Sidlaghatta : ಶಿಡ್ಲಘಟ್ಟ ತಾಲ್ಲೂಕಿನಲ್ಲಿ ಸರ್ಕಾರ ಕನಿಷ್ಠ ಬೆಂಬಲ ಯೋಜನೆಯಡಿಯಲ್ಲಿ ರಾಗಿ ಖರೀದಿ ಮಾಡುತ್ತಿದ್ದು, ರೈತರು ಬೆಳೆದಿರುವ ಬೆಳೆಗೂ ತಂತ್ರಾಂಶದಲ್ಲಿ ನಮೂದಾಗಿರುವ ಬೆಳೆಗೂ ತಾಳೆಯಾಗದೆ ರೈತರಿಗೆ ತುಂಬಾ ತೊಂದರೆಯಾಗಿದೆ. ಸಂಬಂಧಪಟ್ಟ ಅಧಿಕಾರಿಗಳು ಸಮಸ್ಯೆಯನ್ನು ಸರಿಪಡಿಸಬೇಕೆಂದು ಒತ್ತಾಯಿಸಿ, ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ಸಾಮೂಹಿಕ ನಾಯಕತ್ವದಲ್ಲಿ ಶಿರಸ್ತೆದಾರ್ ಮಂಜುನಾಥ್ ಅವರಿಗೆ ಮನವಿಯನ್ನು ಮಂಗಳವಾರ ಸಲ್ಲಿಸಿದರು.
ಸರ್ಕಾರ ಪ್ರತಿ ವರ್ಷದಂತೆ ಈ ವರ್ಷವೂ ಸಹ ಕರ್ನಾಟಕ ಕೃಷಿ ಸಹಕಾರ ಮಾರಾಟ ಮಹಾಮಂಡಳಿ ಮೂಲಕ ರೈತರ ಬಳಿ ರಾಗಿ ಖರೀದಿ ಮಾಡುತ್ತಿದೆ. ಆದರೆ ರೈತರು ರಾಗಿ ನೋಂದಣಿ ಮಾಡಿಸುವ ಸಮಯದಲ್ಲಿ ದತ್ತಾಂಶದಲ್ಲಿ ರೈತರ ರಾಗಿ ಬೆಳೆಯೇ ನಮೂದಾಗಿರುವುದಿಲ್ಲ. ಈ ವಿಷಯದಲ್ಲಿ ಕೃಷಿ ಇಲಾಖೆಯ ಅಧಿಕಾರಿಗಳು ಕಂದಾಯ ಇಲಾಖೆಯ ಅಧಿಕಾರಿಗಳನ್ನು ಕೇಳಿ ಎಂದು ವಾಪಸ್ ಕಳುಹಿಸುತ್ತಿದ್ದಾರೆ. ಕಂದಾಯ ಇಲಾಖೆಯ ಅಧಿಕಾರಿಗಳನ್ನು ಕೇಳಿದರೆ ನಾವು ದತ್ತಾಂಶದಲ್ಲಿ ನಮೂದು ಮಾಡಿದ್ದೇವೆ. ನಮಗೆ ಗೊತ್ತಿಲ್ಲ ಎಂದು ಹೇಳಿ ಸಮಜಾಯಿಷಿ ನೀಡುತ್ತಿದ್ದು, ರೈತರು ಇಲಾಖೆಯಿಂದ ಇಲಾಖೆಗೆ ಪರದಾಡುವಂತಾಗಿದೆ. ತಾವುಗಳು ತಕ್ಷಣ ಕ್ರಮ ವಹಿಸಿ, ರೈತರು ಸುಗಮವಾಗಿ ರಾಗಿ ಖರೀದಿ ಕೇಂದ್ರಕ್ಕೆ ಮಾರಾಟ ಮಾಡಲು ಅನುಕೂಲ ಮಾಡಿಕೊಡಬೇಕೆಂದು ಮನವಿ ಸಲ್ಲಿಸಿದರು.
ಈ ಸಂದರ್ಭದಲ್ಲಿ ಆಹಾರ ಇಲಾಖೆಯ ನಿರೀಕ್ಷಕಿ ವೆಂಕಟಲಕ್ಷ್ಮಿ ಅವರು, ದತ್ತಾಂಶದಲ್ಲಿ ಸಮಸ್ಯೆಯುಂಟಾಗಿದ್ದು ಮೂರ್ನಾಕು ದಿನದಲ್ಲಿ ಸರಿಪಡಿಸುತ್ತೇವೆ. 20 ಕ್ವಿಂಟಲ್ ಮಿತಿಯ ವಿಷಯವು ಸರ್ಕಾರದ ಮಟ್ಟದಲ್ಲಿದ್ದು ಸರ್ಕಾರಕ್ಕೆ ಮಾಹಿತಿ ಕಳುಹಿಸಿಕೊಡುತ್ತೇವೆಂದು ಹೇಳಿದರು.
ರೈತ ಸಂಘದ ಜಿಲ್ಲಾಧ್ಯಕ್ಷ ಬೆಳ್ಳೂಟಿ ಮುನಿಕೆಂಪಣ್ಣ, ಜಿಲ್ಲಾ ಕಾರ್ಯದರ್ಶಿ ಭಕ್ತರಹಳ್ಳಿ ಪ್ರತೀಶ್, ತಾಲ್ಲೂಕು ಪ್ರಧಾನ ಕಾರ್ಯದರ್ಶಿ ಆನೂರು ಬಾಲಮುರಳಿ, ಮುನಿಯಪ್ಪ, ನಾರಾಯಣಸ್ವಾಮಿ, ಚಿಕ್ಕತೇಕಹಳ್ಳಿ ವೆಂಕಟರೆಡ್ಡಿ, ರಮೇಶ್, ಗುಡಿಹಳ್ಳಿ ನಾರಾಯಣಸ್ವಾಮಿ, ಮಂಜುನಾಥ್, ಅತ್ತಿಗಾನಹಳ್ಳಿ ಮುನೇಗೌಡ, ಗೊರಮಡಗು ಕೇಶವರೆಡ್ಡಿ ಹಾಜರಿದ್ದರು.
For Daily Updates WhatsApp ‘HI’ to 7406303366
Follow Chikkaballapur District News
Facebook: https://www.facebook.com/hicbpur
Twitter: https://twitter.com/hicbpur