಂದ ಕಳ್ಳತನ ಮಾಡಿದ್ದ 197 ಗ್ರಾಂ ತೂಕದ ಚಿನ್ನಾಭರಣಗಳು ಹಾಗೂ ಕದ್ದ ಚಿನ್ನಾಭರಣವನ್ನು ಅಡವಿಟ್ಟು ಆ ಹಣದಿಂದ ಖರೀದಿಸಿದ್ದ ವಾಹನ, ಮೊಬೈಲ್‌ಗಳನ್ನು ವಶಪಡಿಸಿಕೊಂಡಿದ್ದಾರೆ.
ಶಿಡ್ಲಘಟ್ಟ ತಾಲ್ಲೂಕಿನ ದೊಡ್ಡಚೊಕ್ಕಂಡಹಳ್ಳಿಯ ವಾಸಿ ಚಾಲಕ ವೃತ್ತಿ ಮಾಡುತ್ತಿದ್ದ ರವಿ(24), ಮಾಲೂರು ತಾಲ್ಲೂಕು ಹುಂಗೇನಹಳ್ಳಿಯ ವಾಸಿ ಪೈಂಟರ್ ಕೆಲಸ ಮಾಡುತ್ತಿದ್ದ ವಿವೇಕ್(24)ರನ್ನು ಬಂಧಿಸಲಾಗಿದೆ.
ಅವರಿಂದ ಸುಮಾರು 10 ಲಕ್ಷ ಬೆಲೆ ಬಾಳುವ 197 ಗ್ರಾಂನಷ್ಟು ಚಿನ್ನಾಭರಣ, ಟಾಟಾ ಸುಮೋ ವಾಹನ, ಎರಡು ಮೊಬೈಲ್ ಗಳನ್ನು ವಶಪಡಿಸಿಕೊಳ್ಳಲಾಗಿದೆ.
ಬಂಧಿತ ಆರೋಪಿಗಳು ಶಿಡ್ಲಘಟ್ಟ ತಾಲ್ಲೂಕಿನ ಜಂಗಮಕೋಟೆಯ ನಾರಾಯಣಪ್ಪ ಎಂಬುವವರ ಮನೆಯಲ್ಲಿ ಮನೆಯವರು ಯಾರೂ ಇಲ್ಲದಿರುವಾಗ 197 ಗ್ರಾಂ ಚಿನ್ನಾಭರಣ, 50 ಸಾವಿರ ರೂ ನಗದನ್ನು ಕಳ್ಳತನ ಮಾಡಿದ್ದರು.
ಕಳ್ಳತನ ಮಾಡಿದ ಚಿನ್ನಾಭರಣಗಳ ಪೈಕಿ 166 ಗ್ರಾಂನಷ್ಟು ಚಿನ್ನಾಭರಣಗಳನ್ನು ಬೆಂಗಳೂರಿನ ವೈಟ್‌ಫೀಲ್ಡ್ ನ ಖಾಸಗಿ ಬ್ಯಾಂಕ್‌ವೊಂದರಲ್ಲಿ ಅಡವಿಟ್ಟು ಹಣ ಪಡೆದು ಆ ಹಣದಲ್ಲಿ ಟಾಟಾ ಸುಮೋ ವಾಹನ, ಎರಡು ಮೊಬೈಲ್ ಗಳನ್ನು ಖರೀದಿಸಿದ್ದರು.
ಬಂಧಿತ ವಿವೇಕ್ ವಿರುದ್ದ ದೇವನಹಳ್ಳಿಯ ಠಾಣೆಯಲ್ಲಿ, ರವಿ ವಿರುದ್ದ ಶಿಡ್ಲಘಟ್ಟ ಗ್ರಾಮಾಂತರ ಠಾಣೆಯಲ್ಲಿ ಈಗಾಗಲೆ ಮೊಕದ್ದಮೆ ದಾಖಲಾಗಿದ್ದು ಇವರ ಅಂತರ ಜಿಲ್ಲಾ ಕಳ್ಳರಾಗಿದ್ದು ಹೆಚ್ಚಿನ ತನಿಖೆಗೆ ಒಳಪಡಿಸಲಾಗಿದೆ.
ಸಿಪಿಐ ಎಂ.ಶ್ರೀನಿವಾಸ್ ಮಾರ್ಗದರ್ಶನದಲ್ಲಿ ಗ್ರಾಮಾಂತರ ಠಾಣೆಯ ಎಸ್ ಐ ಸತೀಶ್ ನೇತೃತ್ವದಲ್ಲಿ ನಂದಕುಮಾರ್, ಮುರಳಿಕೃಷ್ಣ, ವಿಶ್ವನಾಥ್, ಅಶ್ವತ್ಥಯ್ಯ, ಲಕ್ಷ್ಮಿ, ಕೃಷ್ಣಪ್ಪ, ವೆಂಕಟೇಶ್, ನಾರಾಯಣ, ಅಂಬರೀಷ್ ಅವರ ತಂಡ ಆರೋಪಿಗಳ ಪತ್ತೆ ಮಾಡಿ ಕಳವು ಮಾಲನ್ನು ವಶಪಡಿಸಿಕೊಳ್ಳುವ ಕಾರ್ಯಾಚರಣೆಯಲ್ಲಿ ಭಾಗವಹಿಸಿದ್ದು ಹಿರಿಯ ಪೊಲೀಸ್ ಅಧಿಕಾರಿಗಳು ಅಭಿನಂದಿಸಿದ್ದಾರೆ.